ಮಾದಾರ ಚೆನ್ನಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು-ಜಿಎಸ್ಎಂ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮನುಷ್ಯ ದ್ವೇಷ, ಅಸೂಯೆ, ವೈಷ್ಯಮ್ಯ ಬಿಟ್ಟು ಪ್ರೀತಿ, ಶಾಂತಿಯನ್ನು ಕಲಿಯಬೇಕು. ಎಲ್ಲರೂ ಪ್ರೀತಿ ಹಂಚಬೇಕು. ಪ್ರೀತಿಯಿಂದ ಬಾಳಬೇಕು ಎಂಬ ವಚನಕಾರ ಮಾದಾರ ಚೆನ್ನಯ್ಯ ಸತ್ಯ ಸಂದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕಿದೆ ಎಂದು ಆದಿಜಾಂಬವ ಅಭಿವೃದ್ದಿ ನಿಗಮ ಮಂಡಳಿ ಅಧ್ಯಕ್ಷ ಜಿ .ಎಸ್.ಮಂಜುನಾಥ್ ಹೇಳಿದರು.

ಚಿತ್ರದುರ್ಗ ನಗರದ ಕೋಟೆ ನಾಡು ಬೌದ್ಧ ವಿಹಾರದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಆಯೋಜಿಸಿದ್ದ ವಚನಕಾರರ ಮಾದಾರ ಚೆನ್ನಯ್ಯ ಜಯಂತೋತ್ಸವ ಉದ್ಘಾಟಿಸಿ ಮಾತನಾಡಿದರು. ಬದಲಾವಣೆ ಜಗದ ನಿಯಮ. ಪ್ರಸ್ತುತ ಸಮಾಜದಲ್ಲಿ ಬುದ್ದ, ಬಸವ, ಚೆನ್ನಯ್ಯ ಅವರುಗಳು ಸಮಾಜಕ್ಕೆ ನೀಡಿರುವ ಸತ್ಯ ಸಂದೇಶಗಳನ್ನು ತಿಳಿಯಬೇಕಿದೆ.

- Advertisement - 

ಅಂಬೇಡ್ಕರ್ ಅವರ ಹೋರಾಟದಿಂದ ಸಮಾನತೆ, ಶಿಕ್ಷಣ ನಮಗೆ ದೊರಕಿದೆ. ಅದನ್ನು ಪಡೆದವರಲ್ಲೇ ಸಮಾನತೆ ಇಲ್ಲ. ಆದ್ದರಿಂದ ನಾವುಗಳು ಈ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು. ಅದನ್ನು ಬಿಟ್ಟು ನಮ್ಮ ವೈಯಕ್ತಿಕ ಕೋಪಕ್ಕೆ ಸಮುದಾಯ ಬಲಿ ಕೊಡುವುದು ಸರಿಯಲ್ಲ. ತಮ್ಮನ್ನು ತಾವು ತಿದ್ದಿಕೊಂಡು ಸನ್ಮಾರ್ಗದಲ್ಲಿ ಮುನ್ನೆಡೆದರೆ ಸಮುದಾಯ, ಸಮಾಜ, ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಮಂಜುನಾಥ್ ತಿಳಿಸಿದರು.

ಇಂದು ವಿದ್ಯಾವಂತರಲ್ಲಿಯೇ ಮೌಢ್ಯತೆ, ದ್ವೇಷ, ಅಸೂಯೆ ಹೆಚ್ಚಾಗುತ್ತಿದೆ. ಆದರೆ ಹಳ್ಳಿಯ ಅವಿದ್ಯಾವಂತರಲ್ಲಿ ಹೆಚ್ಚು ಪ್ರೀತಿ ಕಾಣುತ್ತಿದ್ದೇವೆ. ಆದ್ದರಿಂದ ಪ್ರೀತಿಸುವುದು ಕಲಿಯಿರಿ. ಮಹಾನ್ ನಾಯಕರ ವಿಚಾರಗಳನ್ನು ಅರಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಅವರು ಕರೆ ನೀಡಿದರು.

- Advertisement - 

ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಶಿವಾನಂದ ಕೆಳಗಿನಮನಿ ಮಾತನಾಡಿ ದಲಿತರ, ಸಾಮಾನ್ಯರ ಸ್ಥಿತಿ ಅಯೋಮಯವಾಗಿದ್ದ ಸಂಕೀರ್ಣ, ಮತಾಂತರ, ಯುದ್ದದ ತುಮಲಗಳಿಂದ ಕೂಡಿದ ಕಾಲಘಟ್ಟದಲ್ಲಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು ವಚನಕಾರ ಮಾದಾರ ಚೆನ್ನಯ್ಯ ಎಂದು ತಿಳಿಸಿದರು.

ಅಗಲೂರು, ಕಗ್ಗಲಪುರ ಹಾಗೂ ಜಗಲೂರು ಎಂಬ ಮೂರು ಶಾಸನಗಳು ಹಾಗೂ ಅನೇಕ ಕಥನಗಳಲ್ಲಿ ಚೆನ್ನಯ್ಯ ಅವರು ಶರಣ ಚಳುವಳಿಯ ಆದಿ ಪುರುಷರಾಗಿದ್ದಾರೆ. ಬಸವಣ್ಣನವರ ೩೦೦ ವಚನಗಳಲ್ಲಿ ೪೨ ಕಡೆಯಲ್ಲಿ ಚೆನ್ನಯ್ಯರ ಬಗ್ಗೆ ಉಲ್ಲೇಖಿಸಿದ್ದಾರೆ. ಅಲ್ಲದೇ ಮುತ್ತಯ್ಯ, ಅಪ್ಪಯ್ಯ ಎಂದು ಹೇಳುತ್ತಾರೆ. ಅಷ್ಟೇಯಲ್ಲದೇ ೨೦೦ಕ್ಕೂ ಹೆಚ್ಚು ವಚನಕಾರರು ನೆನೆಪಿಸುತ್ತಾರೆ. ಇಂತಹ ಮಾದಾರ ಚೆನ್ನಯ್ಯ ಅವರ ಹೆಸರಿನಲ್ಲಿ ಪೀಠ ಸ್ಥಾಪನೆ, ಜಯಂತಿ ಆಚರಣೆ, ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಹೊರಬರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಉಪನ್ಯಾಸಕ ಡಾ.ಬಿ.ಗುರುನಾಥ್ ಮಾತನಾಡಿ ವಚನ ಪರಂಪರೆ ಭಕ್ತಿಗೆ ಸೇರಿದ ಹಾಗೂ ಸಮ ಸಮಾಜದ ನಿರ್ಮಾಣಕ್ಕೆ ಕ್ರಾಂತಿ ನಡೆದ ಕಾಲಘಟ್ಟ. ಈ ಕಾಲದಲ್ಲಿ ಬದುಕಿದ ಮಾದಾರ ಚೆನ್ನಯ್ಯ ಕರಿಕಾಲ ಚೋಳನ ಆಸ್ಥಾನದಲ್ಲಿ ಕುದುರೆಗಳಿಗೆ ಮೇವು ಹಾಕಿಕೊಂಡು ಸಾಮಾನ್ಯ ಜೀವನ ಸಾಗಿಸುತ್ತಿದ್ದು, ಶಿವನನ್ನೇ ಕರೆಸಿಕೊಂಡು ಆತನ ಜೊತೆಯಲ್ಲಿ ಅಂಬಲಿ ಕುಡಿದ ಶರಣ. ಅವರ ವಚನಗಳು ಪ್ರತಿಯೊಬ್ಬರ ಮನೆಮಾತಾಗಲಿ. ಅವರ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೋಣ ಎಂದರು.

ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ ಅಧಿಕಾರ, ಹಣ ಗಳಿಸಿದ ಮೊದಲ ತಲೆಮಾರಿನಿಂದ ಸಾಮಾಜಿಕ ಬದ್ದತೆಯ ಕೊರತೆ ಹಾಗೂ ಸಮುದಾಯದ ಏಳಿಗೆಗೆ ಹುಟ್ಟಿದ ನೂರಾರ ಸಂಘಟನೆಗಳ ಸಂಸ್ಥಾಪಕರುಗಳು ಒಗ್ಗೂಡದೇ ಇರುವುದರಿಂದ ಜನಾಂಗಕ್ಕೆ ಶಕ್ತಿಯಾಗುವ ಬದಲು ಜನಾಂಗಕ್ಕೆ ಕಂಟಕವಾಗುತ್ತಿದೆ ಎಂದು ಎಚ್ಚರಿಸಿದರು.

ಗಂಗಾವತಿ ಉಪನ್ಯಾಸಕ ಹಾಗೂ ಬರಹಗಾರ ಡಾ.ಲಿಂಗಣ್ಣ ಜಂಗಮರಹಳ್ಳಿ ಉಪನ್ಯಾಸ ನೀಡಿದರು. ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಪಿ.ಪ್ರೇಮ್‌ನಾಥ್, ವಕೀಲ ಬೆನಕನಹಳ್ಳಿ ಚಂದ್ರಪ್ಪ, ಹಿರಿಯೂರು ನಗರಸಭೆ ಸದಸ್ಯ ಎಂ.ಡಿ.ಸಣ್ಣಪ್ಪ, ಡಿ.ಎಸ್.ಎಸ್ ರಾಜ್ಯ ಸಂಚಾಲಕ(ಮೀಸಲಾತಿ) ವೈ.ರಾಜಣ್ಣ, ಪ್ರಬುದ್ದಸೇನೆ ರಾಜ್ಯಾಧ್ಯಕ್ಷ ಅವಿನಾಶ್, ಎಐಬಿಎಸ್‌ಪಿ ಜಿಲ್ಲಾಧ್ಯಕ್ಷ ಪ್ರಕಾಶ್, ಬಿಎಸ್‌ಐ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿಕುಮಾರ್, ಉಪನ್ಯಾಸಕ ಈ.ನಾಗೇಂದ್ರಪ್ಪ, ಭೀಮನಕೆರೆ ಶಿವಮೂರ್ತಿ ಇತರರಿದ್ದರು.

 

Share This Article
error: Content is protected !!
";