ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹನ್ನೆರಡನೆಯ ಶತಮಾನದಲ್ಲಿ ಸರ್ವ ಸಮಾನತೆಯ ಅನುಭವ ಮಂಟಪ ಸ್ಥಾಪನೆ ಮಾಡದೆ ಹೋಗಿದ್ದರೆ ಅನೇಕ ಹಿಂದುಳಿದ ಶೋಷಿತ ಸಮುದಾಯಗಳಿಂದ ಬಂದವರು ಅಂದು ಎಲ್ಲಿ, ಹೇಗೆ ಯಾವ ರೀತಿ ಇದ್ದರು ಎಂಬುದನ್ನು ಇಂದಿನ 21ನೇ ಶತಮಾನದಲ್ಲಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ಬಸವಣ್ಣನವರು ತುಂಬಾ ಮುಂದಾಲೋಚನೆ ಮತ್ತು ದೂರದೃಷ್ಟಿಯಿಂದ ಸಾಮಾಜಿಕ ಸಮಾನತೆಯ ಕಲ್ಪನೆಯನ್ನು ಇಟ್ಟುಕೊಂಡು ಸ್ಥಾಪನೆ ಮಾಡಿದ ಅನುಭವ ಮಂಟಪಕ್ಕೆ ಮಾದಾರ ಚನ್ನಯ್ಯನಂತಹ ಶರಣರು ಅಲ್ಲಿಗೆ ಹೋಗಲು ಸದಾವಕಾಶವಾಯಿತು. ಹೀಗೆ ದೇಶದ ನಾನಾ ಭಾಗಗಳಿಂದ ಶರಣರ ಪರಿವಾರವೇ ಅಲ್ಲಿ ಸೇರಿತು ಎಂದು ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದರ ಚೆನ್ನಯ್ಯ ಮಹಾಸ್ವಾಮಿಗಳವರು ಇತಿಹಾಸ ಮೆಲುಕು ಹಾಕಿದರು.
ಅವರು ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮಹಾಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಏರ್ಪಡಿಸಿದ್ದ ಮಾದರ ಚೆನ್ನಯ್ಯನವರ ಜಯಂತಿಯ ಸಮ್ಮುಖ ವಹಿಸಿ ಅವರ ಕುರಿತಾಗಿ ಮಾತನಾಡುತ್ತಾ ಬಸವಣ್ಣನವರಿಗೆ ಅನುಭವ ಮಂಟಪ ನಿರ್ಮಿಸಲು ಒಂದು ಸದುದ್ದೇಶವಿತ್ತು.
ತಮಿಳುನಾಡಿನ ಕಂಚಿಯ ಕರಿಕಾಲ ಚೋಳನ ಮಹಾ ಸಂಸ್ಥಾನದಲ್ಲಿ ಕುದುರೆ ಸಾಕುವ ಕಾಯಕ ಮಾಡಿಕೊಂಡಿದ್ದ ಚೆನ್ನಯ್ಯನವರು ಗುಪ್ತ ಭಕ್ತಿಗೆ ಹೆಸರಾದವರು. ಈ ಭಕ್ತಿ ಒಮ್ಮೆ ಪರಾಮರ್ಶೆಗೊಂಡು ಅವರು ಕರಿಕಾಲ ಚೋಳರ ದೃಷ್ಟಿಗೆ ಬಿದ್ದು ಮಹಾನ್ ವ್ಯಕ್ತಿಗಳಂತೆ ಗೋಚರಿಸುತ್ತಾರೆ.
ಸಾಮಾನ್ಯ ವ್ಯಕ್ತಿ ಅಸಾಮಾನ್ಯರ ಜೊತೆ ಇರುವುದು ಬೇಡ ಎಂಬ ನಿರ್ಣಯ ಮಾಡಿ ಬಸವಕಲ್ಯಾಣದತ್ತ ಮುಖ ಮಾಡಿ ಅನುಭವ ಮಂಟಪ ಸೇರುತ್ತಾರೆ. ಅಂತಹ ಚರಿತ್ರೆ ಇರುವ ಅನುಭವ ಮಂಟಪ ಅಂದು ಎಲ್ಲರಿಗೂ ಮುಕ್ತ ಅವಕಾಶ ನೀಡಿದಂತೆ ಇಂದಿನ 21ನೇ ಶತಮಾನದಲ್ಲಿ ಚಿತ್ರದುರ್ಗದ ಐತಿಹಾಸಿಕ ಮುರುಘರಾಜೇಂದ್ರ ಬೃಹನ್ಮಠವೂ ಸಹ ಶೋಷಿತ ಸಮುದಾಯಗಳಿಗೆ ಆದ್ಯತೆ ನೀಡಿ ಅವಕಾಶ ಕಲ್ಪಿಸಿರುವುದು ಇದೊಂದು ಅಪರೂಪದ ಅವಿಸ್ಮರಣೀಯ ಇತಿಹಾಸ ಎಂದು ಶ್ಲಾಘಿಸಿದರು. ಚರಿತ್ರೆಯಿಂದ ನಾವು ಕಲಿಯುವುದು ಬಹಳವಿದೆ ಇತಿಹಾಸವನ್ನ ಮರೆಯಬಾರದೆಂದು ಕರೆ ನೀಡಿದರು.
ಸಮ್ಮುಖ ವಹಿಸಿದ್ದ ದಾವಣಗೆರೆ ವಿರಕ್ತ ಮಠದ ಡಾ.ಬಸವ ಪ್ರಭುಮಹಾಸ್ವಾಮಿ ಮಾತನಾಡಿ ಬಸವಣ್ಣನವರು ಒಂದು ಹೂ ಇದ್ದಂಗೆ. ಆ ಹೂವಿನ ಮಕರಂದವನ್ನು ಸವಿಯಲು ಶರಣರು ಬಂದರು. ಆ ಜೇನಿನ ಮುಖಾಂತರ ಸಮಾನತೆ, ಕಾಯಕ ಮತ್ತು ದಾಸೋಹ ಎನ್ನುವ ಸಿಹಿ ಸಿಕ್ಕಿತು.
ಅಂತಹ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವರ ಬದುಕು ಸಾರ್ಥಕ ಎನ್ನುವಂತಾಗಿದೆ. ಇಂತಹ ಪರಂಪರೆಯ ಬಳಿವಿ ಡಿದು ಬಂದಿರುವ ಚಿತ್ರದುರ್ಗದ ಜಗದ್ಗುರು ಶ್ರೀ ಮುರುಘರಾಜೇಂದ್ರ ಬೃಹನ್ಮಠವೂ ಸಮ ಸಮಾಜ ನಿರ್ಮಾಣಕ್ಕಾಗಿ ಸರ್ವ ಜನಾಂಗದವರಿಗೆ ದೀಕ್ಷೆ ನೀಡಿದ್ದು ಉಲ್ಲೇಖನೀಯ ಎಂದರು.
ವರ್ಗ, ವರ್ಣ, ಜಾತಿ ರಹಿತ ಸಮಾಜ ಕಟ್ಟಿದರು ಬಸವಣ್ಣ. ಆ ಕಟ್ಟಿದ ಸಮೂಹವೇ ಶರಣ ಸಂಕಲವಾಯಿತು. ಆ ಸಂಗಮಕ್ಕೆ ಕುಲಾತೀತವಾಗಿ ಎಲ್ಲರೂ ಬಂದರು. ಹಾಗೆ ಬಂದವರಲ್ಲಿ ಕುಲಕ್ಕೆ ತಿಲಕ ಎನ್ನುವ ಹೆಸರು ಪಡೆದು ಬದುಕಿದರು ನಮ್ಮ ಮಾದಾರ ಚೆನ್ನಯ್ಯ ಶಿವಶರಣರು ಎಂದು ನುಡಿದರು.
ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿ ಭಾವ ತುಂಬಿದಾಗ ಭಾಷೆ ಕ್ಷೀಣವಾಗುತ್ತದೆ. ಬಸವಣ್ಣ ಚೆನ್ನ ಚೆನ್ನ ಅನ್ನಬೇಕಾದರೆ ಚೆನ್ನಯ್ಯನವರ ಬಗ್ಗೆ ಅದೆಂತಹ ಭಾವವಿದ್ದಿರಬೇಕು. ಬಸವಣ್ಣನವರಲ್ಲಿ ಕರುಣೆ, ಪ್ರೀತಿಯಿಂದ ಕುರಿತಾದ ಅವರ ಭಾಷೆ ನಿರಹಂಕಾರವಾಗಿ ಕೆಲಸ ಮಾಡಿತು. ಸಾಂಸ್ಕೃತಿಕ ನಾಯಕ ಬಸವಣ್ಣ ಚೆನ್ನಯ್ಯನವರನ್ನು ಅಪ್ಪ ಅಂತ ಕರೆಯಬೇಕಾದರೆ ಚೆನ್ನಯ್ಯನವರ ವ್ಯಕ್ತಿತ್ವ ಆದೆಂತಹದಿರಬೇಕು .
ನಾವೀಗ ಒಂದು ವೃತ್ತಿಯನ್ನು ಜಾತಿ ಮಾಡಿ ಆ ಜಾತಿ ಮೇಲು, ಈ ಜಾತಿ ಕೀಳು ಎಂಬ ಸಂಕೋಲೆಯನ್ನು ಸೃಷ್ಟಿ ಮಾಡಿಕೊಂಡಿದ್ದೇವೆ .ಆದರೆ ನಮ್ಮಂತೆ ಬಾಳಿ ಬದುಕಿದ 12ನೇ ಶತಮಾನದಲ್ಲಿ ನಮ್ಮ ಹಾಗೆ ಬದುಕಿದ ಅವರ್ಯಾರು ಆ ಜಾತಿ ಈ ಜಾತಿ ಅನ್ನೋದನ್ನ ನೋಡಲೇ ಇಲ್ಲ.
ಆದರೆ ಇವತ್ತು ಮೀಸಲಾತಿ ಮತ್ತು ನಮ್ಮ ಅಸ್ತಿತ್ವಕ್ಕೋಸ್ಕರ ಏನೆಲ್ಲಾ ನಡೆಯುತ್ತಿದೆ.ಬಸವಣ್ಣನವರ ಕಾಲಕ್ಕೆ ಲಿಂಗಾಯತ ಅನ್ನೋದೊಂದು ತತ್ವ ಸಿದ್ಧಾಂತ ಮತ್ತು ಬದುಕಿದ ವಿಧಾನವಾಗಿತ್ತು. ಲಿಂಗಾಯಿತ ಪರಂಪರೆ ಮಠಗಳು ಅಂದರೆ ಸರ್ವ ವೃತ್ತಿಗಳನ್ನು ಗೌರವಿಸುವ ಸರ್ವ ಕಾಯಕಗಳನ್ನು ಸಮಾನ ದೃಷ್ಟಿಯಿಂದ ನೋಡುವ ಮೇರು ಪರ್ವತಗಳಾಗಿದ್ದು.
ಲಿಂಗಾಯಿತ ಧರ್ಮ, ಚಿತ್ರದುರ್ಗ ಶೂನ್ಯ ಪೀಠ ಪರಂಪರೆಯ ಬಗ್ಗೆ ನಮ್ಮ ಇಬ್ಬರು ಮಹಾಸ್ವಾಮಿಗಳವರು ಅರ್ಥಪೂರ್ಣವಾಗಿ ಮಾತನಾಡಿದ್ದಾರೆ .ನಾವು ಜಾತ್ಯಾತೀತವಾಗಿ ಬದುಕುವ ಮತ್ತು ಆಲೋಚಿಸುತ್ತಾ ಕೇವಲ ಬಸವಣ್ಣ ಅಕ್ಕಮಹಾದೇವಿ ಅಲ್ಲಮಪ್ರಭು ಕೆಲವರ ಜಯಂತಿಗಳನ್ನು, ಸ್ಮರಣೆಗಳನ್ನು ಮಾಡುವುದರ ಜೊತೆಗೆ 12ನೇ ಶತಮಾನದ ಕ್ರಾಂತಿಯ ಹಿನ್ನೆಲೆಯಲ್ಲಿ ಮತ್ತು ಅನುಭವ ಮಂಟಪದಲ್ಲಿ ಇದ್ದ ಎಲ್ಲ ಜಾತಿ ಜನಾಂಗಗಳ ಮಹನೀಯರುಗಳ ಸ್ಮರಣೆ ಮಾಡುವುದು ಅಗತ್ಯ. ಅಂತಹ ಕೆಲಸ ಮುಂದಿನ ದಿನಗಳಲ್ಲಿ ನಡೆಯಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿವಿಧ ಸಮಾಜಗಳ ಮುಖಂಡರಾದ ಶ್ರೀನಿವಾಸ್, ಸ್ವಾಮಿ, ಕಣಿವೆ ಮಾರಮ್ಮ ತಿಪ್ಪೇಸ್ವಾಮಿ ಸೇರಿದಂತೆ ವಕೀಲರಾದ ಉಮೇಶ್, ಬಸವರಾಜಕಟ್ಟಿ ನಿವೃತ್ತ ಪ್ರಾಚಾರ್ಯ ಎಸ್.ಎಂ .ಕೊಟ್ರೇಶಪ್ಪ ,ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ ,ಹಾರೂಗೇರಿಯ ಭಕ್ತರು ಎಸ್. ಜೆ.ಎಮ್ ವಿದ್ಯಾಪೀಠದ ಶಾಲಾ ಕಾಲೇಜುಗಳ ಪ್ರಾಚಾರ್ಯರು ಸಿಬ್ಬಂದಿಯವರಾದ ಎಸ್ .ವಿ .ರವಿಶಂಕರ್ ,ತಿಪ್ಪೇಸ್ವಾಮಿ , ಎಸ್. ಜೆ. ಎಂ . ಬ್ಯಾಂಕ್ ರಾಜಶೇಖರ್, ಡಾ.ಮಮತಾತಿಪ್ಪಣ್ಣ ,ಡಾ.ಆನಂದ್, ನವೀನ್ ಮಸ್ಕಲ್,ಕೆ.ಎಂ.ರಮೇಶ್,ರೈತರಾದ ನಿಂಗಪ್ಪ, ವಿದ್ಯಾರ್ಥಿಗಳು ಮತ್ತಿತರರು ಭಾಗವಹಿಸಿದ್ದರು.

