ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಸರಳತೆ ಮತ್ತು ಸಹಜತೆ…..ಸಾಮಾಜಿಕ ಕಳಕಳಿಯ ಹಿರಿಯ ಹಿತೈಷಿಯೊಬ್ಬರು ಕರೆ ಮಾಡಿದ್ದರು. ” ವಾರಕ್ಕೆ 70 ಗಂಟೆ ಕೆಲಸವನ್ನು ಕಡ್ಡಾಯಗೊಳಿಸಬೇಕು. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ಮಾತನ್ನು ನಾನು ಯಾವ ಕಾರಣಕ್ಕೂ ಹಿಂತೆಗೆದುಕೊಳ್ಳುವುದಿಲ್ಲ ” ಎಂಬ ಇನ್ಫೋಸಿಸ್ ನಾರಾಯಣ ಮೂರ್ತಿಯವರ ಮಾತುಗಳು ಮತ್ತು ಇತ್ತೀಚೆಗೆ ತಾನೇ ಅವರು ಬೆಂಗಳೂರಿನ ಯು ಬಿ ಸಿಟಿಯಲ್ಲಿ 50 ಕೋಟಿಯ ಮತ್ತೊಂದು ಮನೆಯನ್ನು ಅದೇ ಜಾಗದಲ್ಲಿ ತೆಗೆದುಕೊಂಡಿದ್ದಾರೆ. ಇದನ್ನು ಯಾವ ರೀತಿ ಅರ್ಥೈಸಬೇಕು ಎಂದು ಕೇಳಿದರು.
ನಾರಾಯಣ ಮೂರ್ತಿಯವರು ಭಾರತದ ಕೆಲವೇ ಶ್ರೀಮಂತರಲ್ಲಿ ಒಬ್ಬರು. ಅವರ ಬಳಿ ಕೇವಲ ಯುಬಿ ಸಿಟಿಯ, ಹಿಂದೆ ಅವರ ಪತ್ನಿ ಖರೀದಿಸಿದ್ದ ಮನೆಯೂ ಸೇರಿ 2 ಮನೆಗಳು ಮಾತ್ರವಲ್ಲ ಇಡೀ ಯು ಬಿ ಸಿಟಿಯನ್ನೇ ಕೊಳ್ಳುವಷ್ಟು ಹಣವಿದೆ. ಅಲ್ಲದೆ ದೇಶದ ಇತರ ಭಾಗಗಳಲ್ಲೂ ಅವರಿಗೆ ಇನ್ನೂ ಕೆಲವು ಮನೆಗಳು ಇರಬಹುದು. ಆದ್ದರಿಂದ ಇದೇನು ದೊಡ್ಡ ವಿಷಯವೇನು ಅಲ್ಲ ಎಂದು ಹೇಳಿದೆ. ಸಾಮಾನ್ಯವಾಗಿ ಬಡವರ ಪಕ್ಷಪಾತಿಯಾದ ನಾನು ಶ್ರೀಮಂತರ ಈ ರೀತಿಯ ಶ್ರೀಮಂತಿಕೆಯ ಪ್ರದರ್ಶನದ ಬಗ್ಗೆ ಅಸೂಯೆ ಮತ್ತು ಆಕ್ರೋಶವನ್ನು ಹೊಂದಿದ್ದೇನೆ. ಈ ವಿಷಯದಲ್ಲಿ ನನಗೆ ಸಂಯಮದ ಅವಶ್ಯಕತೆ ಇದೆ. ಆದ್ದರಿಂದ ಆ ಸುದ್ದಿಯನ್ನು ನಿರ್ಲಕ್ಷಿಸಿದ್ದೆ.
ಸುಮಾರು 78 ವರ್ಷ ವಯಸ್ಸಿನ ನಾರಾಯಣ ಮೂರ್ತಿಯವರಂತ ಹಿರಿಯ ವ್ಯಕ್ತಿ, ದೇಶದ ಮೌಲ್ಯಗಳನ್ನು,, ಸಂಸ್ಕೃತಿಯನ್ನು ಸದಾ ಕಾಲ ಮಾತನಾಡುವ ವ್ಯಕ್ತಿ, ದೇಶದ ಅಭಿವೃದ್ಧಿಯನ್ನು ಸದಾ ಚಿಂತಿಸುವ ವ್ಯಕ್ತಿ, ಈ ಸಂಧ್ಯಾಕಾಲದಲ್ಲಿ ಒಂದಷ್ಟು ಸರಳತೆಯನ್ನು ಪಾಲಿಸಿ ಇತರರಿಗೆ ಆದರ್ಶ ಆಗಬಹುದಿತ್ತಲ್ಲವೇ. ವಾರಕ್ಕೆ 70 ಗಂಟೆ ದುಡಿಯುವ ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕಾದವರು ಅದರೊಂದಿಗೆ ಸರಳತೆಯನ್ನು ಸೇರಿಸಿಕೊಳ್ಳಬೇಕಲ್ಲವೇ ಎಂಬುದು ಆ ಹಿರಿಯರ ಬಯಕೆಯಾಗಿತ್ತು.
ಅಷ್ಟು ದೊಡ್ಡ, ವಿಶಾಲ, ವೈಭವೋಪೇತ ಬಂಗಲೆಯಲ್ಲಿ ಈ ಹಿರಿಯ ವಯಸ್ಸಿನಲ್ಲಿ ವಾಸಿಸುತ್ತಾ ಸಾಮಾನ್ಯ ಜನರಿಗೆ ವಾರಕ್ಕೆ 70 ಗಂಟೆಗಳಷ್ಟು ದುಡಿಯಿರಿ ಎಂದು ಹೇಳುವುದು ಮತ್ತು ಅನೇಕ ಪ್ರತಿಭಾವಂತ ಫ್ರೆಶರ್ಸ್ ಉದ್ಯೋಗಿಗಳಿಗೆ ಅತ್ಯಂತ ಕಡಿಮೆ ಸಂಬಳ ನೀಡಿ ದುಡಿಸಿಕೊಳ್ಳುತ್ತಿರುವುದು ಅಹಂಕಾರ ಮತ್ತು ಕೃತಕ ಮುಖವಾಡದ ಸೋಗಲಾಡಿತನವಲ್ಲವೇ ಎಂಬುದು ಅವರ ಅಭಿಪ್ರಾಯವಾಗಿತ್ತು. ಬಹುಶಃ ಹಿರಿಯರು ನುಡಿದಂತೆ ನಡೆಯುವ ಉತ್ತರ ಕರ್ನಾಟಕದ ಶರಣ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು ಇರಬೇಕು.
ಸಾಮಾನ್ಯವಾಗಿ ಅವರ ಪತ್ನಿ ಶ್ರೀಮತಿ ಸುಧಾ ಮೂರ್ತಿ ಅವರ ಬಗ್ಗೆ, ಅವರ ಸರಳತೆಯ ಬಗ್ಗೆ, ಸಾಮಾನ್ಯ ಜನ ಸಾಕಷ್ಟು ಅಭಿಮಾನ, ಗೌರವವನ್ನು ಹೊಂದಿದ್ದಾರೆ. ಆ ಹಿನ್ನೆಲೆಯಲ್ಲಿ ಸರಳತೆಯ ಬಗ್ಗೆ ಒಂದು ಜಿಜ್ಞಾಸೆ…..
ಸರಳತೆಯನ್ನು ಸೃಷ್ಟಿಯ ಮೂಲದಿಂದ ಯೋಚಿಸಬೇಕೇ, ಧರ್ಮದ ಮೂಲದಿಂದ ಯೋಚಿಸಬೇಕೇ, ಕಾನೂನಿನ ಮೂಲದಿಂದ ಯೋಚಿಸಬೇಕೇ, ನಾಗರಿಕ ಸಮಾಜದ ದೃಷ್ಟಿಕೋನದಿಂದ ಯೋಚಿಸಬೇಕೇ, ಈ ಕ್ಷಣದ ವಾಸ್ತವ ಬದುಕಿನ ಜೀವನ ಶೈಲಿಯಿಂದ ಯೋಚಿಸಬೇಕೇ, ಬೇರೆಯವರೊಂದಿಗೆ ಹೋಲಿಕೆಯ ಮೂಲಕ ಸರಳತೆಯನ್ನು ನಿರ್ಧರಿಸಬೇಕೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು.
ಅದನ್ನು ಸಾಂಕೇತಿಕವಾಗಿ ಈ ಮಹನೀಯರ ಸರಳತೆಯನ್ನು ಉದಾಹರಣೆಗೆ ತೆಗೆದುಕೊಂಡರೆ, ಸಾರ್ವಜನಿಕ ಬದುಕಿನ ಸರಳತೆ ಎಂದರೇನು ?
ರಾಜ ಪ್ರಭುತ್ವವನ್ನು ತೊರೆದು ಬದುಕಿನ ತೊಳಲಾಟಗಳಿಗೆ ಉತ್ತರ ಹುಡುಕುತ್ತಾ, ಕಾಡು ಮೇಡು ಅಲೆಯುತ್ತಾ, ಭಿಕ್ಷೆ ಬೇಡಿ ಸಿಕ್ಕಿದ್ದನ್ನು ತಿನ್ನುತ್ತಾ ಜೀವನ ಸಾಗಿಸಿದ ಗೌತಮ ಬುದ್ದ ನಿಜವಾದ ಸರಳ ಜೀವಿಯೇ…..
ಮಧ್ಯಮ ವರ್ಗದ ಮನೆತನದಲ್ಲಿ ಜನಿಸಿ, ಆ ಕಾಲಕ್ಕೇ ವಿದೇಶದಲ್ಲಿ ಬ್ಯಾರಿಸ್ಟರ್ ಓದಿ ಇಡೀ ಭಾರತ ದೇಶದ ನಾಯಕನಾಗಿ ಏನೇನೋ ಅನುಭವಿಸಬಹುದಾಗಿದ್ದೂ ಎಲ್ಲವನ್ನೂ ತಿರಸ್ಕರಿಸಿ, ಸ್ವತಃ ಚರಕದಿಂದ ತಯಾರಿಸಿದ ಧೋತಿಯನ್ನು ಧರಿಸಿ ಕನಿಷ್ಠ ಆಹಾರ ಸೇವಿಸುತ್ತಾ, ಪ್ರತಿಭಟನೆಯ ಅಂಗವಾಗಿ ಸದಾ ಉಪವಾಸ ಮಾಡುತ್ತಾ, ಉಪವಾಸಗಳ ಸರದಾರನಾದ ಮತ್ತು ಬಹಳಷ್ಟು ಅಧಿಕಾರಗಳನ್ನು ತಿರಸ್ಕರಿಸಿದ ಬರಿಮೈ ಫಕೀರ ಮೋಹನ್ ದಾಸ್ ಗಾಂಧಿ ಎಂಬ ಮಹಾತ್ಮ ಗಾಂಧಿ ನಿಜವಾದ ಸರಳ ಜೀವಿಯೇ……
ಪ್ರಧಾನಿಯಾಗಿದ್ದರೂ ಸಂಬಳದ ಮೇಲೆಯೇ ಅವಲಂಬಿಸಿ, ಅವರ ಕುಟುಂಬವೂ ಕೂಡ ಅದೇ ರೀತಿ ಜೀವನ ಸಾಗಿಸಿದ ಮತ್ತು ಆಧುನಿಕ ಕಾಲದ ಪ್ರಲೋಭನೆಗೆ ಒಳಗಾಗದ ಲಾಲ್ ಬಹಾದ್ದೂರ್ ಶಾಸ್ತ್ರಿ ಮತ್ತು ಮನಮೋಹನ್ ಸಿಂಗ್ ನಿಜವಾದ ಸರಳ ವ್ಯಕ್ತಿಗಳೇ…..
ಭಾರತದಂತ ಬೃಹತ್ ರಾಷ್ಟ್ರದ ಅಧ್ಯಕ್ಷರಾಗಿಯೂ, ವಿಶ್ವದ ಬಹುದೊಡ್ಡ ವಿಜ್ಞಾನಿಯಾಗಿಯೂ, ಒಂದು ಸೂಟ್ ಕೇಸ್ ನಲ್ಲಿ ಸಾಗಿಸಬಹುದಾದ ವಸ್ತುಗಳ ಕುಟುಂಬದ ಒಡೆಯನಾಗಿ ಜೀವನ ಸಾಗಿಸಿದ ಮಾಜಿ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ನಿಜವಾದ ಸರಳ ಜೀವಿಯೇ……
ಸುಮಾರು 2೦ ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಯೂ ಯಾವುದೇ ಹಣ ಆಸ್ತಿ ಮಾಡದೆ, ಮಾಜಿಯಾದ ಬಳಿಕ ಪಕ್ಷದ ಕಚೇರಿಯ ಒಂದು ಸಣ್ಣ ಕೊಠಡಿಯಲ್ಲಿ ವಾಸಿಸಲು ಜಾಗ ಆಯ್ಕೆ ಮಾಡಿಕೊಂಡ ತ್ರಿಪುರಾದ ಮಾಜಿ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸರಳ ವ್ಯಕ್ತಿಯೇ……
ಒಂದಷ್ಟು ಅಭಿಮಾನಿಗಳು ಹೇಳುವಂತೆ ಭಾರತದ ಅತ್ಯಂತ ಶ್ರೀಮಂತ ಸ್ನೇಹಿತರನ್ನು ಹೊಂದಿಯೂ, ಮನಸ್ಸು ಮಾಡಿದಲ್ಲಿ ಆಧುನಿಕ ಬದುಕಿನ ಎಲ್ಲಾ ಸುಖ ಸಂತೋಷಗಳನ್ನು ಅನುಭವಿಸುವಷ್ಟು ಅಧಿಕಾರ ಅಂತಸ್ತು ಹೊಂದಿಯೂ, ಅದನ್ನು ತಿರಸ್ಕರಿಸಿ ಸಾಮಾನ್ಯ ಜೀವನ ಕ್ರಮ ಅನುಸರಿಸುತ್ತಿರುವ ಭಾರತದ ಈಗಿನ ಪ್ರಧಾನಿ ಶ್ರೀ ನರೇಂದ್ರ ಮೋದಿ ನಿಜವಾದ ಸರಳ ವ್ಯಕ್ತಿಯೇ……
ಅಥವಾ…….ತಿರಸ್ಕರಿಸಲು ಸಹ ಏನೂ ಇಲ್ಲದೆ, ಊಟ, ಬಟ್ಟೆ ಮತ್ತು ರಾತ್ರಿಯ ಆಸರೆಗಾಗಿ ಜೀವನ ಪರ್ಯಂತ ಸಂಘರ್ಷದಲ್ಲಿ ತೊಡಗಿ, ಆಗಾಗ ಒಳ್ಳೆಯ ಊಟ, ಬಟ್ಟೆ, ಮನೆಯ ಕನಸು ಕಾಣುತ್ತಾ ಮೂಲಭೂತ ಅವಶ್ಯಕತೆಗಳೇ ಅನಿವಾರ್ಯವಾಗಿರುವಂತ ಜೀವನ ಸಾಗಿಸುವ ಅತ್ಯಂತ ಕಡು ಬಡವರು ನಿಜವಾದ ಸರಳ ವ್ಯಕ್ತಿಗಳೇ……
ಎಲ್ಲವೂ ಇದ್ದು ಎಲ್ಲವನ್ನೂ ತಿರಸ್ಕರಿಸುವ ಮನೋಭಾವದ ವ್ಯಕ್ತಿಗಳನ್ನು ಸರಳತೆಯ ಸಾಂಕೇತಿಕವಾಗಿ ನೋಡಬಹುದೇ…..ವಿಶಾಲವಾದ – ಆಳವಾದ – ವಿಭಿನ್ನ ದೃಷ್ಟಿಕೋನದ ಚರ್ಚೆಗೆ ಈ ವಿಷಯ ವಸ್ತುವಾಗಬಲ್ಲದು.
ಆದರೆ, ಇವರಲ್ಲಿ ಬುದ್ದ ಮಾತ್ರ ಭಿಕ್ಷಾಟನೆಯನ್ನು ಒಪ್ಪಿಕೊಂಡರು ಮತ್ತು ಅಪ್ಪಿಕೊಂಡರು, ಆದರೂ ಅವರಿಗೆ ಅದನ್ನು ಗೆಲ್ಲಲು ಅರಿವಿನ ಬೆಳಕಿತ್ತು. ಅದು ಸರಳತೆಯಿಂದ ಅವರನ್ನು ದೂರವಿಟ್ಟಿದೆ.
ಗಾಂಧಿ ಉದ್ದೇಶ ಪೂರ್ವಕವಾಗಿ ಸರಳತೆ ಮೈಗೂಡಿಸಿಕೊಂಡವರು. ಅದು ಅವರನ್ನು ನಿಜ ಸರಳತೆಯಿಂದ ದೂರವಿರಿಸಿದೆ. ಇನ್ನು ಉಳಿದವರು ಅಧ್ಯಕ್ಷ, ಪ್ರಧಾನಿ, ಮುಖ್ಯಮಂತ್ರಿ ಹುದ್ದೆಯಲ್ಲಿದ್ದವರಾಗಿದ್ದುದರಿಂದ ವೈಯಕ್ತಿಕವಾಗಿ ಒಂದಷ್ಟು ಸಣ್ಣ ಸರಳತೆ ಇದ್ದಿರಬಹುದಾದರೂ ಶಿಷ್ಟಾಚಾರದ ದೃಷ್ಟಿಯಿಂದ ಅವರೂ ಕೂಡ ಸರಳತೆಯಿಂದ ಬಹುದೂರ. ಇವರೆಲ್ಲರೂ ಮೇಲ್ನೋಟಕ್ಕೆ ಸರಳತೆ ಅನುಸರಿಸಿದರೂ ಮಾನಸಿಕವಾಗಿ ಖಂಡಿತ ಸುಭದ್ರ ಮನಸ್ಥಿತಿಯ ಸಂಪೂರ್ಣ ಸುರಕ್ಷಿತರು ಮತ್ತು ಸುಶಿಕ್ಷಿತರು.
ಹಾಗಾದರೆ ಬಡವನೇ ನಿಜವಾದ ಸರಳ ವ್ಯಕ್ತಿಯೇ. ಖಂಡಿತ ಅಲ್ಲ. ಆತ ಅತ್ಯಂತ ಸಂಕೀರ್ಣ ಮತ್ತು ಸಂಘರ್ಷದ ಬದುಕಿನ ಬಡವ ಮಾತ್ರ ಮತ್ತು ಅದು ಅವರ ಅನಿವಾರ್ಯತೆ. ಸರಳತೆ ಅವನಿಂದಲೂ ದೂರ.
ಹಾಗಾದರೆ ಮತ್ತೆ ಅದೇ ಪ್ರಶ್ನೆ, ಸರಳತೆ ಎಂದರೇನು ? ಬಹುಶಃ ಬದುಕಿನ ಎಲ್ಲಾ ನಿರೀಕ್ಷೆಗಳನ್ನು ಮೀರಿದ, ಯಾವುದೇ ಪ್ರತಿಫಲಾಕ್ಷೆ ಇಲ್ಲದ ಬುದ್ದನಿಗೆ ಅಂತಿಮ ದಿನಗಳಲ್ಲಿ ಉಂಟಾದ ಜ್ಞಾನೋದಯವೇ ಸರಳತೆ ಇರಬೇಕು. ಸಾಧ್ಯವಾದಷ್ಟು ಎಲ್ಲಾ ಭವ ಬಂಧನಗಳಿಂದ ಮುಕ್ತವಾಗಿ ಉಂಟಾಗುವ ಸ್ಥಿತಪ್ರಜ್ಞತೆಯ ಮನಸ್ಥಿತಿ. ಅದನ್ನೇ ಮೋಕ್ಷ ಎಂದು ಕರೆಯುವುದು ಎನಿಸುತ್ತದೆ. ಬಹುಶಃ ಅದೊಂದು ಮಾನಸಿಕ ಸ್ಥಿತಿ.ಯೋಚಿಸಿದಷ್ಟೂ ಆಳಕ್ಕೆ ಇಳಿಯುತ್ತಿದೆ.
ಇವೆಲ್ಲ ದೃಷ್ಟಿಗಳಿಂದ ನೋಡಿದಾಗ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಬದುಕು ನಾವು ಭಾವಿಸಿದಂತೆ ಮೇಲ್ನೋಟದ ಸರಳತೆಯಂತೆ ಕಂಡರೂ ಅವರದು ಪಕ್ಕಾ ಬಂಡವಾಳ ಶಾಹಿ ವ್ಯವಸ್ಥೆಯ ಸಂಪೂರ್ಣ ಲಾಭ ಪಡೆದ ಒಂದು ಶ್ರೀಮಂತ ಕುಟುಂಬ. ಅವರೇನು ಸರಳ ಜೀವಿಗಳಲ್ಲ. ಕಡಿಮೆ ಪ್ರಮಾಣದ ಮಾನವೀಯ ಗುಣಗಳನ್ನು ಹೊಂದಿ, ಜನರನ್ನು ದೇಶದ ಅಭಿವೃದ್ಧಿಯ ಮುಖವಾಡದಲ್ಲಿ ಹೆಚ್ಚು ದುಡಿಸಿಕೊಂಡು ಅಪಾರ ಸಂಪತ್ತು ವೃದ್ಧಿಸುತ್ತಾ, ದೇಶ ವಿದೇಶಗಳ ದೊಡ್ಡವರೊಂದಿಗೆ ಸಂಪರ್ಕ ಇಟ್ಟುಕೊಂಡು ಪ್ರಚಾರ – ಪ್ರಶಸ್ತಿ ಪಡೆಯುತ್ತಾ, ತಮ್ಮ ಬದುಕನ್ನು ಸುಖವಾಗಿ ಸವಿಯುವವರು. ಅದು ಈ ವ್ಯವಸ್ಥೆಯಲ್ಲಿ ಅವರ ಆಯ್ಕೆ, ಹಕ್ಕು, ಸ್ವಾತಂತ್ರ್ಯ ಮತ್ತು ಅದೃಷ್ಟ.
ಹಾಗೆಂದು ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಬೇಕಿಲ್ಲ. ಆದರೆ ಈ ದೇಶದ ಅಭಿವೃದ್ಧಿಗೆ ನಿಜವಾದ ಮಾರಕವಾದ ಭ್ರಷ್ಟಾಚಾರ, ಜಾತಿ ವ್ಯವಸ್ಥೆ, ಮೂಡನಂಬಿಕೆ, ಶ್ರೀಮಂತಿಕೆಯ ವೈಭವೀಕರಣ, ಕೆಟ್ಟ ರಾಜಕಾರಣ ಮುಂತಾದ ವಿಷಯಗಳ ಬಗ್ಗೆ ಅವರು ಮತ್ತಷ್ಟು ಮಾತನಾಡದೆ ತಮ್ಮ ಸ್ವಾರ್ಥ ಹಿತಾಸಕ್ತಿಯ ಕಾಯ್ದುಕೊಳ್ಳುವಿಕೆಯ ಬಗ್ಗೆ ನಮ್ಮದೊಂದಿಷ್ಟು ತಕರಾರು….. ನಿಮ್ಮ ಅಭಿಪ್ರಾಯಗಳನ್ನು ಸ್ವಾಗತಿಸುತ್ತಾ……..
ಲೇಖನ-ವಿವೇಕಾನಂದ. ಎಚ್. ಕೆ.9844013068…….