ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿದ್ಯಾರ್ಥಿ ದೆಸೆಯಲ್ಲಿಯೇ ಕೃಷ್ಣ ಅವರು ಅಮೆರಿಕದ ಅಧ್ಯಕ್ಷರ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ನೆನಪಿನ ಬುತ್ತಿ.
ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಅಮೆರಿಕಾಗೆ ಹೋಗಿ ಕಾನೂನು ವಿಭಾಗದ ಪದವಿ ಓದುತ್ತಿದ್ದ ಆ ದಿನಗಳಲ್ಲಿ ಅಮೇರಿಕ ದೇಶದ ಪ್ರಜಾಪ್ರಭುತ್ವದ ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಮುನ್ನೆಲೆಯಲ್ಲಿತ್ತು.
ಜಾನ್ ಕೆನಡಿ ಅವರು ಚುನಾವಣೆಗೆ ಒಂದು ಪಕ್ಷದಿಂದ ಸ್ಪರ್ಧಿಸಿದ್ದರು(ಪಕ್ಷದ ಮಾಹಿತಿ ನನಗೆ ನೆನಪಿಲ್ಲ).
ಆ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳಲು ಕಾನೂನು ವಿದ್ಯಾರ್ಥಿಯಾಗಿದ್ದ ಕೃಷ್ಣ ಅವರಿಗೆ ಒಂದು ಮಹತ್ವದ ಅವಕಾಶ ಸಿಕ್ಕಿತು. ಅಮೇರಿಕಾದಲ್ಲಿದ್ದ ಭಾರತ ದೇಶದ ಮತದಾರ ಪ್ರಜೆಗಳಿಗೆ ಕೆನಡಿ ಪರವಾಗಿ ಮತದಾನ ಮಾಡಲು ಕೃಷ್ಣ ಅವರು ಪ್ರಚಾರದಲ್ಲಿ ಮನವಿ ಮಾಡಿದರು. ಈ ಚುನಾವಣೆಯಲ್ಲಿ ಕೆನಡಿ ಗೆಲುವು ಕಂಡರು.
ಅಮೇರಿಕದ ಅಧ್ಯಕ್ಷರಾದರು. ಈ ಎಲ್ಲಾ ಪ್ರಕ್ರಿಯೆಗಳ ನಂತರ ಕೃಷ್ಣ ಅವರನ್ನು ಅಮೆರಿಕದ ಆಡಳಿತ ಕೇಂದ್ರವಾದ ವೈಟ್ ಹೌಸ್ ಗೆ ಕರೆಸಿಕೊಂಡ ಕೆನಡಿ ಅವರು ಕೃಷ್ಣ ಅವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿದ್ದಾರೆ. ಕಳೆದ ವರ್ಷ ಒಂದು ಸುದ್ದಿವಾಹಿನಿಯ ಸಂದರ್ಶನದ ಪೀಠಿಕೆಯಲ್ಲಿ ಕೃಷ್ಣ ಅವರು ಪ್ರಶಸ್ತಿ ಪತ್ರವನ್ನು ಸುದ್ದಿವಾಹಿನಿಯ ಸಂದರ್ಶಕರಿಗೆ ತೋರಿಸಿ ಅಮೆರಿಕದಲ್ಲಿನ ವಿದ್ಯಾರ್ಥಿ ಜೀವನವನ್ನು ಸಂತಸದಲ್ಲಿ ಮೆಲುಕಾಕಿದರು. 1968ರಲ್ಲಿ ಮಂಡ್ಯ ಲೋಕಸಭೆಗೆ ಮರು ಚುನಾವಣೆ ನಡೆಯುತ್ತದೆ. ಆ ಸಂದರ್ಭಕ್ಕೆ ಮಂಡ್ಯ ಜಿಲ್ಲೆಯ ಕೆಲವು ಮುಖಂಡರುಗಳು ಹಾಗೂ ಕೆಲವು ಹಿತೈಷಿಗಳು ಕೃಷ್ಣ ಅವರನ್ನು ಸೋಷಲಿಸ್ಟ್ ಪಕ್ಷದಿಂದ ಒತ್ತಾಯ ಪೂರ್ವಕವಾಗಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಮಾಡಿದರು.
ಆ ಸಮಯದ ಚುನಾವಣೆ ಬಹಳಷ್ಟು ಜಿದ್ದಾಜಿದ್ದಿನಿಂದ ದೊಡ್ಡದಾಗಿ ನಡೆದಿದೆ. ಕೃಷ್ಣ ಅವರ ಪರವಾದ ಪ್ರಚಾರದಲ್ಲಿ ಅಮೇರಿಕದ ಜಾನ್ ಕೆನಡಿ ಗೆಲುವಿಗೆ ಕೃಷ್ಣ ಅವರ ಪಾತ್ರದ ವಿಚಾರ ದೊಡ್ಡದಾಗಿ ಸುದ್ದಿಮಾಡಿತ್ತು. ಆ ಕಾರಣಕ್ಕೆ ಕೃಷ್ಣ ಅವರು ಆ ಚುನಾವಣೆಯಲ್ಲಿ 60 ಸಾವಿರ ಮತಗಳ ಅಂತರದಿಂದ ಗೆಲುವು ಕಂಡರು. ಮನುಷ್ಯತ್ವದ ಪ್ರಾಮಾಣಿಕ ಸಹಾಯ ವ್ಯಕ್ತಿತ್ವದ ಕೈಗನ್ನಡಿಯಂತೆ ಎಂಬುದಕ್ಕೆ ಸಾಕ್ಷಿ ಗುಡ್ಡೆ ಇದಾಗಿದೆ. ಇದು ಕಥೆಯಲ್ಲ ವಾಸ್ತವದ ಪ್ರತಿರೂಪ.
ಕಿರು ಮಾಹಿತಿ:ರಘು ಗೌಡ