ಅಧಿಕಾರಿಯಾಗಿ ಅವರ ಜೀವ ಉಳಿದಿದ್ದೆ ಹೆಚ್ಚು!?…

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವಾಮೀಜಿಯಾಗಿ ದೀಕ್ಷೆ ಪಡೆದ ಎಡಿಸಿ ಡಾ.ನಾಗರಾಜ್ ಇನ್ನು ನಿಶ್ಚಲನಂದನಾಥ ಸ್ವಾಮೀಜಿಯಾಗಿ ಕರೆಯಲ್ಪಡುತ್ತಾರೆ.
ಅಂದು ಆಹ್ವಾನ ಪತ್ರಿಕೆ ಹಿಡಿದು ಡಾ.ಎಚ್.ಎಲ್.ನಾಗರಾಜ್ ಅವರು ಆಫೀಸ್‌ಗೆ ಬಂದಿದ್ದರು. ನೀವು ಕಾರ್ಯಕ್ರಮಕ್ಕೆ ಬರಲೇಬೇಕು ಎಂದು ಹೇಳಿ ಆಹ್ವಾನ ಪತ್ರಿಕೆಯನ್ನು ಕೈಯಲ್ಲಿಟ್ಟು ಹೋದರು. ಆಹ್ವಾನಿತ ಅತಿಥಿಗಳ ಪಟ್ಟಿಯಲ್ಲಿ ನನ್ನ ಹೆಸರನ್ನು ಅಭಿಮಾನದಿಂದ ಹಾಕಿಸಿದ್ದರು.

ಅದಕ್ಕೂ ಕೆಲ ದಿನಗಳ ಮುನ್ನ ಪೋನ್ ಮಾಡಿ, ನಾನು ಸ್ವಾಮೀಜಿಯಾಗಲು ದೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ. ಅಂದು ನೀವು ಬರಬೇಕು ಎಂದರು. ಹಾಗೆಲ್ಲ ಬೇಡ ಅನ್ನಿಸುತ್ತೆ. ಮತ್ತೊಮ್ಮೆ ಯೋಚಿಸಿ ಎಂದೆ. ಮತ್ತೆ ಪೋನ್ ಮಾಡಿದಾಗಲೂ ಇಲ್ಲ. ನನ್ನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಖಡಕ್ಕಾಗಿಯೇ ಹೇಳಿದರು. ಅಷ್ಟು ಹೊತ್ತಿಗೆ ಅವರು ನಿರ್ಧಾರ ಮಾಡಿಯೇ ಬಿಟ್ಟಿದ್ದರು.

ನಾಗಮಂಗಲದ ತಹಶೀಲ್ದಾರ್ ಆಗಿದ್ದಾಗ 2011ರಲ್ಲಿ ಒಮ್ಮೆ ಆದಿಚುಂಚನಗಿರಿ ಪೀಠದ ಬಾಲಗಂಗಾಧರನಾಥ ಸ್ವಾಮೀಜಿ ಅವರ ಬಳಿ ದೀಕ್ಷೆ ತೆಗೆದುಕೊಂಡು ಸ್ವಾಮೀಜಿ ಆಗಲು ಹೋಗಿದ್ದಾಗಲೂ ಜನರು ಅವರನ್ನು ತಡೆದಿದ್ದರು. ನಿಮ್ಮಂತ ಪ್ರಾಮಾಣಿಕ ಅಧಿಕಾರಿ ನಮಗೆ ಬೇಕು. ನೀವು ಸರ್ಕಾರಿ ಸೇವೆಯಲ್ಲಿಯೇ ಮುಂದುವರಿಯಬೇಕು ಎಂದು ಆದಿಚುಂಚನಗಿರಿಗೆ ಬಂದು ಜನರೇ ಗಲಾಟೆ ಮಾಡಿದ್ದರು. ಆಗ ನಿರ್ಧಾರ ಬದಲಿಸಿ ಮತ್ತೆ ಸರ್ಕಾರಿ ಸೇವೆಗೆ ಮರಳಿದ್ದ ನಾಗರಾಜ್ ಅವರಿಗೆ ಮತ್ತೆ ಸನ್ಯಾಸಿಯಾಗುವ ತುಡಿತ ತಪ್ಪಲಿಲ್ಲ.

ಅಧಿಕಾರಿಯಾಗಿದ್ದವರು ಸ್ವಾಮೀಜಿ ಆಗುತ್ತಾರೆ ಎನ್ನುವುದೇ ಸೋಜಿಗ. ಯಾಕೆಂದರೆ ಸ್ವಾಮೀಜಿ ಅಂದರೆ ಸರ್ವ ಸಂಗ ಪರಿತ್ಯಾಗಿಯಾಗಿ ಧ್ಯಾನಸ್ಥ ಸ್ಥಿತಿಯಲ್ಲಿ ಎಲ್ಲವನ್ನೂ ನೋಡುವ ಮತ್ತು ಹಾಗೇಯೇ ಹೆಜ್ಜೆ ಇಡುವ ಇಚ್ಛಾಶಕ್ತಿ ಬೇಕು. ಇದೆಲ್ಲಾ ನಾಗರಾಜ್ ಅವರಿಗೆ ಸಾಧ್ಯವಿದೆ.

ಡಾ.ನಾಗರಾಜ್ ಅವರು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ತಹಶೀಲ್ದಾರ್ ಆಗಿ 2008ರಲ್ಲಿ ಬಂದಾಗ ಪರಿಚಯ. ಹೊಳೆನರಸೀಪುರ ಎಂದ ಮೇಲೆ ಕೇಳಬೇಕೆ? ರಾಜಕೀಯ ಹಾಸಿ, ಹೊದ್ದು ಮಲಗಿರುವ ಕ್ಷೇತ್ರ. ಎಲ್ಲದಕ್ಕೂ ಬೇಕೋ, ಬೇಡವೋ ರಾಜಕೀಯ ಸುತ್ತಿಕೊಂಡಿರುತ್ತದೆ.

ನಾನಾಗ ವಿಜಯ ಕರ್ನಾಟಕ ಪತ್ರಿಕೆ ವರದಿಗಾರನಾಗಿದ್ದೆ. ಅಕ್ರಮ ಮರಳುಗಾರಿಕೆ ಬಗ್ಗೆ ವಿಜಯ ಕರ್ನಾಟಕದಲ್ಲಿ ಮಾಡಿದ ವರದಿಗಳ ಹಿನ್ನೆಲೆಯಲ್ಲಿ ಆಗಿನ ತಹಶೀಲ್ದಾರ್ ನಾಗರಾಜ್ ಹೇಮಾವತಿ ನದಿ ದಂಡೆಯಲ್ಲಿ ಮರಳು ಲೂಟಿ ಆಗುತ್ತಿರುವುದನ್ನು ತಡೆದರು.

ಇದರಿಂದ ಆಕ್ರೋಶಗೊಂಡ ಮರಳು ಲಾಬಿ, ತಹಶೀಲ್ದಾರ್ ಅವರನ್ನು ಬಲಿ ತೆಗೆದುಕೊಳ್ಳಲು ಸ್ಕೆಚ್ ರೂಪಿಸಿತ್ತು. ಮರಳು ದಂಧೆಯ ಎಡೆಮುರಿಕಟ್ಟಲು ಹೋಗಿದ್ದ ನಾಗರಾಜ್ ಅವರನ್ನು ಹನುಮನಹಳ್ಳಿಯ ಬಳಿ ಬಲಿ ಪಡೆಯಲು ಮುಂದಾಗಿತ್ತು. ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳದೇ ಹೋಗಿದ್ದರೆ ಅವರ ಮೇಲೆ ಲಾರಿ ಡಿಕ್ಕಿ ಹೊಡೆದು ಜೀವ ಹಾನಿಯಾಗಿ ಬಿಡುತಿತ್ತು. ಆದರೂ ಆಗ ಅವರ ಕೈಗೆ ಪೆಟ್ಟಾದರೂ ಬದುಕಿ ಬಂದರು.

ಇದೆಲ್ಲವೂ ದೈವಲೀಲೆಯೇ ಸರಿ. ಆಗ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳದೇ ಹೋಗಿದ್ದರೆ, ಇಂದು ನಾಗರಾಜ್ ನಮ್ಮ ನಡುವೆ ಇರುತ್ತಿರಲಿಲ್ಲವೇನೋ!
ಈ ಘಟನೆ ನಡೆದು ಸರಿಯಾಗಿ ಹದಿನೈದು ವರ್ಷ ತುಂಬಿ ಹೋಗಿದೆ. ಅವರು ನಾನಾ ಕಡೆಯಲ್ಲಿ ತಹಶೀಲ್ದಾರ್
, ಉಪ ವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿ ಸಾರ್ವಜನಿಕ ಬದುಕಿನಲ್ಲಿ ಸಾಕಷ್ಟು ಮಾಗಿದ್ದಾರೆ. ಅವರು ಎಂದೂ ಹಣದ ಹಿಂದೆ ಹೋದವರಲ್ಲ.

ಅವರ ಸೇವಾವಧಿ ಉದ್ದಕ್ಕೂ ನಯಾ ಪೈಸೆ ಹಣವನ್ನು ಲಂಚವಾಗಿ ಪಡೆದವರಲ್ಲ. ನಿಷ್ಠೆಯಿಂದ ಸರ್ಕಾರಿ ಸೇವೆ ಮಾಡುತ್ತಲೇ ಬಂದ ಅವರು ಯಾಕೋ ಮುದುವೆಯೂ ಆಗಲಿಲ್ಲ. ಸಾರ್ವಜನಿಕ ಸೇವೆಯನ್ನು ತನ್ಮಯತೆಯಿಂದಲೇ ಮಾಡುತ್ತಾ ಬಂದವರು. ಮಕ್ಕಳಿಗೋಸ್ಕರ ಚ.ನಂ.ಅಶೋಕ್ ಅವರ ಜೊತೆಯಲ್ಲಿ ಸೇರಿಕೊಂಡು, ರಾಜ್ಯ ಮಟ್ಟದ ಸಮ್ಮೇಳನವನ್ನು ಹುಟ್ಟು ಹಾಕಿದವರು.

ಹಾಸನದಲ್ಲಿ ಪುರದಮ್ಮ ಬಹಳ ಪ್ರಸಿದ್ಧಿ. ಅಲ್ಲಿಗೊಂದು ಶಿಸ್ತು, ನೀತಿ, ನಿಯಮ ತಂದಿದ್ದು ಕೂಡ ಇವರ ಆಡಳಿತಾವಧಿ ಕಾಲದಲ್ಲಿಯೇ. ಮಂಡ್ಯದಲ್ಲಿ ಮೈಶುಗರ್ ಲಾಭಕ್ಕೆ ಬರಲು ಇವರ ಶ್ರಮವೂ ಕಾರಣ. ಮಂಡ್ಯದಲ್ಲಿ ಅಪರ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದಾಗಲೇ ಅವರು ಸ್ವಾಮೀಜಿಯಾಗಲು ಹೊರಟು ನಿಂತರು. ಈ ಬಾರಿ ತಡೆಯಲು ಅಲ್ಲಿ ಯಾರೂ ಇರಲಿಲ್ಲ.
ಯಾಕೆಂದರೆ ಅವರ ನಿಲುವು ದಿಟ್ಟವಾಗಿತ್ತು. ಬೆಂಗಳೂರು ಕೆಂಗೇರಿ ಬಳಿ ಇರುವ ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಆರೋಗ್ಯ ಹದಗೆಡುತ್ತಿರುವ ಹೊತ್ತಿನಲ್ಲಿ ಆ ಪೀಠಕ್ಕೆ ಡಾ.ನಾಗರಾಜ್ ಅವರು ಅಂದರೆ
, ಈಗ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯಾಗಿ ಪಟ್ಟಾಧಿಕಾರ ವಹಿಸಿಕೊಂಡಿದ್ದಾರೆ.

ಆದಿಚುಂಚನಗರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಪಟ್ಟಾಧಿಕಾರಕ್ಕೆ ಹೋಗುತ್ತಾರೊ ಇಲ್ಲವೊ ಎನ್ನುವ ಚರ್ಚೆ ಇತ್ತು. ಅವರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಪಟ್ಟಾಧಿಕಾರದ ದಿನ ಕಾರ್ಯಕ್ರಮಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಮಾರನೆ ದಿನ ಪತ್ನಿ ಜೊತೆಯಲ್ಲಿ ಮಠಕ್ಕೆ ಹೋದಾಗ ಬಹಳ ಹೊತ್ತು ಮಾತನಾಡುತ್ತಾ ಕುಳಿತೆವು. ಕೊನೆಯಲ್ಲಿ ಶುಭ ಹರಸಿ ಬಂದೆ.

ಅವರ ಅವಧಿಯಲ್ಲಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಸಮಾಜಮುಖಿಯಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದುವಂತಾಗಲಿ. ಆ ನಂಬಿಕೆ ಮತ್ತು ನಿರೀಕ್ಷೆ ಎಲ್ಲರಲ್ಲೂ ಇದೆ.
ಲೇಖನ-ಶಿವಾನಂದ ತಗಡೂರು, ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ, ಬೆಂಗಳೂರು.

- Advertisement -  - Advertisement - 
Share This Article
error: Content is protected !!
";