ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಇತ್ತಿಚೇಗೆ ನಿಧನರಾದ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರಿಗೆ ಕನ್ನಡ ಜಾಗೃತ ಪರಿಷತ್ ಭವನದಲ್ಲಿ ತಾಲ್ಲೂಕಿನ ಕನ್ನಡ, ರೈತ, ದಲಿತ, ಪ್ರಗತಿಪರ, ನೇಕಾರ, ಕಾರ್ಮಿಕ ಮುಖಂಡರಿಂದ ಮಂಗಳವಾರ ನುಡಿನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಪಕ್ಷದ ಮುಖಂಡ ಸಂಜೀವ್ ನಾಯಕ, ಜೆ. ನರಸಿಂಹಸ್ವಾಮಿ ಯಾವುದೇ ಧರ್ಮ, ಜಾತಿ, ಪಂಗಡಕ್ಕೆ ಸಿಮೀತವಾಗಿರದೆ ಅಜಾತಶತ್ರುವಾಗಿದ್ದರು. ಕೊಳಚೆ ನಿರ್ಮೂಲನೆ ಮಂಡಳಿ ಅಧ್ಯಕ್ಷರಾಗಿದ್ದ ವೇಳೆ ತಾಲ್ಲೂಕಿನ ಸಾವಿರಾರು ಮಂದಿಗೆ ಸೂರಿನ ವ್ಯವಸ್ಥೆ ಮಾಡಿದ್ದರು. ತಾಲ್ಲೂಕಿನ ಕೊಳಚೆ ನಿರ್ಮೂಲನಾ ಮಂಡಳಿ ಪ್ರದೇಶದಲ್ಲಿದ್ದ ಸರ್ಕಾರಿ ಮನೆಗಳಿಗೆ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಂಡಿದ್ದರು. ಸಮಯ ಪ್ರಜ್ಞೆ ಪಾಲಿಸುವ ರಾಜಕಾರಣದಲ್ಲಿ ಮಾದರಿಯಾಗಿದ್ದರು ಎಂದರು.
ಕನ್ನಡರ ಪರ ಹೋರಾಟಗಾರ ರಾಜಘಟ್ಟ ರವಿ ಮಾತನಾಡಿ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಿದ್ದ ವ್ಯಕ್ತಿಯಾಗಿದ್ದರು. ಮಾನವೀಯತೆ, ಸೌಜನ್ಯಕ್ಕೆ ಮತ್ತೊಂದು ಹೆಸರಾಗಿ ಕೆಲಸ ಮಾಡಿದ್ದರು. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯತಿ ಹಾಗೂ ಸಹಕಾರ ರಂಗಗಳಲ್ಲಿ ಕೆಲಸ ಮಾಡಿ ಮೂರು ಬಾರಿ ಶಾಸಕರಾಗಿದ್ದವರು ಎಂದರು.
ಕನ್ನಡ ಪಕ್ಷದ ಮುಖಂಡ ಡಿಪಿ ಆಂಜನೇಯ ಮಾತನಾಡಿ ವಿರೋಧ ಪಕ್ಷದ ಮುಖಂಡರು ಅವರ ಬಳಿಗೆ ಬಂದಾಗಲು ವಿರೋಧ ಮಾಡದೆ ಕೆಲಸ ಮಾಡಿಕೊಡುತ್ತಿದ್ದರು. ದೊಡ್ಡಬಳ್ಳಾಪುರಕ್ಕೆ ಬಿಎಂಟಿಸಿ ಬಸ್ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರೈತ ಪರ ಹೋರಾಟವೊಂದರಲ್ಲಿ ರೈಲು ತಡೆದು ಹೋರಾಟ ಮಾಡಿದ ಪರಿಣಾಮ ರೈಲೈ ಪೊಲೀಸರಿಂದ ಕೇಸ್ ದಾಖಲಿಸಿಕೊಂಡ ಏಕೈಕ ಶಾಸಕರಾಗಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್, ತೂಬಗೆರೆ ಷರೀಫ್, ಡಿಡಿ ವೆಂಕಟೇಶ್, ಗೋವಿಂದರಾಜು, ಗುರುರಾಜಪ್ಪ, ಮುನಿಪಾಪಯ್ಯ, ಸತೀಶ್, ಪರಮೇಶ್, ರವಿಕಿರಣ್,ಶ್ರೀಕಾಂತ್, ರಾಜು ಸಣ್ಣಕ್ಕಿ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.