ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಳ್ಳಾರಿ ವಿಶ್ವವಿದ್ಯಾಲಯದ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ತೃತೀಯ ಲಿಂಗಿಯೊಬ್ಬರು ನೇಮಕಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ಬಳ್ಳಾರಿ ಜಿಲ್ಲೆಯ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ ಅವರು ಸೇವೆ ಸಲ್ಲಿಸುತ್ತಿದ್ದು ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿರುವುದು ರಾಜ್ಯದಲ್ಲೇ ಇದು ಮೊದಲು.
ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಮೂವರು ಮಂಗಳಮುಖಿಯರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದರಾದರೂ ಉನ್ನತ ಶಿಕ್ಷಣ ಪಡೆದು ಪ್ರಾಧ್ಯಾಪಕಿಯಾಗಿದ್ದು ಇದೇ ಪ್ರಥಮ ಎನ್ನಲಾಗಿದೆ.
ಬಳ್ಳಾರಿ ಜಿಲ್ಲೆ ಕುರುಗೋಡಿನವರಾದ ರೇಣುಕಾ ಪೂಜಾರಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ(ಮುನ್ಸಿಪಲ್) ಕಾಲೇಜಿನಲ್ಲಿ ಪೂರ್ಣಗೊಳಿಸಿ ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ.