ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಿಟಿ ರವಿ, ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಪ್ರಕರಣವನ್ನು ಸಭಾಧ್ಯಕ್ಷರು ಸೂಕ್ಷ್ಮವಾಗಿ ಪರಿಗಣಿಸಿ ತಪ್ಪು ಮಾಡಿದವರ ವಿರುದ್ಧ ಸ್ವಯಂ ದೂರು ದಾಖಲಿಸುವಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಓ.ಪ್ರತಾಪ್ ಜೋಗಿ ಒತ್ತಾಯಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮತ್ತು ಸಚಿವರಾದ ಲಕ್ಷ್ಮೀಹೆಬ್ಬಾಲ್ಕರ್‌ರವರು ಮತ್ತು ಇತರೆ ಜನಪ್ರತಿನಿಧಿಗಳು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಮಯದಲ್ಲಿ ವೈಯಕ್ತಿವಾಗಿ ನಿಂಧಿಸಿಕೊಂಡು ಸುವರ್ಣಸೌಧದಲ್ಲಿಯೇ ಗಲಭೆ ಮಾಡಿರುವುದು ಮತ್ತು ಸುವರ್ಣಸೌಧದ ಒಳಗಡೆ ಬೆಂಬಲಿಗರು ಪ್ರವೇಶಿಸಿರುವುದು ನೋಡಿದರೆ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಹಾಗೂ ಜನಪ್ರತಿನಿಧಿಗಳೇ ಈ ರೀತಿ ವರ್ತನೆ ಮಾಡಿದರೆ ಸಾಮಾನ್ಯ ಜನರಿಗೆ ಇವರು ಯಾವ ರೀತಿ ಮಾದರಿಯಾಗುತ್ತಾರೆ ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ಸದನದ ಒಳಗೆ ಅವಾಚ್ಯ ಶಬ್ಧಗಳಿಂದ ನಿಂಧಿಸುವುದಾಗಲಿ ವೈಯಕ್ತಿಕವಾಗಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡುತ್ತಿರುವುದು ಅಸಹ್ಯವಾಗಿರುತ್ತದೆ.
ಸಾಮಾನ್ಯ ಜನರ ತೆರಿಗೆ ಹಣದಿಂದ ಸದನದ ಕಲಾಪದ ಸಮಯವನ್ನು ವ್ಯಯ ಮಾಡುವುದಲ್ಲದೇ ಸಮಾಜಕ್ಕೆ ಧಕ್ಕೆ ತರುವಂತಹ ವಿಚಾರಗಳನ್ನು ಚರ್ಚಿಸಿದ್ದಲ್ಲಿ ಎಂತಹ ಪ್ರಭಾವಿ ವ್ಯಕ್ತಿ ಮಾಡಿದರೂ ಸಹ ಸಭಾಧ್ಯಕ್ಷರು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲು ಮಾಡಿದರೆ ಈ ತರಹದ ಘಟನೆಗಳು ಕಡಿಮೆಯಾಗುತ್ತವೆ.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ದೂರುವ ಬದಲು, ಜನಪ್ರತಿನಿಧಿಗಳು ಪ್ರಜ್ಞಾವಂತರಾಗಬೇಕು. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯ ಜೊತೆಗೆ ಇನ್ನು ಹಲವಾರು ಸಮಸ್ಯೆಗಳಿದ್ದರೂ ಅದರ ಬಗ್ಗೆ ಗಮನಕೊಡದಿರುವುದು ಶೋಚನೀಯ ಸಂಗತಿಯಾಗಿದೆ ಆಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.