ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರುನಾಡಿನ ಅಸ್ಮಿತೆಯೇ ಕನ್ನಡ! ಕನ್ನಡಿಗರಿಗೆ ಅದು ಕೇವಲ ಸಂವಹನದ ಮಾಧ್ಯಮವಲ್ಲ ಉಸಿರು ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ, ಇಲ್ಲಿ ವ್ಯವಹಾರ ನಡೆಸಲು, ಉದ್ಯೋಗ ಪಡೆಯಲು ಕನ್ನಡ ತಿಳಿದಿರಬೇಕು, ಕಲಿಯಬೇಕು ಎನ್ನುವ ಕನ್ನಡಿಗರ ಬೇಡಿಕೆ ಒಕ್ಕೂಟ ವ್ಯವಸ್ಥೆಯಲ್ಲಿ ಅತ್ಯಂತ ನ್ಯಾಯ ಸಮ್ಮತವಾದದ್ದು. ಹಾಗೆಂದು ಕನ್ನಡ ಕಲಿಯಲೇ ಬೇಕೆಂಬ ಕಾನೂನಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
ಕನ್ನಡಿಗರು ಎಲ್ಲರನ್ನೂ ತಮ್ಮವರೆಂದೇ ಕಾಣುವವರು. ಆದರೆ ಸ್ಥಳೀಯರೊಂದಿಗೆ ಭಾವನಾತ್ಮಕವಾಗಿ, ವ್ಯಾವಹಾರಿಕವಾಗಿ ಬೆರೆಯಲು ಅದು ಅಗತ್ಯ ಎಂಬ ಸಾಮಾನ್ಯ ಪರಿಜ್ಞಾನ ಅವಶ್ಯಕ.
ಕರ್ನಾಟಕ ತನ್ನ ಉದ್ಯಮಸ್ನೇಹಿ ವಾತಾವರಣ, ಸರ್ಕಾರದ ಪೂರಕ ಬೆಂಬಲ, ಮಾನವ ಸಂಪನ್ಮೂಲ, ಶಾಂತ – ಸೌಹಾರ್ದ ವಾತಾವರಣದಿಂದಾಗಿ ಬಂಡವಾಳ ಹೂಡಿಕೆಯಲ್ಲಿ ದೇಶದಲ್ಲೇ ಅಗ್ರ ಸ್ಥಾನದಲ್ಲಿರುವ ರಾಜ್ಯಗಳಲ್ಲೊಂದು. ಉದ್ಯೋಗಾವಕಾಶಗಳೂ ಹೇರಳವಾಗಿವೆ. ಪ್ರಚಾರಕ್ಕಾಗಿ ಯಾರೂ ತಪ್ಪು ಸಂದೇಶ ನೀಡಬಾರದು! ಎಂದು ಕಾಂಗ್ರೆಸ್ ಮನವಿ ಮಾಡಿದೆ.