ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ,ತೂಬಗೆರೆ ಹೋಬಳಿ ಶ್ರೀ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಹಾಗು ನಂದಿ ವಿ ಕೇರ್ ಆಸ್ಪತ್ರೆಯ ಸಹಯೋಗದೊಂದಿಗೆ ಜಾನುವಾರುಗಳಿಗೆ ಉಚಿತ ಮೇವು ವಿತರಣೆ ಹಾಗು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
ಬಿ ಜೆ ಪಿ ಸಹಕಾರ ಪ್ರಕೋಷ್ಠ ರಾಜ್ಯ ಸಮಿತಿ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ಉಚಿತ ಮೇವು ವಿತರಣೆ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿ ರಾಜ್ಯದಲ್ಲಿ ದೇಶದಲ್ಲಿ ಹಲವೆಡೆ ಅತಿವೃಷ್ಟಿ ಇನ್ನೂ ಕೆಲವೆಡೆ ಅನಾವೃಷ್ಟಿಯಿಂದ ಈ ವರ್ಷ ರೈತರು ತೀವ್ರ ನಷ್ಟದಲ್ಲಿ ದ್ದಾರೆ ಹಾಗೂ ಮೇವಿನ ಕೊರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ವೇದಿಕೆ ಈ ಕಾರ್ಯಕ್ರಮ ಕೇವಲ ದಾನ ಕಾರ್ಯ ವಲ್ಲದೆ ರೈತ ಸಮುದಾಯವನ್ನು ಬೆಂಬಲಿಸುವ ಗುರಿ ಹೊಂದಿರುವುದು ನಿಜವಾಗಿಯೂ ಶ್ಲಾಘನೀಯ ಎಂದರು.
ನಂತರ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು ಮಾತನಾಡಿ,ದನಗಳ ಜಾತ್ರೆಗೆ ಸರ್ಕಾರದ ವತಿಯಿಂದ ಉಚಿತ ನೀರು ಮತ್ತು ಆಹಾರ ವ್ಯವಸ್ಥೆ ಮಾಡಿದ್ದಾರೆ. ಇದರ ಜೊತೆಗೆ ಸ್ಥಳೀಯ ಸಂಘಟನೆ ನವ ಕರ್ನಾಟಕ ಯುವಶಕ್ತಿ ವೇದಿಕೆಯವರು ಜಾತ್ರೆಗೆ ಬರುವ ಜಾನುವಾರುಗಳಿಗೆ ಉಚಿತ ಮೇವು ನೀಡುತ್ತಿರುವುದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಜಾತ್ರೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ದಿವಂಗತ ಶ್ರೀ ಅಪ್ಪಯ್ಯಣ್ಣನವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
“ರೈತರಿಗೆ ನೇರವಾಗಲು ಜಾನುವಾರುಗಳಿಗೆ ಮೇವು ಮತ್ತು ನೀರು ವಿತರಣಾ ಕಾರ್ಯಕ್ರಮ ಇನ್ನೂ ಮೂರು – ನಾಲ್ಕು ದಿನ ಮುಂದುವರಿಯುತ್ತದೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ರೈತರಿಗೆ ಆದ್ಯತೆ ನೀಡಲು ತೀರ್ಮಾನಿಸಿದ್ದೇವೆ”. ಹಳ್ಳಿ ರೈತ ಅಂಬರೀಶ್, ಅಧ್ಯಕ್ಷರು, ನವ ಕರ್ನಾಟಕ ಯುವ ಶಕ್ತಿ ವೇದಿಕೆ.
ಈ ಸಂದರ್ಭದಲ್ಲಿ ಶ್ರೀ ಘಾಟಿ ದೇವಾಲಯ ಕಾರ್ಯನಿರ್ವಹಣಾ ಅಧಿಕಾರಿ ನಾರಾಯಣಸ್ವಾಮಿ, ತೂಬಗೆರೆ ಹೋಬಳಿ ಜೆಡಿಎಸ್ ಅಧ್ಯಕ್ಷ ಜಗನ್ನಾಥ್, ಕಾರ್ಯದರ್ಶಿ ಅಶೋಕ್, ಅರ್ಕಾವತಿ ರೈತ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಮುಬಾರಕ್ ಷರೀಫ್, ನಾಗರಾಜು, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಅಧ್ಯಕ್ಷ ಹನುಮಂತೇಗೌಡ, ಮುಖಂಡ ನಲ್ಲಪ್ಪ,ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ರೈತರು ಭಾಗವಹಿಸಿದ್ದರು.