ಧಮ್ಕಿ ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ-ಸಿಟಿ ರವಿ

News Desk

ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಧಾನ ಪರಿಷತ್​ನಲ್ಲಿ ನನಗೆ ಧಮ್ಕಿ ಹಾಕಿದ್ದಾರೆ. ಅವರ ಜೊತೆ ಡಿ.ಕೆ. ಶಿವಕುಮಾರ್
, ಚನ್ನರಾಜ ಹಟ್ಟಿಹೊಳಿ ಕೂಡ ಧಮ್ಕಿ ಹಾಕಿದ್ದರು. ಸುವರ್ಣಸೌಧದಲ್ಲೇ ನನ್ನ ಮೇಲೆ ದಾಳಿಗೆ ಪ್ರಯತ್ನ ನಡೆದಿತ್ತು. ಪೊಲೀಸರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೂರಿನ ಮೇರೆಗೆ ಕ್ರಮ ಕೈಗೊಳ್ಳುತ್ತಾರೆ. ಆದರೆ, ನಾನು ನೀಡಿದ ದೂರಿನ ಮೇಲೆ ಯಾಕೆ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ? ಎಂದು ವಿಧಾನ ಪರಿಷತ್​ ಸದಸ್ಯ ಸಿ.ಟಿ. ರವಿ ಬೇಸರ ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರಿನ ಬಸವನಹಳ್ಳಿ ನಿವಾಸದಲ್ಲಿ ಸಿ.ಟಿ. ರವಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ವಿಧಾನ ಪರಿಷತ್​ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ನನ್ನ ತಾಯಿ, ತಂಗಿ, ಪತ್ನಿಯ ಬಗ್ಗೆ ಮಾತಾಡಿದರು.

ಈ ಮಹಾತಾಯಿ ಮಾತನಾಡಿದ್ದನ್ನು ತಾವೆಲ್ಲರೂ ನೋಡಿದ್ದೀರಿ. ಅದು ಸರಿಯೇ?, ರಾತ್ರಿಯಿಡೀ 4 ಜಿಲ್ಲೆಗಳಲ್ಲಿ ವ್ಯಾನ್​ನಲ್ಲಿ ನನ್ನನ್ನು ಸುತ್ತಾಡಿಸಿದ್ದಾರೆ. ಗೂಂಡಾಗಳು ನನ್ನ ಮೇಲೆ ಹಲ್ಲೆಗೈದ ಆಡಿಯೋ, ವಿಡಿಯೋ ಇದೆ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದ್ದಾರೆ.

ಈ ಎಲ್ಲ ಪ್ರಕರಣಗಳ ಕುರಿತು ವಿಧಾನ ಪರಿಷತ್ ಸಭಾಪತಿಗೆ ಈಗಾಗಲೇ ದೂರು ಕೊಟ್ಟಿದ್ದೇವೆ. ಈ ಬಗ್ಗೆ ಸಭಾಪತಿ ಏನು ಕ್ರಮ ಕೈಗೊಳ್ಳುತ್ತಾರೆ ಅಂತಾ ನೋಡಬೇಕು. ಖಾನಾಪುರದಲ್ಲಿ ನನ್ನ ಕೊಲೆ ಯತ್ನದ ಬಗ್ಗೆ ದೂರು ಕೊಟ್ಟಿದ್ದೇನೆ. ಆದರೆ ಪೊಲೀಸರು ಎಫ್​ಐಆರ್​ ದಾಖಲಿಸಿಲ್ಲ ಎಂದು ಸಿ.ಟಿ. ರವಿ ಆರೋಪಿಸಿದರು.

ಹೆದರಿಸಿ ಗೂಂಡಾಗಿರಿ ಮಾಡಲು ಪ್ರಜಾಪ್ರಭುತ್ವ ಅವಕಾಶ ನೀಡುವುದಿಲ್ಲ. ಸುವರ್ಣಸೌಧದಲ್ಲಿ ನನಗೆ ಬೆದರಿಕೆ ಸಂಬಂಧ ದೂರು ನೀಡುತ್ತೇನೆ. ಪೊಲೀಸರು ಅಮಾನವೀಯವಾಗಿ ನಡೆಸಿಕೊಂಡ ಬಗ್ಗೆಯೂ ದೂರು ನೀಡುತ್ತೇನೆ. ಒಬ್ಬ ಕೊಲೆ ಆರೋಪಿ, ರೌಡಿಶೀಟರ್​ಗೂ ಹೀಗೆ ನಡೆಸಿಕೊಳ್ಳುವಂತಿಲ್ಲ.

ನಾನೊಬ್ಬ ಎಂಎಲ್​ಸಿ ಆಗಿದ್ದರೂ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ಮಾನವ ಹಕ್ಕುಗಳ ಆಯೋಗಕ್ಕೂ ದೂರು ನೀಡುವೆ. ಹಕ್ಕುಚ್ಯುತಿ ಮಂಡನೆ ಬಗ್ಗೆಯೂ ಸಭಾಪತಿ ಜೊತೆ ಚರ್ಚಿಸಿದ್ದೇನೆ. ನಮ್ಮ ವಕೀಲರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಆರೋಗ್ಯ ಸುಧಾರಿಸಿಕೊಂಡ ನಂತರ ದೂರು ನೀಡುತ್ತೇನೆ ಎಂದು ಸಿ.ಟಿ. ರವಿ ಹೇಳಿದ್ದಾರೆ.

ಪೊಲೀಸರಿಗೆ ನನ್ನನ್ನು ಕರೆದೊಯ್ದು ರಾತ್ರಿಯಿಡೀ ಊರೂರು, ಕಾಡುಮೇಡು ಸುತ್ತಿಸುವಂತೆ ಆದೇಶವಿತ್ತಾ? ಬೆಳಗಾವಿ, ರಾಯಬಾಗ, ಲೋಕಾಪುರಕ್ಕೆ ಕರೆದೊಯ್ದಿದ್ದು ಯಾಕೆ? ಖಾನಾಪುರದಲ್ಲಿ ತಲೆಗೆ ಪೆಟ್ಟು ಬಿದ್ದಿತ್ತು, ರಾಯಬಾಗದಲ್ಲಿ ಚಿಕಿತ್ಸೆ ಕೊಡಿಸಿದರು. ನನಗೆ ಗಂಭೀರ ಗಾಯವಾಗಿಲ್ಲ, ಸಣ್ಣ ಪ್ರಮಾಣದ ಗಾಯವಾಗಿದೆ.

ತಲೆಯಿಂದ ಸಾಕಷ್ಟು ಹೊತ್ತು ರಕ್ತ ಸೋರುತ್ತಿದ್ದರೂ ಚಿಕಿತ್ಸೆ ಕೊಡಿಸಲಿಲ್ಲ. ನಾನು ಈ ಮೊದಲೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಕಬ್ಬಿನಗದ್ದೆ, ಜಲ್ಲಿ ಕ್ರಷರ್​ನಲ್ಲಿ ರಕ್ಷಣೆ ಕೊಡಲು ಯಾರು ಹೇಳಿದ್ದು? ಎಂದು ಸಿ.ಟಿ.ರವಿ ಪ್ರಶ್ನಿಸಿದರು.

ಅವಾಚ್ಯ ಪದ ಬಳಕೆ ಬಗ್ಗೆ ಪ್ರಧಾನಿ, ರಾಷ್ಟ್ರಪತಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿ.ಟಿ ರವಿ, ಬಿಜೆಪಿಯವರು ಧೃತರಾಷ್ಟ್ರರು ಎಂದು ಸಚಿವೆ ಲಕ್ಷ್ಮೀ ಹೇಳಿದ್ದಾರೆ. ಬಿಜೆಪಿಯವರು ಅಂದರೆ ಸಾಮಾನ್ಯ ಕಾರ್ಯಕರ್ತನೂ ಸೇರಿದಂತೆ ನಾನು,

ರಾಜ್ಯ ಬಿಜೆಪಿ ಅಧ್ಯಕ್ಷ, ಮೋದಿ ಎಲ್ಲರೂ ಸೇರಿಕೊಳ್ಳುತ್ತೇವೆ. ಬಿಜೆಪಿಯವರು ಧೃತರಾಷ್ಟ್ರರು ಅಂದಮೇಲೆ ಯಾಕೆ ದೂರು ಕೊಡುತ್ತಾರೆ? ಪ್ರಧಾನಿ ಮೋದಿಗೆ ದೂರು ನೀಡಿದರೆ ಅವರಿಗೆ ಏನು ಉಪಯೋಗ? ಅವರವರ ಭಾವನೆಗಳಿಗೆ ತಕ್ಕಂತೆ ಯೋಚನೆ ಮಾಡುತ್ತಾರೆ ಅಷ್ಟೇ ಎಂದು ಸಿ.ಟಿ. ರವಿ ಹೇಳಿದರು.

 

- Advertisement -  - Advertisement - 
Share This Article
error: Content is protected !!
";