ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಈ ಹಿಂದೆ ನಡೆಯುತ್ತಿದ್ದ ಮಹೇಶ್ವರ ಜಾತ್ರೆಯು ಕಳೆದ ಮೂರು ದಶಕಗಳಿಂದ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದು, ಈ ವರ್ಷ ಪುನರಾರಂಭಗೊಂಡಿರುವುದಕ್ಕೆ ಜನರಲ್ಲಿ ಹರ್ಷ ಮನೆ ಮಾಡಿದೆ.
ಪ್ರಸಕ್ತ ವರ್ಷ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 150ನೇ ಜಯಂತ್ಯುತ್ಸವದ ನೆನಪಿನಲ್ಲಿ ಆರಂಭಗೊಂಡ ಹಿನ್ನೆಲೆಯಿಂದ ಭಕ್ತಿಯಿಂದ ಸ್ಮರಿಸುವ ಮೂಲಕ ಆಚರಣೆಗೆ ಮುನ್ನಡಿ ಇಡಲಾಗಿದೆ.
ಬಹಳ ವರ್ಷಗಳ ಕಾಲದಿಂದ ನಡೆಸಿಕೊಂಡು ಬಂದಿದ್ದ ಈ ಮಹೋತ್ಸವ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈಗ ಆರಂಭವಾಗಿರುವುದಕ್ಕೆ ಗ್ರಾಮದವರ ಒಗ್ಗಟ್ಟಿನ ಫಲ ಎನ್ನಬೇಕಾಗಿದೆ. ಸತ್ ಸಂಪ್ರದಾಯದಂತೆ ನಿಲ್ಲಬಾರದೆಂಬ ಹಿರಿಯರ ಹಾಗೂ ಯುವಕರ ಒತ್ತಾಸೆಯಿಂದ ಮತ್ತೆ ಆರಂಭಗೊಂಡಿದೆ ಎಂದು ಗ್ರಾಮದ ಹಿರಿಯ ಚನ್ನಬಸಯ್ಯ ಅಭಿಪ್ರಾಯಪಟ್ಟರು.
ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಪ್ರತಿಯೊಂದಕ್ಕೂ ತನ್ನದೇ ಆದ ವಿಶಿಷ್ಟ, ವೈಜ್ಞಾನಿಕ ಹಿನ್ನೆಲೆ ಇರುತ್ತದೆ. ಅದರಂತೆ ಇದೀಗ ಕಾರ್ತಿಕ ಮಾಸ ಕಡೆಯ ಹಂತದಲ್ಲಿದ್ದು, ಅಲ್ಲಲ್ಲಿ ಕಡೆ ಕಾರ್ತಿಕ ಮುಗಿದು ನಂತರ ಬರುವುದೇ ಈ ಮಹೇಶ್ವರ ಜಾತ್ರೆ. ಇದಕ್ಕೂ ವಿಶೇಷತೆ ಇದೆ ಎನ್ನುತ್ತಾರೆ ಧರ್ಮದರ್ಶಿ ವಕೀಲ ಪ್ರಸನ್ನ ಕುಮಾರ್.
ಸೋಮವಾರ ರಾತ್ರಿ ಗ್ರಾಮದ ದೈವ ಉತ್ಸವಮೂರ್ತಿ ವೀರಭದ್ರ ದೇವರನ್ನು ಭಕ್ತಿಯಿಂದ ಪಲ್ಲಕ್ಕಿಯಲ್ಲಿ ತಂದು ಅದಕ್ಕಾಗಿ ಜಮೀನಿನಲ್ಲಿ ನಿರ್ಮಾಣಗೊಂಡಿದ್ದ ತೆಂಗಿನ ಚಪ್ಪರದ, ಬಿಲ್ವಪತ್ರೆಯ ಮರದ ಕೆಳಗೆ ಕೂರಿಸಿ, ವಿಶೇಷ ಅಲಂಕಾರ ಮಾಡಿ ನಂತರ ಪೂಜಾ ವಿಧಾನಗಳನ್ನು ಗ್ರಾಮದ ಹಿರಿಯರಾದ ಎಂ.ಸಿ.ಮಹಾರುದ್ರಯ್ಯ ನೆರವೇರಿಸಿದರು.
ಈ ಜಾತ್ರಾ ಮಹೋತ್ಸವದ ವಿಶೇಷ ಪ್ರಸಾದ ಎಂದರೆ ಉಪ್ಪು ಹಾಕದೆ ಅನ್ನ ತಯಾರು ಮಾಡಿ ಅದಕ್ಕೆ ಚೆನ್ನಾಗಿ ಕಾಯಿಸಿದ ಹಾಲು, ಬಾಳೆಹಣ್ಣು ಜೊತೆಗೆ ಬೆಲ್ಲ ಬೆರೆಸಿದ ಪ್ರಸಾದ ಇದನ್ನೇ ಚೆನ್ನಾಗಿ ಕಲಸಿ ಹದ ಮಾಡಿಕೊಂಡು ಸೇವಿಸುವ ಕ್ರಮ ಇದೆ. ಅದನ್ನ ತಯಾರು ಮಾಡಿಕೊಂಡು ಬಂದ ಭಕ್ತಾದಿಗಳಿಗೆ ನೀಡಲಾಯಿತು ಎಂದು ಚಿತ್ರಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯು.ಎಸ್. ತಿಪ್ಪೇಸ್ವಾಮಿ ಹೇಳಿದರು.
ಈ ಬಾರಿ ಅಷ್ಟೊಂದು ಪೂರ್ವ ತಯಾರಿ ಇಲ್ಲದೆ, ಆಚರಿಸಲೇಬೇಕೆಂಬ ಎಲ್ಲರ ಸದಾಶಯದಿಂದ ಮಾಡಲು ಮುಂದಾಗಿದ್ದು. ಅದರಲ್ಲಿ ಈ ಬಾರಿ ನಮ್ಮ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಪೀಠಾಧಿಪತಿಗಳಾಗಿದ್ದ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ವರ್ಷದಂದು ಪ್ರಾರಂಭವಾಗಿದೆ. ಅವರ ಆಶಯಕ್ಕೆ ತಕ್ಕಂತೆ ಮುಂದಿನ ದಿನಗಳಲ್ಲಿ ಚೆನ್ನಾಗಿ ಮಾಡೋಣ ಎಂದು ಅಲ್ಲಿ ಸೇರಿದವರು ಅಭಿಪ್ರಾಯಪಟ್ಟರು.
ಜಯದೇವ ಮುರುಘರಾಜೇಂದ್ರ ಶ್ರೀಗಳು ಈ ನಾಡು ಕಂಡ ಅಪರೂಪದ ಸುಧಾರಕರಲ್ಲೊಬ್ಬರು. ಅವರು ಸಮಾಜ ಮುಖಿವಾಗಿ ಕೈಗೊಂಡ ಕಾರ್ಯಗಳು ಜನಮಾನಸದಲ್ಲಿ ಇನ್ನೂ ಅಜರಾಮರವಾಗಿವೆ. ಅವುಗಳಲ್ಲಿ ಪ್ರಸಾದ ನಿಲಯ ಬಡಜನರ ಪಾಲಿಗೆ ವರದಾನವಾಗಿದೆ ಎಂದು ಅವರ ಸಾಧನೆ ಸ್ಮರಿಸಲಾಯಿತು.
ಕಾರ್ಯದಲ್ಲಿ ಧರ್ಮದರ್ಶಿಗಳು, ಗ್ರಾಮದ ಪ್ರಮುಖರು, ಗ್ರಾಮ ಪಂಚಾಯತಿ ಸದಸ್ಯರುಗಳು ಸೇರಿದಂತೆ ಗ್ರಾಮದ ಎಲ್ಲರೂ ಉತ್ಸಾಹ ತೋರಿದ ಕಾರಣ ನಡೆಸಲು ಪ್ರೇರಣೆ ದೊರೆತಿದೆ ಎಂದು ಅರ್ಚಕ ವಿನಯ್ ಅವರ ಅಭಿಪ್ರಾಯ.
ಈ ಸಂದರ್ಭದಲ್ಲಿ ಎಂ.ಸಿ. ಚನ್ನಬಸವಯ್ಯ, ಎಂ.ಎಸ್. ಸಿದ್ದಲಿಂಗಮೂರ್ತಿ, ಎಂ .ಜೆ .ನಂಜಪ್ಪಯ್ಯ, ಎಂ.ಯು. ಮಲ್ಲಿಕಾರ್ಜುನಯ್ಯ, ಎಂ.ಸಿ .ಮಲ್ಲಿಕಾರ್ಜುನ, ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದನಂಜಮ್ಮರ ಕಲ್ಲೇಶ್, ದರ್ಜಿ ಕಲ್ಲೇಶ್, ರಾಜ್ಯ ಎಪಿಎಂಸಿ ಮಾಜಿ ಸದಸ್ಯ ಯು. ಎಸ್. ಅಂಕಳಪ್ಪ, ಗುಡಿ ಗೌಡ್ರು ಉಜ್ಜನಪ್ಪ, ಷಡಕ್ಷರಯ್ಯ .ಎಂ.ಜೆ, ಗೂಳಿಹೊಸಳ್ಳಿ ಎಂ.ಕುಬೇರ್, ಮೂಲೆಮನೆ ಎಂ.ಪಿ.ವರುಣ್ ಕುಮಾರ್, ಶಿವನಪ್ಳರ ಪ್ರಕಾಶ್, ತಿಮ್ಮಜ್ಜಿ ಕಲ್ಲೇಶ್, ಕಲ್ಲಜ್ಜರ ವೀರೇಶ್, ವಿನಯ್, ಪಟೇಲ್ ಜಿ.ವಿ., ನಟರಾಜ್, ಪ್ರಕಾಶ್, ಮಹಾಂತೇಶ್, ರೇವಣಸಿದ್ದಪ್ಪ, ವೀರೇಶ್ ಮತ್ತಿತರರು ಉಪಸ್ಥಿತರಿದ್ದರು.