ಬೆಂಕಿ ಹಚ್ಚುವುದೇ ಬಿಜೆಪಿ ಕಾಯಕ-ವೆಂಕಟರಮಣಯ್ಯ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಬಾಬಾ ಸಾಹೇಬ್ ಅಂಬೇಡ್ಕರ್ ರವರ ಬಗ್ಗೆ ಅನುಚಿತವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಸಂಪುಟದಿಂದ ಕೈ ಬಿಡಬೇಕು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಬಳಸಿರುವ ಸಿ. ಟಿ. ರವಿ ರವರನ್ನು ಪರಿಷತ್ ಸ್ಥಾನದಿಂದ ವಜಾ ಗೊಳಿಸಲು ಅಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ತಾಲೂಕು ಕಚೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

       ಪ್ರತಿಭಟನೆ ನೇತೃತ್ವ ವಹಿಸಿದ್ದ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಶಾಸಕ ವೆಂಕಟರಮಣಯ್ಯ ಮಾತನಾಡಿ ರಾಜ್ಯ ವಿಧಾನ ಮಂಡಲ, ಸಂಸತ್ತಿನಲ್ಲಿ ಬೆಂಕಿ ಹಚ್ಚುವುದನ್ನೇ ಬಿಜೆಪಿ ಕಾಯಕ ಮಾಡಿಕೊಂಡಿದೆ. ಇವರಿಗೆ ಅಧಿಕಾರ ಬೇಕೇ ಹೊರತು ಅಭಿವೃದ್ಧಿ ಬೇಕಿಲ್ಲ. ಧರ್ಮದ ಹೆಸರಿನಲ್ಲಿ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವುದು ಇವರ ಕಾಯಕ. ದೊಡ್ಡಬಳ್ಳಾಪುರದಲ್ಲಿ ಅಭಿವೃದ್ಧಿ ಬಗ್ಗೆ ಈಗ ಜನರಿಗೆ ಅರಿವಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ ಕಾಳಜಿ ಇರುವವರನ್ನು ಜನ ಬೆಂಬಲಿಸಬೇಕಿದೆ. ಅಮಿತ್ ಶಾ ರವರಿಗೆ ಮಂತ್ರಿಯಾಗುವ ಅರ್ಹತೆ ಇಲ್ಲ. ಅಂತಹ ವ್ಯಕ್ತಿ ಗೃಹ ಖಾತೆ ಯಂತ ಉನ್ನತ ಹುದ್ದೆಯಲ್ಲಿದ್ದಾರೆ.

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೇವಲವಾಗಿ ಮಾತನಾಡಿರುವ ಅಮಿತ್ ಶಾ ಗೃಹ ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ಸಿ. ಟಿ. ರವಿ ಯನ್ನು ಪರಿಷತ್ ಸ್ಥಾನದಿಂದ ವಜಾ ಮಾಡಬೇಕು ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ಲಕ್ಷ್ಮೀಪತಿ ಮಾತನಾಡಿ ಇಡೀ ವಿಶ್ವವೆ ಅಭಿಮಾನಿಸುವ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡುವುದು ಬಿಜೆಪಿಗೆ ಅಂಟಿ ಬಂದ ರೋಗ. ರಾಷ್ಟ್ರದ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಅಂಬೇಡ್ಕರ್ ರವರನ್ನು ಅವಮಾನಿಸಿರುವುದು ಕಂಡನಿಯ. ಇಂತಹ ವ್ಯಕ್ತಿ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಪ್ರಕರಣ ದಾಖಲಿಸಬೇಕು. ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಪದ ಪ್ರಯೋಗ ಮಾಡಿರುವ ಸಿ. ರವಿಯನ್ನು ಈ ಕೂಡಲೇ ಪರಿಷತ್ ಸ್ಥಾನದಿಂದ ಕಿತ್ತೊಗೆಯಬೇಕು. ಸಮಾಜದ ಮಹಿಳೆಯರು ರವಿ ಹೇಳಿಕೆ ಯನ್ನು ಅತ್ಯುಗ್ರವಾಗಿ ಖಂಡಿಸಬೇಕು ಎಂದು ಹೇಳಿದರು.

        ನೇಕಾರ ಮುಖಂಡ, ಕೆಪಿಸಿಸಿ ಸದಸ್ಯ ಬಿ. ಜಿ. ಹೇಮಂತರಾಜು ಮಾತನಾಡಿ ಇಡೀ ಜಗತ್ತೇ ಮೆಚ್ಚುವಂತ ಸಂವಿದಾನವನ್ನು ನೀಡಿರುವ ಅಂಬೇಡ್ಕರ್ ಬಗ್ಗೆ ಹಾಗೂ ಶೋಷಿತ ವರ್ಗಗಳ ಬಗ್ಗೆ ಹಗುರವಾಗಿ ಮಾತನಾಡುವುದು. ಬಿಜೆಪಿ ಹಾಗೂ ಮನುವಾದಿ ಸಂಘಟನೆಗಳಿಗೆ ಜನ್ಮಧಾರಭ್ಯ ಬಂದ ರೋಗವಾಗಿದೆ. ಸಮ ಸಮಾಜದ ಕಲ್ಪನೆಯೇ ಇವರಿಗಿಲ್ಲ. ಇವರಿಗೇನಿದ್ದರೂ ವರ್ಣ ಭೇದ ನೀತಿಯಲ್ಲೇ ನಂಬಿಕೆ.

ಇಂತಹ ಮನಸ್ಥಿತಿಯ ಆಡಳಿತ ದೇಶಕ್ಕೆ ಬೇಕಾ ಎಂದು ಸಾರ್ವಜನಿಕರು ಚಿಂತಿಸಬೇಕಿದೆ. ಅಂಬೇಡ್ಕರ್ ಬಗ್ಗೆ ಅವಹೇಳವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲವಾಗಿ ಮಾತನಾಡಿರುವ ರವಿ ತಮ್ಮ ಸ್ಥಾನಕ್ಕೆ ಅನರ್ಹರು. ಈ ಇಬ್ಬರು ವ್ಯಕ್ತಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರದ ಹಾಗೂ ರಾಜ್ಯದ ಸಾರ್ವಜನಿಕರ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಇವರನ್ನು ವಜಾ ಮಾಡಬೇಕು ಎಂದು ಹೇಳಿದರು.

      ಪ್ರತಿಭಟನೆಯಲ್ಲಿ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಬೈರೇಗೌಡ, ಕಸಬಾ ಅಧ್ಯಕ್ಷ ವೆಂಕಟೇಶ್, ನಗರ ಅಧ್ಯಕ್ಷ ಕೆ. ಪಿ. ಜಗನ್ನಾಥ, ಡಿ. ಪಿ. ಎ. ಅಧ್ಯಕ್ಷ ಚುಂಚೆಗೌಡ, ನಿರ್ದೇಶಕ ಅಂಜನ್ ಮೂರ್ತಿ, ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ವಿಶ್ವನಾಥ್ ರೆಡ್ಡಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೇವತಿ ಅನಂತಾರಾಮ್, ಮೀನಾಕ್ಷಿ, ನಗರಸಭಾ ಸದಸ್ಯರಾದ ಶಿವಶಂಕರ್, ಆನಂದ್, ನಾಗರಾಜ್, ವಾಣಿ, ಅಖಿಲೇಶ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

 

 

- Advertisement -  - Advertisement - 
Share This Article
error: Content is protected !!
";