ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲೆಯ ಚಿತ್ರದುರ್ಗ, ಭರಮಸಾಗರ, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ ಮತ್ತು ಮೊಳಕಾಲ್ಮೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ ಇರುವ 64 ಅಂಗನವಾಡಿ ಕಾರ್ಯಕರ್ತೆ, 3 ಮಿನಿ ಅಂಗನವಾಡಿ ಕಾರ್ಯಕರ್ತೆ ಹಾಗೂ 149 ಅಂಗನವಾಡಿ ಸಹಾಯಕಿಯರನ್ನು ಗೌರವ ಸೇವೆಯ ಮೇಲೆ ಭರ್ತಿ ಮಾಡಲು ಈ ಹಿಂದೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.
ಈ ಬಗ್ಗೆ ಕಳೆದ ಜುಲೈ 29 ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಆಗಸ್ಟ್ 31 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಆನ್‌ಲೈನ್‌ನಲ್ಲಿ ಒಟ್ಟು 4 ಹಂತಗಳಲ್ಲಿ ಅರ್ಜಿ ಭರ್ತಿ ಮಾಡಬೇಕಾಗಿದ್ದು, ಮೊದಲ ಹಂತದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬುವುದು.
ಎರಡನೇ ಹಂತದಲ್ಲಿ ಭಾವಚಿತ್ರ ಹಾಗೂ ಸಹಿ ಮಾದರಿ ಅಪ್‌ಲೋಡ್ ಮಾಡುವುದು. ಮೂರನೇ ಹಂತದಲ್ಲಿ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು. ನಾಲ್ಕನೇ ಹಂತದಲ್ಲಿ ಆಧಾರ್ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿತ್ತು. ಆದರೆ ಕೆಲವರಿಗೆ ಮೊದಲನೇ ಹಂತದಲ್ಲಿಯೇ ಯಶಸ್ವಿಯಾಗಿ ಅರ್ಜಿ ಸ್ವೀಕೃತವಾಗಿದೆ ಎಂದು ಇಂಗ್ಲೀಷ್‌ನಲ್ಲಿ ಅಭ್ಯರ್ಥಿಗಳ ಮೊಬೈಲ್ ಸಂಖ್ಯೆಗೆ ಸಂದೇಶ ರವಾನೆಯಾಗದೆ.
ಈ ಹಿನ್ನಲೆಯಲ್ಲಿ 1009 ಅರ್ಜಿಗಳಲ್ಲಿ 499 ಅರ್ಜಿಗಳು ಅಪೂರ್ಣವಾಗಿ ಸ್ವೀಕೃತವಾಗಿವೆ.
4 ಹಂತಗಳನ್ನು ಪೂರ್ಣಗೊಳಿಸದ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾತ್ರ ಡಿ.26 ರಿಂದ ಜನವರಿ 05 ಸಂಜೆ 5:30 ರವರೆಗೆ ಅಪೂರ್ಣ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸದ ಜಿಲ್ಲೆಯ 499 ಅಭ್ಯರ್ಥಿಗಳ ವಿವರಗಳನ್ನು ಆಯಾ ಅಂಗನವಾಡಿ ಕೇಂದ್ರ, ಗ್ರಾಮ ಪಂಚಾಯಿತಿ,
ಶಾಲೆಗಳು ಹಾಗೂ ಶಿಶು ಅಭಿವೃದ್ದಿ ಯೋಜನೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಲಾಗಿದೆ. ಜುಲೈ 29ಕ್ಕೆ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಸಂಬAಧಿಸಿದ ದಾಖಲಾತಿಗಳನ್ನು ಮಾತ್ರ ಅರ್ಜಿ ಪರಿಶೀಲನೆಯಲ್ಲಿ ಪರಿಗಣಿಸಲಾಗುವುದು. ಷರತ್ತು ಹಾಗೂ ಮಾನದಂಡಗಳು ಇದೇ ಅಧಿಸೂಚನೆಗೆ ಒಳಪಟ್ಟಿರುತ್ತವೆ. ಸಂಬಂಧಿಸಿದ ಅಭ್ಯರ್ಥಿಗಳು https://karnemakaone.kar.nic.in/abcd ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.