ಚಿನ್ನದ ಗಣಿಗಾರಿಕೆ ಪುನರಾರಂಭಿಸಲು ಕೇಂದ್ರ ಸಚಿವ ಕುಮಾರಸ್ವಾಮಿ, ಜಿ. ಕಿಶನ್ ರೆಡ್ಡಿ ಸ್ಪಂದನೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕು ಇಂಗಳದಾಳಿನಿಂದ ಹಿಂದೆ ಕೈಗೊಳ್ಳಲಾಗುತ್ತಿದ್ದ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿದ್ದು, ಇದನ್ನು ಪುನರಾರಂಭಿಸುವಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ.

  ಕುರಿತಂತೆ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಳೆದ ಸೆಪ್ಟೆಂಬರ್ 09 ರಂದು ಮನವಿ ಪತ್ರ ಸಲ್ಲಿಸಿದ್ದರು.  1886 ರಲ್ಲಿ ಇಂಗಳದಾಳಿನಲ್ಲಿ ತಾಮ್ರದ ಗಣಿಗಾರಿಕೆ ಪ್ರಾರಂಭವಾಗಿತ್ತು,

ಬಳಿಕ ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಅವರು ಕೈಗೊಂಡ ಸರ್ವೆ ಬಳಿಕ ಇಂಗಳದಾಳು, ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪವಿರುವುದನ್ನು ಗುರುತಿಸಿತ್ತು.  

1972 ರಲ್ಲಿ ಇಂಗಳದಾಳು ತಾಮ್ರದ ಘಟಕ ಪ್ರಾರಂಭಗೊಂಡು, ಬಳಿಕ ಇದನ್ನು ಹಟ್ಟಿ ಚಿನ್ನದ ಗಣಿಯೊಂದಿಗೆ ವಿಲೀನಗೊಳಿಸಲಾಗಿತ್ತು.  1994 ರಲ್ಲಿ ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಚಿನ್ನದ ನಿಕ್ಷೇಪ ಇರುವುದನ್ನು ಖಚಿತಪಡಿಸಿಕೊಂಡು, ಭಾಗದಲ್ಲಿ ಹಟ್ಟಿ ಚಿನ್ನದ ಗಣಿಯ ಸಹಯೋಗದಲ್ಲಿ 2002 ರವರೆಗೂ ಗಣಿಗಾರಿಕೆ ನಡೆಸಲಾಗಿತ್ತು.

 ಗಣಿ ತಜ್ಞರು ಮತ್ತು ಭೂವಿಜ್ಞಾನಿಗಳು ಅಜ್ಜನಹಳ್ಳಿ ಮತ್ತು ಜಿ.ಆರ್. ಹಳ್ಳಿ ಸುತ್ತಮುತ್ತ ಉತ್ತಮ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪವಿದ್ದು, ಚಿನ್ನದ ಗಣಿಗಾರಿಕೆಗೆ ಸೂಕ್ತವಾಗಿದೆ ಎಂಬುದಾಗಿ ತಿಳಿಸಿದ್ದು, ಕುರಿತಂತೆ ಸಂಬಂಧಪಟ್ಟವರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ, ಚಿತ್ರದುರ್ಗದ ಚಿನ್ನದ ಗಣಿಗಾರಿಕೆ ಘಟಕವನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದರು.

 ಇದಕ್ಕೆ ಸ್ಪಂದಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವರಿಗೆ ಪತ್ರ ಬರೆದು ವಿನಂತಿಸಿಕೊಂಡಿದ್ದರು.  ಇದೀಗ ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್ ರೆಡ್ಡಿ ಅವರು ಕೂಡ ಸ್ಪಂದಿಸಿದ್ದು, ಚಿತ್ರದುರ್ಗ ಚಿನ್ನದ ಗಣಿಗಾರಿಕೆ ಘಟಕ ಪುನರಾರಂಭಿಸಲು ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.  

ಚಿತ್ರದುರ್ಗ ಚಿನ್ನದ ಗಣಿಗಾರಿಕೆ ಪುನರಾರಂಭಕ್ಕೆ ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಸಲ್ಲಿಸಿರುವ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.

- Advertisement -  - Advertisement - 
Share This Article
error: Content is protected !!
";