ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಸಾಣಿಕೆರೆ ಗ್ರಾಮ ಪಂಚಾಯಿತಿ ಸೇರಿದಂತೆ ಹಲವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ವಿದ್ಯಾರ್ಥಿಗಳು ಪ್ರತಿನಿತ್ಯ ಚಳ್ಳಕೆರೆ ನಗರದ ಶಾಲಾ, ಕಾಲೇಜುಗಳಿಗೆ ಆಗಮಿಸಲು ಕೆಎಸ್‌ಆರ್‌ಟಿಸಿ ಬಸ್‌ಗಳನ್ನೇ ಅವಲಂಬಿಸಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಬೆಳಗಿನ ಸಮುದಾಯದಲ್ಲಿ ಶಾಲಾ ಕಾಲೇಜು ಆಗಮಿಸುಗ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲಿ ನಿಲ್ಲದೆ ಹೋಗುತ್ತಿರುವುದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದ್ದು ಮಂಗಳವಾರ ರಾಷ್ಟ್ರೀಯ ಹೆದ್ದಾರಿ ತಡೆದು ಬಸ್‌ಗಳ ನಿಲುಗಡೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬೆಳಗಿನ ಸಮಯದಲ್ಲಿ ಈ ಭಾಗದಲ್ಲಿ ಸಂಚರಿಸುವ ಹಲವಾರು ಬಸ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಮೇಲ್ಸುತುವೆ ಮೇಲೆ ತಡೆದ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿನಿತ್ಯ ನಮಗೆ ಶಾಲಾ, ಕಾಲೇಜಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಯಾವುದೇ ಬಸ್‌ಗಳು ಕೆಳಭಾಗದಲ್ಲಿ ಚಲಿಸುತ್ತಿಲ್ಲ, ಎಲ್ಲವೂ ಮೇಲ್ಭಾಗದಲ್ಲಿ ಹೋದರೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಗತಿ ಏನು. ಪ್ರತಿನಿತ್ಯ ವಿದ್ಯಾರ್ಥಿಗಳು ಬಸ್‌ಗಳ ನಿಲುಗಡೆ ಇಲ್ಲದೆ ತಮ್ಮ ವಿದ್ಯಾಭ್ಯಾಸವನ್ನೇ ಮೊಟಕುಗೊಳಿಸುವ ಸ್ಥಿತಿ ತಲುಪಿದ್ದಾರೆಂದು ತಮ್ಮ ಅಳಲನ್ನು ತೋಡಿಕೊಂಡರು.
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಕೂಡಲೇ ಚಳ್ಳಕೆರೆ ಡಿಪೋ ವ್ಯವಸ್ಥಾಪಕರಿಗೆ ಸಂಪರ್ಕಿಸಿ ಮಾತನಾಡಿದಾಗ ಸಾಣಿಕೆರೆ ಗ್ರಾಮದಲ್ಲಿ ಕಡ್ಡಾಯವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲುಗಡೆಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ವಿದ್ಯಾರ್ಥಿಗಳು ತಮ್ಮ ಮುಷ್ಕರವನ್ನು ವಾಪಾಸ್ ಪಡೆದರು.