ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
1924ರಲ್ಲಿ ಮಹಾತ್ಮ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸ್ಮರಣಾರ್ಥ ಬೆಳಗಾವಿಯ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ (ಸಿಡಬ್ಲ್ಯುಸಿ) ಸಭೆ ಗುರುವಾರ ನಡೆದಿದ್ದು, ಸಭೆಯಲ್ಲಿ ಮಹತ್ವದ ಚರ್ಚೆಗಳು ಆಗಿವೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಾರ್ಯಕಾರಿ ಸಮಿತಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕಾಂಗ್ರೆಸ್ಸಿಗೆ ಐತಿಹಾಸಿಕ ಸಭೆ ಆಗಿದೆ. ಕಾಂಗ್ರೆಸ್ಸಿಗರೆಲ್ಲರೂ ಹೆಮ್ಮೆ ಪಡುವಂಥ ದಿನ. ಗಾಂಧೀಜಿ ಎಐಸಿಸಿ ಅಧ್ಯಕ್ಷರಾಗಿ ಸಮ್ಮೇಳನ ನಡೆಸಿದ ಸ್ಥಳ ಇದು. 100 ವರ್ಷದ ಬಳಿಕ ಮತ್ತೆ ಇದೇ ಸ್ಥಳದಲ್ಲಿ ಸಭೆ ನಡೆದಿದೆ.
ಅದೇ ಪರಂಪರೆ ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಕಾರ್ಯಕಾರಿ ಸಭೆಯಲ್ಲಿ ಪ್ರಮುಖ ಎರಡು ನಿರ್ಣಯಗಳನ್ನು ಕಾಂಗ್ರೆಸ್ ತೆಗೆದುಕೊಂಡಿದೆ. 2025ರಲ್ಲಿ ಸಂಘಟನೆಗೆ ಪರಿವರ್ತನೆ ತರಲು ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳುವುದು ಹಾಗೂ 2025 ಜನವರಿ ತನಕ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಕಾರ್ಯಕ್ರಮ ಬಗ್ಗೆ ನಿರ್ಣಯ ಕೈಗೊಂಡಿದೆ.
ಬೂತ್ಮಟ್ಟದಿಂದ ಮೇಲಿನವರೆಗೂ ಬದಲಾವಣೆ ತರುತ್ತೇವೆ. ಸಂಘಟನೆ ದೃಷ್ಟಿಯಿಂದ ಮಹತ್ವದ ಬದಲಾವಣೆ ಮಾಡುತ್ತೇವೆ. ನಾಯಕತ್ವ ಯಾರಿಗೆ ಇದೆ ಅವರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದರು.
ಮುಂದಿನ 13 ತಿಂಗಳ ಕಾಲ ನಿರಂತರ ಸಮಾವೇಶ ರ್ಯಾಲಿ ಪಾದಯಾತ್ರೆ, ಸೆಮಿನಾರ್ ಮಾಡುತ್ತೇವೆ. ಬೃಹತ್ ಸಮಾವೇಶಗಳಲ್ಲಿ ಸಂವಿಧಾನದ ಮೇಲಿನ ದಾಳಿ ಖಂಡಿಸುತ್ತೇವೆ. ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡುತ್ತೇವೆ. ನಿರಂತರ ಕ್ಯಾಂಪೇನ್ ನಡುವೆಯೂ ಸಂಘಟನಾತ್ಮಕ ಬದಲಾವಣೆ ಇರುತ್ತದೆ. ಏಪ್ರಿಲ್ ನಲ್ಲಿ ಗುಜರಾತ್ ನಲ್ಲಿ ಎಐಸಿಸಿ ಸಮಾವೇಶ ಆಯೋಜಿಸಲಾಗಿದೆ ಎಂದು ವೇಣುಗೋಪಾಲ್ ಮಾಹಿತಿ ನೀಡಿದರು.
ಚುನಾವಣಾ ಆಯೋಗದ ವಿರುದ್ಧ ಬೇಸರ ವ್ಯಕ್ತಪಡಿಸಿದ ವೇಣುಗೋಪಾಲ್ , ಚುನಾವಣಾ ಆಯೋಗದ ಮೇಲೆ ಜನರಿಗೆ ನಂಬಿಕೆ ಉಳಿದಿಲ್ಲ. ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ವ್ಯತ್ಯಾಸ ಆಗಿದೆ. ಇವೆರಡು 2 ರಾಜ್ಯಗಳ ಚುನಾವಣೆಯಲ್ಲಿ ಲೋಪದೋಷಗಳಾಗಿವೆ. ಹೀಗಾಗಿ ಚುನಾವಣಾ ಆಯೋಗದ ವಿರುದ್ದ ಸಮರ ಸಾರಲು ಹೋರಾಟ ಮಾಡಲಾಗುತ್ತದೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ.ಅಂಬೇಡ್ಕರ್ ಕುರಿತು ನೀಡಿರುವ ಹೇಳಿಕೆ ಪ್ರಸ್ತಾಪಿಸಿ ಸಂವಿಧಾನದ ನಿರ್ಮಾಪಕನಿಗೆ ಅವಮಾನ ಮಾಡಲಾಗಿದೆ. ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದೆ. ದೇಶಾದ್ಯಂತ ಅಮಿತ್ ಶಾ ವಿರುದ್ಧ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮತ್ತು ಸರ್ಕಾರ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ರಾಜೀನಾಮೆ ಕೇಳುವ ಬದಲು ಮೋದಿ ಅಮಿತ್ ಶಾಗೆ ಬೆಂಬಲಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ರಕ್ಷಣೆಗೆ ಪ್ರಧಾನಿ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದರು.
ದೇಶದ ಸಾಂವಿಧಾನಿಕ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐ ಸೇರಿದಂತೆ ಮತ್ತಿತರ ಸಂಸ್ಥೆಗಳ ಮೇಲೆ ಬಿಜೆಪಿಯವರು ಹಿಡಿತ ಸಾಧಿಸುತ್ತಿದ್ದಾರೆ. ಚುನಾವಣಾ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಜನರ ನಂಬಿಕೆ ಕ್ರಮೇಣ ಕಡಿಮೆಯಾಗುತ್ತಿರುವುದು ಕಳವಳಕಾರಿ. ಕೆಲ ದಿನಗಳ ಹಿಂದೆ ಅವರು ಕೋರ್ಟ್ ಆದೇಶದ ಮಾಹಿತಿ ಹಂಚಿಕೊಳ್ಳಲು ಚುನಾವಣಾ ನಿಯಮಗಳನ್ನು ಬದಲಾಯಿಸಿದರು ಎಂದು ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು.
ಮತದಾರರ ಹೆಸರು ಪಟ್ಟಿಯಿಂದ ಅಳಿಸಿ ಹೋಗುವುದು. ಕೆಲವೊಮ್ಮೆ ಮತದಾನ ಮಾಡದಂತೆ ತಡೆಯುವುದು, ಕೆಲವೊಮ್ಮೆ ಪಟ್ಟಿಯಲ್ಲಿ ಮತದಾರರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ. ಕೊನೆಯ ಕ್ಷಣದಲ್ಲಿ ಅನಿರೀಕ್ಷಿತವಾಗಿ ಮತದಾನದ ಪ್ರಮಾಣ ಹೆಚ್ಚಾಗುವುದು, ಈ ಕೆಲ ಪ್ರಶ್ನೆಗಳು ಉದ್ಭವಿಸುತ್ತಲೇ ಇರುತ್ತವೆ. ಇವುಗಳಿಗೆ ಯಾವುದೇ ತೃಪ್ತಿಕರ ಉತ್ತರ ಕಂಡುಬಂದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.