ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದಕ್ಷಿಣ ಭಾರತದಲ್ಲೇ ಜಾನುವಾರುಗಳ ಜಾತ್ರೆಗೆ ಶ್ರೀ ಘಾಟಿ ಸುಬ್ರಮಣ್ಯ ಜಾನುವಾರು ಜಾತ್ರೆ ಪ್ರಖ್ಯಾತಿಯನ್ನು ಪಡೆದಿದೆ. ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ಮುಂತಾದ ರಾಜ್ಯಗಳ ಜಾನುವಾರು ಜಾತ್ರೆಯಲ್ಲಿ ಸಿಗದ ಎತ್ತುಗಳು ಘಾಟಿ ಜಾನುವಾರು ಜಾತ್ರೆಯಲ್ಲಿ ಕಾಣ ಸಿಗುವುದರಿಂದ ಈ ಜಾತ್ರೆಗೆ ಹೆಚ್ಚಿನ ಮಹತ್ವ ಬಂದಿದೆ.
ಅದರಲ್ಲೂ ವ್ಯವಸಾಯಕ್ಕೆ ಯೋಗ್ಯವಾದ ಪ್ರಮುಖ ಹಳ್ಳಿಕಾರ್ ತಳಿ ಎತ್ತುಗಳು ಮಾರಾಟವಾಗುವುದು ಜಾತ್ರೆಯ ವಿಶೇಷ ಎಂದು ಹೇಳಬಹುದು. ದೊಡ್ಡಬಳ್ಳಾಪುರ ತಾಲೂಕಿನ ಸುತ್ತಲಿನ ತಾಲೂಕುಗಳಲ್ಲದೆ ಬೆಂಗಳೂರು ನಗರ, ಹಾಸನ, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಹಳೆ ಮೈಸೂರು ಭಾಗದ ಸಂಪ್ರದಾಯಿಕ ರೈತರು ತಲೆಮಾರುಗಳಿಂದ ತಮ್ಮ ಎತ್ತುಗಳನ್ನು ಮಾರಾಟಕ್ಕಾಗಿಯೇ ಘಾಟಿ ಜಾತ್ರೆಗೆ ತರುತ್ತಾರೆ.
ಅದರಲ್ಲೂ ಹಳೆ ಮೈಸೂರು ಭಾಗದ ಎತ್ತುಗಳು ಉತ್ತರ ಕರ್ನಾಟಕದ ಕಪ್ಪು ಮಣ್ಣಿನ ವ್ಯವಸಾಯಕ್ಕೆ ಚನ್ನಾಗಿ ಒಗ್ಗುತ್ತವೆ ಎಂಬುದು ಉತ್ತರ ಕರ್ನಾಟಕದ ರೈತರ ನಂಬಿಕೆ. ಜೊತೆಗೆ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ ರೈತರು ಸಹ ಈ ಭಾಗದ ಎತ್ತುಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಹಾಗಾಗಿ ಎತ್ತುಗಳನ್ನು ಕೊಳ್ಳುವುದಕ್ಕಾಗಿಯೇ ಘಾಟಿ ಜಾತ್ರೆಯಲ್ಲಿ ವಾರಗಟ್ಟಲೆ ಬಂದು ತಂಗುತ್ತಾರೆ.
ದಶಕಗಳ ಹಿಂದೆ ಎರಡು ವಾರಕ್ಕೂ ಹೆಚ್ಚು ಕಾಲ ನಡೆಯುತ್ತಿದ್ದ ಘಾಟಿ ಜಾನುವಾರು ಜಾತ್ರೆ ಈಗ ನಾಲ್ಕೈದು ದಿನಗಳಲ್ಲಿ ಜಾನುವಾರುಗಳ ಜಾತ್ರೆ ಮುಕ್ತಾಯ ಹಂತಕ್ಕೆ ಬಂದಿದೆ. ಅಂದರೆ ಘಾಟಿ ಜಾತ್ರೆಯಲ್ಲಿ ಜಾನುವಾರುಗಳ ವ್ಯಾಪಾರ ತ್ವರಿತ ಗತಿಯ ವೇಗ ಪಡೆದು ಕೊಂಡಿದೆ ಎಂದರ್ಥ.
ಹಾಗಾಗಿ ಎತ್ತುಗಳನ್ನು ಕೊಳ್ಳಲು ದೂರದಿಂದ ಬರುವ ರೈತರು ಜಾತ್ರೆ ಸೇರುವ ಒಂದೆರಡು ದಿನ ಮುಂಚಿತವಾಗಿ ಘಾಟಿಯಲ್ಲಿ ಹಾಜರಿರುತ್ತಾರೆ. ಹಾಗಾಗಿ ವ್ಯಾಪಾರ ವಹಿವಾಟು ಬೇಗನೆ ಮುಗಿಯುತ್ತದೆ. ಮೊದಲೆಲ್ಲ ನೂರುಗಳಿಗೆ ಮಾರಾಟವಾಗುತ್ತಿದ್ದ ಜೊತೆ ಎತ್ತುಗಳ ಬೆಲೆ ಈಗ ಲಕ್ಷಗಳಿಗೆ ಏರಿದೆ ಎಂಬುದು ಗಮನಾರ್ಹ ಸಂಗತಿ.
ಕೊರೋನಾ ಸಮಸ್ಯೆಯಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಘಾಟಿ ಜಾನುವಾರು ಜಾತ್ರೆಗೆ ಮಾರಾಟಗಾರರು ಬರದೇ ಕಳೆ ಗುಂದಿದಂತಿತ್ತು. ಆದರೆ ಈಭಾರಿ ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಕ್ಕೆ ಬಂದಿವೆ. ಅದರಲ್ಲೂ ಹಳ್ಳಿಕಾರ್ ತಳಿಯ ಎತ್ತುಗಳು ಜಾತ್ರೆಯ ತುಂಬೆಲ್ಲ ಅವರಿಸಿರುವುದು ಕಂಡು ಬರುತ್ತಿದೆ.
ಜೊತೆಗೆ ನಾಲ್ಕೈದು ವರ್ಷಗಳಿಂದ ಜಾನುವಾರುಗಳನ್ನು ಕೊಳ್ಳಲು ಬರದಿದ್ದ ಹೊರ ರಾಜ್ಯಗಳ ವ್ಯಾಪಾರಸ್ಥರು ಈ ಬಾರಿ ಅಧಿಕ ಸಂಖ್ಯೆಯಲ್ಲಿ ಬಂದು ವ್ಯಾಪಾರಕ್ಕೆ ಹೆಚ್ಚಿನ ಇಂಬು ಕೊಟ್ಟಿದ್ದಾರೆ.
ಇನ್ನು ಎತ್ತುಗಳ ಬೆಲೆಗಳ ಬಗ್ಗೆ ನೋಡುವುದಾದರೆ ಐವತ್ತು ಸಾವಿರದ ಎಳೆಗರುಗಳಿಂದ ಹಿಡಿದು ಹತ್ತು ಹನ್ನೆರಡು ಲಕ್ಷದ ಭರ್ಜರಿ ಎತ್ತುಗಳು ಜಾತ್ರೆಯಲ್ಲಿ ಮಾರಾಟಕ್ಕೆ ಬಂದಿವೆ. ಈ ಬಗ್ಗೆ ದೊಡ್ಡಬಳ್ಳಾಪುರ ತಾಲೂಕಿನ ಆಲಹಳ್ಳಿಯ ಯುವ ರೈತ ಯಶವಂತ್ ಮಾತನಾಡಿ, ನಾನು ಕಳೆದ ನಾಲ್ಕೈದು ವರ್ಷಗಳಿಂದ ಹಲವಾರು ಜಾತ್ರೆಗಳಲ್ಲಿ ಎತ್ತುಗಳನ್ನು ಮಾರಾಟ ಮಾಡಿದ್ದೇನೆ. ಈ ಬಾರಿಯೂ ಘಾಟಿ ಜಾತ್ರೆಗೆ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದೇನೆ.
ಕಳೆದ ಬಾರಿ ಈ ಜಾತ್ರೆಯಲ್ಲಿ ನಾಲ್ಕರಿಂದ ಆರು ಹಲ್ಲಿನ ಸುಮಾರಾದ ಎತ್ತುಗಳು ಎಂಬತ್ತು ಸಾವಿರದಿಂದ ಒಂದು ಲಕ್ಷಕ್ಕೆ ಸಿಗುತ್ತಿತ್ತು. ಆದರೆ ಈ ಬಾರಿ ಅದೇ ವಯೋಮಾನದ ಎತ್ತುಗಳ ಬೆಲೆ ಎರಡು ಲಕ್ಷಕ್ಕೇರಿದೆ. ನಾನು ಕೂಡಾ ಎರಡು ಲಕ್ಷಕ್ಕೆ ಮಾರಾಟ ಮಾಡಿದ್ದೇನೆ. ಕಳೆದ ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮವಾದ ಎತ್ತುಗಳು ಮಾರಾಟಕ್ಕೆ ಬಂದಿವೆ. ಹಾಗೆಯೇ ಕೊಳ್ಳುವವರು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಈ ಬಾರಿ ಉತ್ತಮ ವ್ಯಾಪಾರಗಳಾಗುತ್ತಿವೆ. ಅದರಲ್ಲೂ ಹಾವೇರಿ, ಬಳ್ಳಾರಿ, ಹುಬ್ಬಳ್ಳಿ ರೈತರು ಹೆಚ್ಚಾಗಿ ಎತ್ತುಗಳನ್ನು ಖರೀದಿಸಿದ್ದಾರೆ ಎನ್ನುತ್ತಾರೆ.
ದೊಡ್ಡಬಳ್ಳಾಪುರ ನಗರದ ತೇರಿನ ಬೀದಿಯ ರೈತ ಮೂರ್ತಣ್ಣ ಹೇಳಿದ್ದು ಹೀಗೆ ನಾನು ಸುಮಾರು ಇಪ್ಪತ್ತು ವರ್ಷಗಳಿಂದ ಘಾಟಿ ಜಾತ್ರೆಗೆ ನಮ್ಮ ತಂದೆ ಜೊತೆಯಲ್ಲಿ ಜಾತ್ರೆಗೆ ಎತ್ತುಗಳನ್ನು ಮಾರಾಟಕ್ಕೆ ತಂದಿದ್ದೇನೆ. ಆಗಿನ ಕಾಲಕ್ಕೆ ಬರಿ ಮುನ್ನೂರು ರೂಗಳಿಗೆ ಮಾರಾಟ ಮಾಡಿದ್ದೇನೆ. ನಮ್ಮ ತಾತನ ಕಾಲದಿಂದ ಈಗ ನಮ್ಮ ಮಕ್ಕಳ ವರೆಗೂ ಮೂರು ತಲೆಮಾರು ವರೆಗೂ ಘಾಟಿ ಜಾತ್ರೆ ಯನ್ನು ಕಂಡಿದ್ದೇವೆ.
ಆಗ ನೂರುಗಳಿದ್ದ ಎತ್ತುಗಳ ಬೆಲೆ ಈಗ ಲಕ್ಷಳನ್ನು ಮುಟ್ಟಿದೆ. ನಮ್ಮ ಸುತ್ತಿನ ಎತ್ತುಗಳೆಂದರೆ ಉತ್ತರ ಕರ್ನಾಟಕ, ಆಂಧ್ರ, ತಮಿಳುನಾಡು ರೈತರು ಇಷ್ಟ ಪಟ್ಟು ಖರೀದಿಸುತ್ತಾರೆ. ನಾನು ಈಗಾಗಲೇ ಎರಡು ದಿವಸದಲ್ಲಿ ನಾಲ್ಕು ಜೊತೆ ಎತ್ತುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದ್ದೇನೆ. ಜೊತೆಗೆ ಇಲ್ಲೇ ಒಂದು ಜೊತೆ ಎತ್ತುಗಳನ್ನು ಖರೀದಿಸಿದ್ದೇನೆ. ಪ್ರತಿ ವರ್ಷವೂ ನಮಗೆ ಘಾಟಿ ಜಾತ್ರೆ ಎತ್ತುಗಳ ಮಾರಾಟದಲ್ಲಿ ಲಾಭವನ್ನು ತಂದು ಕೊಟ್ಟಿದೆ ಎನ್ನುತ್ತಾರೆ.
ನಗರದ ಮತ್ತೊಬ್ಬ ರೈತ ದೆಪೆದಾರ್ ಬಾಬು ಜೊತೆ ಮಾತನಾಡಿದಾಗ ಹಿಂದೆ ನಮ್ಮ ಹಿರಿಯರು ಮಾರಾಟಕ್ಕೆ ಎತ್ತುಗಳನ್ನು ಘಾಟಿ ಜಾತ್ರೆಗೆ ತರುತ್ತಿದ್ದರು. ಈಗ ನಾನು ಅದನ್ನು ಮುಂದುವರೆಸಿದ್ದೇನೆ. ಈಗ ತಂದಿರುವ ಜೊತೆ ಎತ್ತುಗಳ ಬೆಲೆ ಆರು ಲಕ್ಷ ವ್ಯಾಪಾರ ಹೇಳುತ್ತಿದ್ದೇನೆ. ಅಷ್ಟಕ್ಕೇ ಮಾರಾಟವಾಗುವ ಭರವಸೆ ಇದೆ. ಘಾಟಿ ಜಾತ್ರೆಗೆ ಉತ್ತರದವರು ಬಂದರೆ ಮಾತ್ರ ವ್ಯಾಪಾರ ಚನ್ನಾಗಿ ಆಗುತ್ತದೆ.
ಅವರು ಬರಲಿಲ್ಲವೆಂದರೆ ಸ್ವಲ್ಪ ಕಷ್ಟ. ಈ ಬಾರಿ ಕೊಳ್ಳುವವರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಆದ್ದರಿಂದ ಉತ್ತಮ ಮಾರಾಟ ನಡೆಯುತ್ತಿದೆ. ಜೊತೆಗೆ ಈ ಬಾರಿ ಸರ್ಕಾರದ ವತಿಯಿಂದ ಹಾಗೂ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ರೈತರಿಗೆ ಉಚಿತ ಊಟ, ಕುಡಿಯಲು ನೀರು, ಉಚಿತ ವಿದ್ಯುತ್ ಸೌಲಭ್ಯ ಒದಗಿಸಿದ್ದಾರೆ. ಹಾಗಾಗಿ ರೈತರಿಗೆ ಯಾವುದೇ ತೊಂದರೆಯಿಲ್ಲದೇ ವ್ಯಾಪಾರ ಸೇರಿದಂತೆ ಎಲ್ಲವೂ ಉತ್ತಮವಾಗಿದೆ ಎನ್ನುತ್ತಾರೆ.
ಒಟ್ಟಾರೆ ಈ ಬಾರಿ ಜಾತ್ರೆಯಲ್ಲಿ ಮಾರಾಟಕ್ಕೆ ಬಂದಿರುವ ಎತ್ತುಗಳ ಪ್ರದರ್ಶನಕ್ಕೆ ಮಹಲಿನ ರೀತಿಯ ಪೆಂಡಾಲ್,ವಿದ್ಯುತ್ ದೀಪಾಲಂಕಾರ,ಎತ್ತುಗಳನ್ನು ಸಿಂಗರಿಸಿರುವ ರೀತಿ ನೋಡುಗರನ್ನು ಕಣ್ಮನ ಸೆಳೆದಿದೆ.ಜೊತೆಗೆ ರೈತರೇ ಹೇಳುವಂತೆ ಸರ್ಕಾರದಿಂದ ಉತ್ತಮ ಸೌಲಭ್ಯಗಳು ಕೆಲವು ಸಂಘಟನೆಗಳಿಂದ ಉಚಿತ ಮೇವು ವಿತರಣೆ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು.
ಸಿಂಗಾರ ಗೊಂಡ ಎತ್ತುಗಳನ್ನು ನೋಡಲೆಂದೆ ಸಾವಿರಾರು ಜನ ಜಾನುವಾರು ಪ್ರೇಮಿಗಳು ಘಾಟಿ ಜಾತ್ರೆಗೆ ಆಗಮಿಸಿದ್ದು ವಿಶೇಷ ವೆಂತಲೇ ಹೇಳಬಹುದು. ವರ್ಷದಿಂದ ವರ್ಷಕ್ಕೆ ಘಾಟಿ ಜಾನುವಾರು ಜಾತ್ರೆ ಆದುನಿಕ ಯುಗದಲ್ಲೂ ತನ್ನದೇ ಆದ ಪ್ರಾಮುಖ್ಯತೆ ಹೆಚ್ಚಿಸಿಕೊಂಡಿರುವುದು ವಿಶೇಷ ಎನ್ನಬಹುದು.