ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ (92) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಗುರುವಾರ 8:06ಕ್ಕೆ ಸಿಂಗ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ, ರಾತ್ರಿ 9:15ರ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆ ಗಳಿಸಿದರು.
ಆರ್ಥಿಕ ಸುಧಾರಣೆಗಾಗಿ ಮತ್ತು ಪರಿವರ್ತಿಸುವ ಉದ್ದೇಶದಿಂದ ಆರ್ಥಿಕವಾಗಿ ವ್ಯಾಪಕ ಸುಧಾರಣೆಗಳನ್ನು ತಂದರು. ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು.
ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಅವರದಾಗಿದೆ.