ಸಿನಿಮಾ ನಟರ ಭ್ರಮಾಲೋಕ ಕಳಚಿದ ಸಿಎಂ ರೇವಂತ್ ರೆಡ್ಡಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಿನಿಮಾ ನಟರ ಭ್ರಮಾಲೋಕ ಕಳಚಿದ ತೆಲಂಗಾಣ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ………ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರು ಇತ್ತೀಚೆಗೆ ಪುಷ್ಪ 2 ಸಿನಿಮಾ ಬಿಡುಗಡೆ ಸಂದರ್ಭದಲ್ಲಿ, ಆ ಸಿನಿಮಾದ ನಾಯಕ ನಟ ಅಲ್ಲು ಅರ್ಜುನ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ, ಕಾಲ್ತುಳಿತದಿಂದ ಒಬ್ಬ ಮಹಿಳೆ ಸತ್ತು ಆಕೆಯ ಮಗು ಇನ್ನೂ ಆಸ್ಪತ್ರೆಯಲ್ಲಿರುವಾಗ ಸಿನಿಮಾ ನಟರುಗಳ ಬಗೆಗಿನ ಮಾತುಗಳು, ಅವರು ಕೈಗೊಂಡ ಕಾನೂನು ಕ್ರಮದ ಬಗ್ಗೆ ಒಂದಷ್ಟು ಚರ್ಚೆಗಳು ನಡೆಯುತ್ತಿವೆ…..

 ವೈಯಕ್ತಿಕವಾಗಿ ಈ ವಿಷಯದಲ್ಲಿ ತೆಲಂಗಾಣ ಸರ್ಕಾರದ ನಡೆಯ ಬಗ್ಗೆ ನನಗೆ ಒಂದಷ್ಟು ಸಮಾಧಾನವಿದೆ. ಅಲ್ಲು ಅರ್ಜುನ್ ನೇರ ಆರೋಪಿಯೋ ಅಥವಾ ಸರಿ ತಪ್ಪು ಯಾವುದೇ ಇರಲಿ ಅದಕ್ಕಿಂತ ಮುಖ್ಯವಾದದ್ದು ಯಾವುದೆಂದರೆ, ಮುಖ್ಯಮಂತ್ರಿಗಳು ಹೇಳಿದಂತೆ ಸಿನಿಮಾ ಒಂದು ವಾಣಿಜ್ಯ ಉದ್ಯಮವಿದ್ದಂತೆ. ವ್ಯಾಪಾರ, ವ್ಯವಹಾರದಂತೆ ಬಂಡವಾಳ ಹೂಡಿಕೆ ಮಾಡುತ್ತಾರೆ, ಲಾಭ – ನಷ್ಟ ಅನುಭವಿಸುತ್ತಾರೆ. ನಟನಟಿಯರು ಹಣ ಪಡೆದು ನಟಿಸುತ್ತಾರೆ. ಎಂದಿನಂತೆ ಲಾಭ ನಷ್ಟಗಳು ಇದ್ದೇ ಇರುತ್ತದೆ. ಅದಕ್ಕಿಂತ ಹೊರತಾದ ಹೆಚ್ಚೇನು ಅವರಲ್ಲಿ ಇರುವುದಿಲ್ಲ, ಇಂತಹ ವಿಷಯಗಳಲ್ಲಿ ಸಿನಿಮಾ ನಟರಿಗೆ ವಿಶೇಷ ಆದ್ಯತೆ ಕೊಡಬೇಕಾಗಿಲ್ಲ, ಎಲ್ಲರಂತೆ ಅವರನ್ನೂ ಕಾನೂನಿನ ವ್ಯಾಪ್ತಿಗೆ ಒಳಪಡಿಸಿದ್ದೇವೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ….

 ಕೃತಕ ಬಣ್ಣ ಹಚ್ಚಿ, ಕೃತಕವಾಗಿ ಹೀರೋ ಅಥವಾ ಸೂಪರ್ ಮ್ಯಾನ್ ಅಥವಾ ಸಕಲಕಲಾವಲ್ಲಭರಂತೆ ತೆರೆಯ ಮೇಲೆ ಮಿಂಚುವ ಮನರಂಜನಾ ಉದ್ಯಮದ ನಾಯಕ ನಾಯಕಿಯರು, ಸಮಾಜದಲ್ಲಿ ಅತಿಮಾನುಷ ವ್ಯಕ್ತಿಗಳಂತೆ ಬಿಂಬಿತವಾಗುತ್ತಿರುವುದು, ಮಾಧ್ಯಮಗಳು ಮತ್ತು ಜನರು ಅವರನ್ನು ದೈವಿಕ ಶಕ್ತಿವಂತರಂತೆ ಆರಾಧಿಸುತ್ತಿರುವುದು, ಅವರ ಸಿನಿಮಾ ಬಿಡುಗಡೆಯ ಸಮಯದಲ್ಲಿ ಅನಾವಶ್ಯಕವಾಗಿ ಅತ್ಯಂತ ಹೆಚ್ಚು ಪ್ರಚಾರ ನೀಡುವುದು, ಅದರಿಂದ ಪ್ರಾಣಹಾನಿ ಆಗುವುದು, ಇದಕ್ಕೆ ಸ್ವಲ್ಪಮಟ್ಟಿಗೆ ಕಡಿವಾಣ ಹಾಕಬೇಕಾಗಿತ್ತು. ಅವರ ಬಗ್ಗೆ ಇದ್ದ ಭ್ರಮೆಗಳನ್ನು ಕಳಚಬೇಕಾಗಿತ್ತು. ಆ ಕೆಲಸವನ್ನು ರೇವಂತ್ ರೆಡ್ಡಿ ಅವರು ಮಾಡಿದ್ದಾರೆ ಎನ್ನುವ ಒಂದು ಸಮಾಧಾನವಿದೆ……

 ಏಕೆಂದರೆ ಕೆಜಿಎಫ್, ಅನಿಮಲ್, ಪುಷ್ಪ 1 – 2 ಈ ರೀತಿಯ ಸರಣಿ ಸಿನಿಮಾಗಳು ಸಮಾಜಕ್ಕೆ ಅತ್ಯಂತ ಮಾರಕವಾಗುವ, ಕಳ್ಳತನ, ದರೋಡೆ, ವಂಚನೆ, ಕೊಲೆ, ಅನೈತಿಕತೆ, ಸುಲಿಗೆ, ಸ್ಮಗ್ಲಿಂಗನ್ನೇ ವಿಜೃಂಭಿಸುವ, ಪೊಲೀಸರ ಮೇಲೆ ಹಲ್ಲೆ ಮಾಡುವ, ತಾವೊಬ್ಬರೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ಹೀರೋಗಳ ಪಾತ್ರಗಳು ಖಂಡಿತವಾಗಲೂ ಸಮಾಜಕ್ಕೆ ಬಹುದೊಡ್ಡ ಮಾರಕ ರೋಗದಂತಿದೆ. ಅನೇಕ ಯುವಕರು ಆ ಸಿನಿಮಾಗಳ ಪ್ರಭಾವಕ್ಕೊಳಗಾಗಿ ದಾರಿ ತಪ್ಪುತ್ತಿದ್ದಾರೆ…..

 ಸಿನಿಮಾಗಳನ್ನು ಸಿನಿಮಾಗಳಂತೆಯೇ ನೋಡಬೇಕು ಅದರಲ್ಲಿ ಒಳ್ಳೆಯದೂ ಇರುತ್ತದೆ, ಕೆಟ್ಟದ್ದೂ ಇರುತ್ತದೆ, ಆಯ್ಕೆ ನಮಗೆ ಬಿಟ್ಟಿದ್ದು ಎಂಬ ಸಾಮಾನ್ಯ ಅಭಿಪ್ರಾಯಗಳನ್ನು ನಾವು ಪುನರ್ ವಿಮರ್ಶೆಗೆ ಮತ್ತು ಆತ್ಮ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾಗಿದೆ. ಏಕೆಂದರೆ ಈಗಾಗಲೇ ಮೊಬೈಲ್ ತಂತ್ರಜ್ಞಾನದ ವಿಡಿಯೋಗಳಿಗೆ ಮಾರುಹೋಗಿ ನಿಯಂತ್ರಣ ತಪ್ಪುತಿದ್ದಾರೆ. ಈಗ ಈ ರೀತಿಯ ಸಿನಿಮಾಗಳು 15 ರಿಂದ 30 ವರ್ಷದ ಯುವಕರ ಮನಸ್ಥಿತಿಯ ಮೇಲೆ ಬೀರುವ ಪರಿಣಾಮ, ಅದರಿಂದ ನಮ್ಮ ಮಕ್ಕಳು ಸಮಾಜದ ಮೇಲೆ ಹಾಕುತ್ತಿರುವ ಒತ್ತಡ, ಅವರನ್ನು ನಿಯಂತ್ರಿಸಲು ಪೋಷಕರು ಪಡುತ್ತಿರುವ ಕಷ್ಟ ಈ ಎಲ್ಲವನ್ನು ಗಮನಿಸಿ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ…..

 ಎಲ್ಲರಿಗೂ ತಿಳಿದಿರುವಂತೆ ಸಿನಿಮಾಗಳಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯದಿದ್ದರೆ ಬಹುತೇಕ ಇಡೀ ಸಿನಿಮಾದಲ್ಲಿ ಕೆಟ್ಟದ್ದನ್ನೇ ವಿಜೃಂಭಿಸಲಾಗಿರುತ್ತದೆ. ಸಹಜವಾಗಿಯೇ ಅದು ಒಂದು ಭ್ರಮಾಲೋಕ ಸೃಷ್ಟಿಸಿ ಯುವಕರಿಗೆ ಕೆಟ್ಟದ್ದನ್ನು ಆಕರ್ಷಿಸುವಂತೆ ಮಾಡುತ್ತದೆ. ಈ ಅಪಾಯವನ್ನು ನಿಜಕ್ಕೂ ಗಂಭೀರವಾಗಿ ತೆಗೆದುಕೊಳ್ಳಬೇಕು. ಇದು ಕೇವಲ ಸಿನಿಮಾಗಳಿಗೆ ಮಾತ್ರವಲ್ಲ ಧಾರವಾಹಿಗಳಿಗೂ ಸಹ ಅನ್ವಯಿಸುತ್ತದೆ‌…..

 ಈ ಕಾರಣದಿಂದಲೇ ರೇವಂತ್ ರೆಡ್ಡಿ ಅವರ ಹೇಳಿಕೆಗಳು ಒಂದಷ್ಟು ಸಮಾಧಾನಕರ ಎನಿಸುವುದು. ಅವರ ಧೈರ್ಯವನ್ನು ಮೆಚ್ಚಲೇಬೇಕಾಗುತ್ತದೆ. ಇದನ್ನು ಪಕ್ಷಾತೀತವಾಗಿ ನಾವು ಸ್ವೀಕರಿಸಬೇಕು…..

 ಮನರಂಜನೆ ಎಂಬುದು ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಅದೇ ಊಟವಾಗಬಾರದು. ಈಗ ಮಾಧ್ಯಮಗಳು ಈ ಉಪ್ಪಿನಕಾಯಿಯನ್ನೇ ಊಟವೆಂಬಂತೆ ಸಮಾಜಕ್ಕೆ ಬಡಿಸುತ್ತಿವೆ ಅಥವಾ ಹಾಗೆ ವರ್ತಿಸುತ್ತಿವೆ. ಯಾವುದೋ ನಾಯಕನಟ ತನ್ನಲ್ಲಿರುವ ಹಣದಿಂದ ಒಂದೆರಡು ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ಆತ ತನ್ನ ಸಿನಿಮಾಗಳಲ್ಲಿ ಅತ್ಯಂತ ಕೆಟ್ಟ ದೃಶ್ಯಗಳನ್ನು ಮಾಡುವ ಅಥವಾ ಕೆಟ್ಟ ಹಾನಿಕಾರಕ ಜಾಹೀರಾತುಗಳಲ್ಲಿ ನಟಿಸುವ ಅರ್ಹತೆ ಪಡೆಯುವುದಿಲ್ಲ…..

 ಒಂದು ವಿಷಯ ನೆನಪಿರಲಿ, ಒಳ್ಳೆಯ ಕೆಲಸಗಳನ್ನು ಎಷ್ಟು ಬೇಕಾದರೂ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಅದು ಅವರವರ ಆಯ್ಕೆ. ಆದರೆ ಒಂದೇ ಒಂದು ಕೆಟ್ಟ ಕೆಲಸವನ್ನು ಮಾಡಬಾರದು. ಮಾಡಿದರೆ ಎಲ್ಲಾ ಒಳ್ಳೆಯ ಕೆಲಸಗಳನ್ನು ಪಕ್ಕಕ್ಕಿಟ್ಟು ಕೆಟ್ಟ ಕೆಲಸವನ್ನು ಖಂಡಿಸಬೇಕಾಗುತ್ತದೆ….

 ಹಾವನ್ನು ಹೊಡೆದು ಹದ್ದಿಗೆ ಆಹಾರವಾಗಿ ಹಾಕಿ ನಾನು ಮಹಾ ಉಪಕಾರ ಮಾಡಿದ್ದೇನೆ ಎನ್ನುವ ಮನೋಭಾವ ಒಳ್ಳೆಯದಲ್ಲ. ಯಾವುದೋ ಕಷ್ಟದಲ್ಲಿರುವ ನೂರು ಜನರನ್ನು ರಕ್ಷಿಸಿದ ಮಾತ್ರಕ್ಕೆ ನೂರೊಂದನೆಯ ವ್ಯಕ್ತಿಯನ್ನು ಕೊಲ್ಲುವುದು ಸಾಧ್ಯವೇ ? ನ್ಯಾಯವೇ ?…ಹಾಗೆಯೇ ನಿರಂತರ ಒಳ್ಳೆಯ ಕೆಲಸಕ್ಕೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಕೆಟ್ಟ ಕೆಲಸ ಮಾತ್ರ ನಿಷಿದ್ಧ……

 ಸಿನಿಮಾ ನಟರನ್ನು ವಿಮರ್ಶಿಸಲು, ಟೀಕಿಸಲು ಸದ್ಯದ ಸಂದರ್ಭದಲ್ಲಿ ಬಹಳ ಕಷ್ಟವಾಗುತ್ತಿದೆ. ಏಕೆಂದರೆ ಅವರಿಗೆ ತೀರಾ ಆಳಕ್ಕಿಳಿದ ಅಂದ ಭಕ್ತರು ಅಥವಾ ಅಂದಾಭಿಮಾನಿಗಳಿರುತ್ತಾರೆ. ಆ ಹೀರೋಗಳ ಟೀಕೆಗಳನ್ನು ಅವರು ಸಹಿಸುವುದಿಲ್ಲ. ಅಂತಹವರ ಮೇಲೆ ಹಲ್ಲೆ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಹೀರೋಗಳ ಬಗ್ಗೆ, ಅವರ ಭ್ರಮೆಗಳನ್ನು ಕಳಚಲು ಶ್ರೀ ರೇವಂತ್ ರೆಡ್ಡಿ ಅವರು ಆಡಿದ ಮಾತುಗಳು, ಆ ಸ್ಥಾನದಲ್ಲಿ ನಿಂತು ಹೇಳಿದ ಖಡಕ್ ಎಚ್ಚರಿಕೆ ನಿಜಕ್ಕೂ ಮೆಚ್ಚುವಂತದ್ದು…….

 ಹಾಗೆಯೇ ಶಿಕ್ಷಕರು, ಸ್ವಾಮೀಜಿಗಳು, ಪತ್ರಕರ್ತರು, ಸಮಾಜದ ನಿಜವಾದ ಹಿತಾಸಕ್ತಿಯನ್ನು ಬಯಸುವವರು ಸಿನಿಮಾ ಒಂದು ಮನರಂಜನಾ ಮಾಧ್ಯಮ, ಕಲಾ ಮಾಧ್ಯಮ, ಅದನ್ನು ಹೊರತುಪಡಿಸಿ ಮತ್ಯಾವುದೇ ವಿಶೇಷ ಗುಣಗಳೇನು ಇಲ್ಲ. ನಟರು ಸಹ ಸಾಮಾನ್ಯರಂತೆ ಈ ದೇಶದ ಪ್ರಜೆಗಳು. ಆದ್ದರಿಂದ ಅವರನ್ನು ವಿಶೇಷವಾಗಿ ಗುರುತಿಸಲು ಯಾವುದೇ ಕಾರಣವಿಲ್ಲ. ಅವರ ಸಿನಿಮಾಗಳನ್ನು ಚೆನ್ನಾಗಿದ್ದರೆ ನೋಡಲು ಅಡ್ಡಿಯಿಲ್ಲ, ಆದರೆ ಕೆಟ್ಟ ಸಿನಿಮಾಗಳನ್ನು ಅವು ಯಶಸ್ವಿಯಾಗಿದ್ದರೂ ಕೂಡ ಸಮಾಜಕ್ಕೆ ಮಾರಕವಾಗುವಂತಿದ್ದರೆ ಅದನ್ನು ಖಂಡಿಸಲೇಬೇಕು ಮತ್ತು ಖಂಡಿಸುತ್ತಲೇ ಇರೋಣ….

 ಇದು ಎಲ್ಲಾ  ಚಿತ್ರರಂಗದ, ಎಲ್ಲಾ ಭಾಷೆಯ, ಎಲ್ಲಾ ಧಾರಾವಾಹಿಯ ನಟ ನಟಿ ಮತ್ತು ಇತರ ಪಾತ್ರಗಳಿಗೂ ಏಕಪ್ರಕಾರವಾಗಿ ಅನ್ವಯಿಸುತ್ತದೆ…….
ಲೇಖನ: ವಿವೇಕಾನಂದ. ಎಚ್. ಕೆ. 9844013068…….

 

 

- Advertisement -  - Advertisement - 
Share This Article
error: Content is protected !!
";