ಕುವೆಂಪುರವರ ವೈಚಾರಿಕತೆ, ವೈಜ್ಞಾನಿಕತೆ ಇಂದಿಗೂ ಪ್ರಸ್ತುತ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುವೆಂಪುರವರ ವೈಚಾರಿಕತೆ ಪ್ರಜ್ಞೆ, ಹಾಗೂ ವಿಶ್ವಮಾನವ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ದಾದಾಪೀರ್ ನವಿಲೆಹಾಳ್ ಅಭಿಪ್ರಾಯಪಟ್ಟರು.

ತಾಲೂಕಿನ ಸೀಬಾರದ ವಿಶ್ವಮಾನವ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಅವರ 121 ನೇ ಜನ್ಮದಿನಾಚರಣೆ ಅಂಗವಾಗಿ, ಚಿತ್ರದುರ್ಗ ಸೈನ್ಸ್ ಫೌಂಡೇಶನ್, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶೇಷ ಉಪನ್ಯಾಸ ಹಾಗೂ ಬಹುಮಾನ ವಿತರಣೆ ಸಮಾರಂಭದಲ್ಲಿ ಡಾ.ಮಲ್ಲಿಕಾರ್ಜುನಪ್ಪ ಮತ್ತು ಸುಲೋಚನಮ್ಮ ಇವರ ದತ್ತಿ ಉಪನ್ಯಾಸ ನೀಡಿ ಮಾತನಾಡಿದರು.

ಕುವೆಂಪುರವರನ್ನು ಅಧ್ಯಯನ ಮಾಡುವುದು ತುಂಬಾ ಕಷ್ಟ. ಕುವೆಂಪುರವರು ಇಂಗ್ಲೀಷ್ ಪ್ರೇಮಿಯಾಗಿದ್ದರೂ, ಕನ್ನಡದ ಮೇಲಿನ ಸೆಳೆತ, ವ್ಯಾಮೋಹ ಅಪ್ರತಿಮವಾಗಿತ್ತು. ಕನ್ನಡ ಭಾಷೆಯ ಮೇಲಿನ ಆಸಕ್ತಿಯನ್ನು ಚಿಕ್ಕ ವಯಸ್ಸಿನಲ್ಲಿಯೇ ಬೆಳೆಸಿಕೊಂಡರು. ತಮ್ಮ ಕಾವ್ಯಗಳ ಮೂಲಕ ಕನ್ನಡಿಗರಿಗೆ ಎಚ್ಚರಿಸುತ್ತಿದ್ದರು.

ಅವರ ಕಾವ್ಯಗಳು, ನಾಟಕಗಳು, ಇಂದಿಗೂ ಎಲ್ಲರ ಗಮನ ಸೆಳೆಯುತ್ತಿವೆ. ಇಂಗ್ಲೀಷ್ ಸಾಹಿತ್ಯವನ್ನು ಕನ್ನಡದಲ್ಲಿ ಓದುವ, ಬರೆಯುವ ಮೂಲಕ ಕನ್ನಡಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿದರು. ಒಟ್ಟಿನಲ್ಲಿ ಎಲ್ಲರನ್ನೂ, ಎಲ್ಲವನ್ನೂ ಒಂದುಗೂಡಿಸುವ ಶಕ್ತಿ ಕನ್ನಡ ಭಾಷೆಗಿದೆ. ಸರ್ವರ ಕಾಲವನ್ನು ವೈಜ್ಞಾನಿಕವಾಗಿ ನಾವೆಲ್ಲರೂ ಆಚರಿಸಬೇಕಿದೆ.

ಧಾರ್ಮಿಕ, ಸಾಮಾಜಿಕ ವಿಷಯಗಳಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸುವ ಕೆಲಸವಾಗಬೇಕಿದೆ. ಲಿಂಗಸಮಾನತೆ, ವರ್ಗಸಮಾನತೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಎಲ್ಲರನ್ನೂ ವಿಶ್ವಮಾನವರನ್ನಾಗಿಸುವದೇ ನಿಜವಾದ ಶಿಕ್ಷಣ ಎಂದು ವಿಶ್ವಮಾನವ ಸಂದೇಶ ಸಾರಿದರು ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಮಾತನಾಡಿ, ಕುವೆಂಪುರವರ ಹೆಸರಿನಲ್ಲಿ ಶಾಲೆಗಳು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕುವೆಂಪುರವರನ್ನು ಒಳಗೊಂಡಂತೆ ಎಲ್ಲಾ ಕವಿಗಳು, ಸಾಹಿತಿಗಳು ಕನ್ನಡ ಭಾಷೆಯ ಬೆಳವಣಿಗೆಗೆ ಪ್ರಾಧಾನ್ಯತೆ ನೀಡಿದರು. ಕುವೆಂಪುರವರ ವಿಚಾರಕ್ರಾಂತಿಗೆ ನಾವೆಲ್ಲರೂ ಕೈ ಜೋಡಿಸೋಣ” ಎಂದರು.

ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪನವರ ದತ್ತಿ ನಿಧಿಯಿಂದ ಪ್ರಬಂಧ ಸ್ಪರ್ಧೆ, ಏಕಪಾತ್ರಾಭಿನಯ, ನಾಟಕ ಓದುವ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಚಿತ್ರದುರ್ಗ ಸೈನ್ಸ್ ಫೌಂಡೇಷನ್ ಅಧ್ಯಕ್ಷ ಡಾ.ಜಿ. ಎನ್.ಮಲ್ಲಿಕಾರ್ಜುನಪ್ಪ ನವಾರು ಬಹುಮಾನ ವಿತರಿಸಿ ಮಾತನಾಡಿ, ವಿಶ್ವಮಾನವ ದೃಷ್ಟಿಯಲ್ಲಿ ಸಮಾಜ ಹಾಗೂ ದೇಶವನ್ನು ಕಟ್ಟಬೇಕಿದೆ ಎಂದರು.

ವಿಶ್ವಮಾನವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೆನ್ಸ್ ಫೌಂಡೇಶನ್ ಕಾರ್ಯದರ್ಶಿ ಎಚ್.ಎಸ್.ಟಿ.ಸ್ವಾಮಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ಜಲೀಲ್ ಸಾಬ್, ಎಚ್.ಆರ್.ಸುಧಾ, ಚನ್ನಬಸಪ್ಪ ಉಪಸ್ಥಿತರಿದ್ದರು. ಉಪನ್ಯಾಸಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.

 

 

- Advertisement -  - Advertisement - 
Share This Article
error: Content is protected !!
";