ಕೊಟ್ಟಿದ್ದು 13×20, ಕಟ್ಟಿದ್ದು 18×60, ಹೇಳುವವರು ಕೇಳುವವರು ಯಾರೂ ಇಲ್ಲವೇ

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರಿನ ತಾಲ್ಲೂಕು ಕಛೇರಿ ಪಕ್ಕದ ಎಸ್ ಬಿಐ ಬ್ಯಾಂಕ್ ಹತ್ತಿರ ಶ್ರೀಕನಕ ನೌಕರರ  ಕ್ಷೇಮಾಭಿವೃದ್ಧಿ ಸಂಘಕ್ಕೆ ದಿನಾಂಕ 04-01-2021ರಂದು ನಡೆದ ನಗರಸಭೆ ಸಭೆಯಲ್ಲಿ 12.9×20 ಅಡಿ ಜಾಗವನ್ನು ಸರ್ಕಾರದ ನಿಯಾಮವಳಿಗಳ ಪ್ರಕಾರ ಮಂಜೂರು ಮಾಡಿದ್ದರು.

ಆ ಸಂಘದವರು ಅಕ್ರಮವಾಗಿ 18×60 ಅಡಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಬಗ್ಗೆ ದಿನಾಂಕ13-12-2024ರಂದು ಮಹಾನಾಯಕ ದಲಿತಸೇನೆ ಸಂಘಟನೆಯ ವತಿಯಿಂದ ಯೋಜನಾ ನಿರ್ದೇಶಕರು ಜಿಲ್ಲಾ ನಗರಕೋಶ ಚಿತ್ರದುರ್ಗ ಇವರಿಗೆ ದೂರು ನೀಡಲಾಗಿತ್ತು.

ದೂರಿನನ್ವಯ ಯೋಜನಾ ಅಧಿಕಾರಿಗಳು ಸಂಬಂಧ ಪಟ್ಟ ನಗರಸಭೆ ಅಧಿಕಾರಿಗಳಿಗೆ ವಿವರಣೆ ಕೇಳಿ ನೋಟಿಸ್ ಜಾರಿ ಮಾಡಿದ್ದರು ಕೂಡ ಆ ಸಂಘದವರು ಅಕ್ರಮವಾಗಿ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶ್ರೀಶೈಲ ವೃತ್ತದ ಹತ್ತಿರ ಇರುವ ಕಾಂಗ್ರೆಸ್ ಪಕ್ಷದ ಜಾಗದಲ್ಲಿ ವಾಸಮಾಡುತ್ತಿರುವ ಬಡವರ ಮನೆಯನ್ನು ಏಕಾಏಕಿ ತೆರವುಗೊಳಿಸಿದ ನಗರಸಭೆ ಅಧಿಕಾರಿಗಳಿಗೆ ಇಷ್ಟೊಂದು ಜಾಗವನ್ನು ಆಕ್ರಮಿಸಿಕೊಂಡು ಅಕ್ರಮವಾಗಿ ಕಟ್ಟುತ್ತಿರುವುದು ಕಂಡರು ಕಾಣದ ಹಾಗೇ ಇರುವುದು ಏತಕ್ಕೆ ಎನ್ನುವುದೇ ಅನುಮಾನವಾಗಿದೆ.

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯವೆನ್ನುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಈ ಅಕ್ರಮ ಕಟ್ಟಡ ತೆರವುಗೊಳಿಸುವಂತೆ ಹಾಗೂ ಹೆಚ್ಚುವರಿ ಜಾಗದಲ್ಲಿ ಕಟ್ಟಿರುವ ಕಟ್ಟಡವನ್ನು ಹಿರಿಯೂರು ತಾಲ್ಲೂಕಿನ ಎಲ್ಲಾ ರೈತ /ಕನ್ನಡ /ದಲಿತ /ಮತ್ತು ಪ್ರಗತಿಪರ ಸಂಘಟನೆಗಳ ಕಛೇರಿಗೆ  ಬಿಟ್ಟು ಕೊಡಬೇಕೆಂದು ಒತ್ತಾಯಿಸಿ ಶೀಘ್ರದಲ್ಲೇ ನಗರಸಭೆ ಅಧಿಕಾರಿಗಳ ವಿರುದ್ಧ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.

ಇದು ಯಾವುದೇ ಸಮಾಜದ ವಿರುದ್ಧ ನಡೆಸುತ್ತಿರುವ ಹೋರಾಟವಲ್ಲಾ ನಗರಸಭೆ ವ್ಯಾಪ್ತಿಯಲ್ಲಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಯ ಉಳಿವುಗಾಗಿ ಹೋರಾಟ ಮಾಡುವುದಾಗಿ ಮಹಾನಾಯಕ ದಲಿತಸೇನೆ ಸಂಘಟನೆಯ ಕೆ.ಪಿ.ಶ್ರೀನಿವಾಸ್ ಮತ್ತಿತರರು ಎಚ್ಚರಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";