ಕೆಪಿಎಸ್‌ಸಿ ಎಲ್ಲ ಪರೀಕ್ಷೆಗಳಲ್ಲೂ ಗೊಂದಲಗಳು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್‌ಸಿ ನಡೆಸುತ್ತಿರುವ ಪ್ರತಿಯೊಂದು ಪರೀಕ್ಷೆಗಳಲ್ಲೂ ಗೊಂದಲಗಳು
, ಲೋಪಗಳು, ಭಾಷಾಂತರ ದೋಷಗಳ ಮೂಲಕ ಕೆಪಿಎಸ್‌ಸಿ ನ್ಯೂನತೆಗಳು ಬಯಲಾಗುತ್ತಲೇ ಇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.

 ಡಿಸೆಂಬರ್ 29 ರಂದು ನಡೆದ ಕೆಎಎಸ್ ಪೂರ್ವಭಾವಿ ಮರುಪರೀಕ್ಷೆಯ ಪ್ರವೇಶಪತ್ರ ಬಿಡುಗಡೆ ಮಾಡಿದ್ದ ಕೆಪಿಎಸ್‌ಸಿ ಕನ್ನಡ ಭಾಷೆಯಲ್ಲಿರುವ ಯಾವುದೇ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಗೊಂದಲವಾದಲ್ಲಿ ಆಂಗ್ಲ ಭಾಷೆಯ ಪ್ರಶ್ನೆಗಳನ್ನು ನೋಡಿ ಅರ್ಥ ಮಾಡಿಕೊಳ್ಳಿ ಎಂದು ಅಭ್ಯರ್ಥಿಗಳಿಗೆ ಸೂಚಿಸುವ ಮೂಲಕ ತಮ್ಮ ಎಡವಟ್ಟುಗಳನ್ನು ಮಾಡಿಯೇ ಸಿದ್ಧ ಎಂಬ ಮುನ್ಸೂಚನೆ ನೀಡಿತ್ತು, ಇದೀಗ ಮತ್ತೆ ಭಾಷಾಂತರ ಲೋಪ ಹಾಗೂ ಕೆಲ ಜಿಲ್ಲೆಗಳಲ್ಲಿ ಒಎಂಆರ್ ಶೀಟ್ ಸಂಖ್ಯೆಗಳೇ ಅದಲು-ಬದಲಾಗಿರುವುದು ಪರೀಕ್ಷಾರ್ಥಿಗಳನ್ನು ಮತ್ತಷ್ಟು ಆತಂಕಕ್ಕೆ ತಳ್ಳಲ್ಪಟ್ಟಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದಿನ ಪರೀಕ್ಷೆಯಲ್ಲೂ ಕನ್ನಡ ಭಾಷಾ ಪರೀಕ್ಷಾರ್ಥಿಗಳಿಗೆ ಸಮರ್ಪಕವಾಗಿ ಭಾಷಾಂತರಿಸದೇ ಯಡವಟ್ಟು ಮಾಡಿ ಲಕ್ಷಾಂತರ ಪರೀಕ್ಷಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಕರ್ನಾಟಕದ ಮಾತೃಭಾಷೆಯಲ್ಲಿಯೇ ಸೂಕ್ತ ಪ್ರಶ್ನೆಗಳನ್ನು ನೀಡುವಲ್ಲಿ ಸಂಪೂರ್ಣ ವಿಫಲವಾಗಿ ಪದೇ ಪದೇ ಕೆಎಎಸ್ ಪರೀಕ್ಷಾರ್ಥಿಗಳನ್ನು ಗೊಂದಲಕ್ಕೆ ದೂಡುತ್ತಿರುವ ಬೇಜವಾಬ್ದಾರಿತನ ಪದೇ ಪದೇ ಮರುಕಳಿಸುತ್ತಿರುವುದು ಕೆಪಿಎಸ್‌ಸಿ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಅಸಮರ್ಥ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

ಕಠಿಣ ಪರಿಶ್ರಮದಿಂದ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಬರೆಯುವ ಸಾವಿರಾರು ಉದ್ಯೋಗಾಕಾಂಕ್ಷಿಗಳ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅಲ್ಲದೇ ಕೆಪಿಎಸ್ಸಿ ಎಡವಟ್ಟುಗಳಿಗೆ ಸಂಪೂರ್ಣ ಕಡಿವಾಣ ಹಾಕಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪರೀಕ್ಷಾರ್ಥಿಗಳ ಪರ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

 

 

- Advertisement -  - Advertisement - 
Share This Article
error: Content is protected !!
";