ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗುತ್ತಿಗೆದಾರ ಸಚಿನ್ ಸಾವಿಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಯಾವುದೇ ಸಂಬಂಧವಿಲ್ಲ, ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವ ಅಗತ್ಯವಿಲ್ಲ, ನಮ್ಮದು ಸ್ವಚ್ಛ ಆಡಳಿತದ ಸರ್ಕಾರ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯದಮವರೊಂದಿಗೆ ಸೋಮವಾರ ಮಾತನಾಡಿದ ಅವರು, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಪಾತ್ರವಿಲ್ಲ. ಆತ್ಮಹತ್ಯೆ ಪತ್ರದಲ್ಲಿ ಅವರ ಹೆಸರು ಕೂಡಾ ಬರೆದಿಲ್ಲ. ಬೇರೆಯವರ ಮೇಲೆ ಆರೋಪ ಮಾಡಿದಾಕ್ಷಣ ಇವರು ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಾಮಾಣಿಕತೆ ಬಗ್ಗೆ ನಮಗೆ ಗೊತ್ತಿದೆ. ಗುತ್ತಿಗೆದಾರನ ಸಾವಿನ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಯುತ್ತದೆ ಎಂದು ತಿಳಿಸಿದರು.

ಅವರ ಫೋಟೋ ಬಿಡುಗಡೆ ಮಾಡಲೇ :
ರಾಜು ಎಂಬುವರು ನಿಮ್ಮ ಜತೆ
, ಸಿಎಂ, ಪ್ರಿಯಾಂಕ್ ಖರ್ಗೆ ಅವರ ಜತೆ ಇರುವ ಫೋಟೋಗಳನ್ನು ವಿಜಯೇಂದ್ರ ಅವರು ಬಿಡುಗಡೆ ಮಾಡಿರುವ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನನ್ನ ಜೊತೆ ವಿಜಯೇಂದ್ರ, ಯಡಿಯೂರಪ್ಪ ಅವರು ಇರುವ ಫೋಟೋಗಳಿವೆ.

ನಮ್ಮ ಮನೆಗೆ ಬಂದವರು, ಮದುವೆ ಕಾರ್ಯಕ್ರಮಕ್ಕೆ ಹೋದಾಗ ಅನೇಕರು ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ವಿಜಯೇಂದ್ರ, ಯಡಿಯೂರಪ್ಪ ಅವರು ಕ್ರಿಮಿನಲ್, ರೌಡಿಗಳು ಸೇರಿದಂತೆ ಯಾರೆಲ್ಲರ ಜತೆ ಫೋಟೋ ತೆಗೆಸಿಕೊಂಡಿದ್ದಾರೆ ಎಂದು ನಾನು ಬಿಡುಗಡೆ ಮಾಡಲೇ? ಎಂದು ಡಿಕೆಶಿ ಪ್ರಶ್ನಿಸಿ ಮಾಧ್ಯಮದವರಿಗೆ ಶಾಕ್ ನೀಡಿದರು.

ಆರೋಪಿತರು ನಮ್ಮ ಜತೆ ಮಾತುಕತೆ, ವ್ಯವಹಾರ ನಡೆದಿರುವುದಕ್ಕೆ ದಾಖಲೆ ಇದ್ದರೆ ಆರೋಪ ಮಾಡಲಿ. ನಾವು ಉತ್ತಮವಾಗಿ ಸರ್ಕಾರ ನಡೆಸುತ್ತಿದ್ದು, ವಿರೋಧ ಪಕ್ಷದವರು ಸುಮ್ಮನೆ ಮಾತಾಡಬೇಕು ಎಂಬ ಕಾರಣಕ್ಕೆ ಮಾತನಾಡುತ್ತಾರೆ. ಮಾತಾಡಲಿ ಬಿಡಿ ಎಂದು ಅವರು ಹೇಳಿದರು.

ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಮುತ್ತಿಗೆ ಹಾಕುವ ವಿಚಾರವಾಗಿ ಪ್ರತಿಕ್ರಿಯಿಸಿ, ಮುತ್ತಿಗೆ ಹಾಕಲಿ. ನನ್ನ ಸಹೋದರ ಸುರೇಶ್, ರಾಜರಾಜೇಶ್ವರಿ ನಗರದ ಕೆಲವು ಪ್ರಕರಣಗಳನ್ನು ಪ್ರಸ್ತಾಪಿಸಿದ್ದಾರೆ. ಅವೆಲ್ಲವನ್ನು ಸೇರಿಸಿ ಸಿಬಿಐಗೆ ವಹಿಸೋಣ ಎಂದು ಡಿಸಿಎಂ ಮಾರ್ಮಿಕವಾಗಿ ನುಡಿದರು.
ಬಿಜೆಪಿ ಸರ್ಕಾರ ಇದ್ದಾಗ ನನ್ನ ಪ್ರಕರಣವನ್ನು ಮಾತ್ರ ಸಿಬಿಐಗೆ ನೀಡಿದ್ದರು.

ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಡಿ.ಕೆ ರವಿ ಸಾವು, ಸೌಜನ್ಯ ಸಾವು, ಪರೇಶ್ ಮೆಸ್ತಾ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣಗಳನ್ನು ಸಿಬಿಐ ತನಿಖೆಗೆ ನೀಡಿದ್ದೆವು. ಬಿಜೆಪಿಯವರು ನನ್ನ ಪ್ರಕರಣದ ಜತೆ ಬಿಜೆಪಿ ಸಚಿವರ ಪ್ರಕರಣಗಳನ್ನು ಸಿಬಿಐಗೆ ನೀಡಬೇಕಿತ್ತು. ಯಾಕೆ ನೀಡಲಿಲ್ಲ?. ಇದು ಸಿಬಿಐಗೆ ನೀಡಬೇಕಾದ ಪ್ರಕರಣವಲ್ಲ. ನಮ್ಮ ತನಿಖಾ ಸಂಸ್ಥೆಗಳು ಈ ಪ್ರಕರಣಗಳ ತನಿಖೆ ಮಾಡಲು ಸಮರ್ಥವಾಗಿವೆ. ಅಧಿಕಾರಿಗಳು ಸಮರ್ಥರಾಗಿದ್ದಾರೆ. ಸಿಬಿಐ ತನಿಖೆ ವೈಖರಿ ನಮಗೂ ಗೊತ್ತಿದೆ ಎಂದು ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.

ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರು ಯಾವ ತಪ್ಪು ಮಾಡಿದ್ದಾರೆ ಎಂದು ರಾಜೀನಾಮೆ ನೀಡಬೇಕು? ಪ್ರಿಯಾಂಕ್ ಖರ್ಗೆ ನಮ್ಮ ಪಕ್ಷದ ಧ್ವನಿ. ಅವರ ಮೇಲಿನ ಅಸೂಯೆಗೆ ವಿರೋಧ ಪಕ್ಷಗಳು ಈ ರೀತಿ ನಡೆದುಕೊಳ್ಳುತ್ತಿವೆ.

ದಲಿತ ಸಮುದಾಯದ ನಾಯಕ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದನ್ನು ಸಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಐಟಿ-ಬಿಟಿ ಇಲಾಖೆಯನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಎಸ್​. ಎಂ ಕೃಷ್ಣ ಅವರ ಸರ್ಕಾರದ ನಂತರ ಐಟಿ-ಬಿಟಿ ಕ್ಷೇತ್ರದಲ್ಲಿ ರಾಜ್ಯವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವುದು ಪ್ರಿಯಾಂಕ್ ಖರ್ಗೆ. ಹೀಗಾಗಿ ಅವರನ್ನು ಕೆಳಗಿಳಿಸುವ ಸಂಚು ಮಾಡುತ್ತಿದ್ದಾರೆ ಎಂದು ಡಿಸಿಎಂ ಶಿವಕುಮಾರ್ ಆರೋಪಿಸಿದರು.

 

- Advertisement -  - Advertisement - 
Share This Article
error: Content is protected !!
";