ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ ಆರಂಭ- ರೈಲ್ವೆ ಸಚಿವರು

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಮೈಸೂರಿ ಜಿಲ್ಲೆಯ ಕೆ.ಆರ್.ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಕೇಂದ್ರ
ಆರಂಭಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವ ಹೆಚ್. ಡಿ ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ತಮ್ಮನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ ಕುಮಾರಸ್ವಾಮಿ ಅವರ ಮನವಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ರೈತ್ವೆ ಸಚಿವರು, ಇದು ಅತ್ಯಂತ ಮಹತ್ವದ ಪ್ರಸ್ತಾವನೆ. ಈ ಬಗ್ಗೆ ಖುದ್ದು ತಾವೇ ಗಮನ ಹರಿಸುವುದಾಗಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮೈಸೂರು ಜಿಲ್ಲೆಯ ಕೆ. ಆರ್ ನಗರದಲ್ಲಿ ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ತೆರೆಯುವಂತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರೈಲ್ವೆ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು. ರೈಲ್ವೆ ಸುರಕ್ಷತೆಗೆ ಮೈಸೂರು ಭಾಗದಲ್ಲಿ ಹೆಚ್ಚು ಆದ್ಯತೆ ಕೊಡಬೇಕಿದೆ ಹಾಗೂ ಈ ಭಾಗದಲ್ಲಿ ಪ್ರಯಾಣಿಕರ ದಟ್ಟಣೆಯು ಹೆಚ್ಚಾಗಿದ್ದು, ಒಟ್ಟಾರೆ ರೈಲ್ವೆ ಸುರಕ್ಷತೆಯು ಮಹತ್ವದ ಅಂಶವಾಗಿದೆ ಎಂದು ಮನವಿ ಮಾಡಿದರು. ತಕ್ಷಣವೇ ಗಮನ ಹರಿಸುವುದಾಗಿ ರೈಲ್ವೆ ಸಚಿವರು ಕುಮಾರಸ್ವಾಮಿ ಅವರಿಗೆ ಭರವಸೆ ನೀಡಿದರು.

ಹೆಚ್​ ಡಿ ದೇವೇಗೌಡರು ಪ್ರಧಾನಿಯಾಗಿದ್ದಾಗ ಕೆ. ಆರ್ ನಗರದಲ್ಲಿದ್ದ ಹಳೆಯ ರೈಲು ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿತ್ತು. ಹಳೆಯ ನಿಲ್ದಾಣದ ಜಾಗ ಹಾಗೆಯೇ ಖಾಲಿ ಉಳಿದಿದ್ದು, ಭೂಸ್ವಾಧೀನದ ಸಮಸ್ಯೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆರು.

 ರೈಲ್ವೆ ರಕ್ಷಣಾ ಪಡೆಯ ತರಬೇತಿ ಶಾಲೆ ಬಂದರೆ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಆಗುತ್ತದೆ. ಸ್ಥಳೀಯ ಯುವಕರಿಗೆ ಪ್ರತ್ಯಕ್ಷ, ಪರೋಕ್ಷವಾಗಿ ದುಡಿಮೆಗೆ ಅವಕಾಶ ಲಭ್ಯವಾಗುತ್ತದೆ. ಮೈಸೂರು ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸಚಿವರು ಹೇಳಿದರು.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ಬಾಕಿ ಇರುವ ವಿವಿಧ ರೈಲ್ವೆ ಯೋಜನೆಗಳನ್ನು ಕ್ಷಿಪ್ರಗತಿಯಲ್ಲಿ ಕಾರ್ಯಗತಗೊಳಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಿದರು.
ರಾಮನಗರ – ಚನ್ನಪಟ್ಟಣ ನಡುವೆ ರೈಲ್ವೆ ಲೆವೆಲ್ ಕ್ರಾಸಿಂಗ್ -44/100-200 ಬಳಿ ರೈಲ್ವೆ ಮೇಲ್ಸೆತುವೆ (ಫ್ಲೈ ಓವರ್) ನಿರ್ಮಾಣ ಮಾಡುವಂತೆ ಕುಮಾರಸ್ವಾಮಿ ಅವರು ಮನವಿ ಸಲ್ಲಿಸಿ ಕೋರಿಕೊಂಡಾಗ ರೈಲ್ವೆ ಸಚಿವರು ಈ ಕಾಮಗಾರಿಗೂ ಒಪ್ಪಿಗೆ ನೀಡಿದರು.

ಬೆಂಗಳೂರು – ಮಂಗಳೂರು ನಡುವಿನ ರೈಲ್ವೆ ಮಾರ್ಗದಲ್ಲಿ ಪ್ರಮುಖದ್ದಾಗಿರುವ ಸಕಲೇಶಪುರ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಮನವಿಗೂ ಸ್ಪಂದಿಸಿದ ಸಚಿವರು, ಈ ಕಾರ್ಯವನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಿ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಾಣ ಮಾಡುವುದಾಗಿ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ತಿಳಿಸಿದರು.

 ಹೆಚ್​ಡಿಕೆ ಸಲ್ಲಿಸಿದ ಮನವಿಗಳು :
ಚನ್ನಪಟ್ಟಣ – ಬೆಂಗಳೂರು – ಮೈಸೂರು ವಿಭಾಗದಲ್ಲಿ ಪ್ರಮುಖವಾದ ಎಲ್ಲಾ ರೈಲುಗಳ ನಿಲುಗಡೆ.
ಹಾಸನ, ಮಂಗಳೂರು ಒಳಗೊಂಡ ಮುಂಬೈ – ಬೆಂಗಳೂರು – ಮುಂಬೈ ಮಾರ್ಗದಲ್ಲಿ ಹೊಸ ರೈಲು ಮಂಜೂರು.

ಮದ್ದೂರು ಮತ್ತು ಮಂಡ್ಯದಲ್ಲಿ ಬೆಂಗಳೂರು – ಮಂಗಳೂರು – ಮುರುಡೇಶ್ವರ ನಡುವೆ ಸಂಚರಿಸುವ 16585 ರೈಲಿನ ನಿಲುಗಡೆ. ಕೊಪ್ಪಳ ಜಿಲ್ಲೆಯಲ್ಲಿ ಹೊಸ ಬ್ರಾಡ್ ಗೇಜ್ ರೈಲ್ವೆ ಮಾರ್ಗಗಳ ಮಂಜೂರಾತಿ. ಹೆಜ್ಜಾಲ- ಕನಕಪುರ – ಮಳವಳ್ಳಿ – ಕೊಳ್ಳೇಗಾಲ – ಯಳಂದೂರು – ಚಾಮರಾಜನಗರ ರೈಲು ಮಾರ್ಗಕ್ಕೆ ಶೀಘ್ರ ಅನುಮತಿ ನೀಡುವಂತೆ ಕುಮಾರಸ್ವಾಮಿ ಅವರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಕರ್ನಾಟಕದ ಅಭಿವೃದ್ಧಿಗೆ ನರೇಂದ್ರ ಮೋದಿ ಅವರ ಸರ್ಕಾರ ಬದ್ಧವಾಗಿದ್ದು ರಾಜ್ಯಕ್ಕೆ ಸಂಬಂಧಪಟ್ಟ ಇಷ್ಟೂ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ರೈಲ್ವೆ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಲಾಗುವುದು ಹಾಗೂ ಹೊಸ ಯೋಜನೆಗಳ ಬಗ್ಗೆಯೂ ಅಗತ್ಯ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ರೈಲ್ವೆ ಸಹಕಾರ-
ದೇಶಾದ್ಯಂತ ಉಕ್ಕು ಮತ್ತು ಅದಿರು ಸಾಗಾಣಿಕೆಗೆ ರೈಲ್ವೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ರೈಲ್ವೆ ಸಚಿವರು ಭರವಸೆ ನೀಡಿದರು.
ರೈಲ್ವೆ ವಶದಲ್ಲಿರುವ ಖಾಲಿ ಜಾಗದಲ್ಲಿ ಅದಿರು ಸಾಗಾಣಿಕೆಗೆ ಪೈಪ್ ಲೈನ್ ನಿರ್ಮಾಣಕ್ಕೆ ಅವಕಾಶ
, ಅದಿರು ಮತ್ತು ಉಕ್ಕು ಸಾಗಾಣಿಕೆಗೆ ಹೆಚ್ಚುವರಿ ರಾಕ್​ಗಳನ್ನು ಒದಗಿಸಬೇಕು ಎಂಬ ಮಾನವಿಗೂ ರೈಲ್ವೆ ಸಚಿವರು ಸ್ಪಂದಿಸಿದರು. ಜತೆಗೆ, ಇಬ್ಬರು ಸಚಿವರೂ ರಾಷ್ಟ್ರದ ಅಭಿವೃದ್ಧಿ ಹಾಗೂ ಹಲವಾರು ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಸಿದರು.

ಜೆಡಿಎಸ್ ನಾಯಕ, ಮಾಜಿ ಸಚಿವ ಸಾ. ರಾ ಮಹೇಶ್ ಇದೇ ವೇಳೆ ಮಾತನಾಡಿ ರೈಲ್ವೆ ತರಬೇತಿ ಕೇಂದ್ರಕ್ಕೆ ಕೇಂದ್ರ ಸರ್ಕಾರ 150 ರಿಂದ 200 ಕೋಟಿ ರೂ. ಹೂಡಿಕೆ ಮಾಡಲಿದೆ. ಪ್ರತೀ ವರ್ಷ 600 ಮಂದಿಗೆ ತರಬೇತಿ ದೊರೆಯಲಿದೆ. ಮೈಸೂರು ಅದರಲ್ಲಿಯೂ ಕೆ. ಆರ್ ನಗರ ತಾಲೂಕು ಅಭಿವೃದ್ಧಿಗೆ ದೊಡ್ಡ ಕೊಡುಗೆ ಸಿಕ್ಕಿದಂತೆ ಆಗುತ್ತದೆ. ಸ್ಥಳೀಯರಿಗೆ ಹೆಚ್ಚೆಚ್ಚು ಉದ್ಯೋಗ ಲಭ್ಯವಾಗಲಿದೆ.

ಈ ಸಂಬಂಧ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ಮಂಡ್ಯ ಸಂಸದರು, ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಸಚಿವರಾದ ಹೆಚ್. ಡಿ ಕುಮಾರಸ್ವಾಮಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸಾ. ರಾ ಮಹೇಶ್ ತಿಳಿಸಿದರು.
ಕೇಂದ್ರ ರೈಲ್ವೆ ಸಚಿವರ ಭೇಟಿ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಕುಮಾರಸ್ವಾಮಿ ಅವರ ಜತೆಯಲ್ಲಿ ಜೆಡಿಎಸ್ ಪಕ್ಷದ ಹಿರಿಯ ನಾಯಕ ಬಂಡೆಪ್ಪ ಕಾಶೆಂಪೂರ್, ಸಾ. ರಾ ಮಹೇಶ್ ಅವರು ಇದ್ದರು.

 

 

- Advertisement -  - Advertisement - 
Share This Article
error: Content is protected !!
";