ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಜನವರಿ 12 ಕ್ಕೆ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಇದ್ದು, ಚನ್ನಗಿರಿ ತಾಲ್ಲೂಕಿನ ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ಮತದಾರರ ಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಅಕ್ರಮ ಎಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಹಾಗೂ ಚುನಾವಣೆ ನಡೆಯುವವರೆಗೂ ಸೊಸೈಟಿಯನ್ನು ಸೂಪರ್‌ಸೀಡ್‌ಮಾಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ದಾವಣಗೆರೆ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ರೈತರೊಂದಿಗೆ ಭೇಟಿ ನೀಡಿದ ಶಾಸಕ ಬಸವರಾಜು ಅವರು ಧರಣಿ ಆರಂಭಿಸಿದರು. ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪಟ್ಟುಹಿಡಿದರು.
ಸಹಕಾರ ಸಂಘಕ್ಕೆ ಜ.12ರಂದು ಚುನಾವಣೆ ನಿಗದಿಯಾಗಿದೆ. ಸಂಘದ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಿದ ಅಧಿಕಾರಿಗಳು ಮತದಾರರ ಪಟ್ಟಿಯನ್ನು ನಕಲಿ ಮಾಡಿದ್ದಾರೆ. ಮತದಾರರ ಪಟ್ಟಿಯನ್ನು ತಿದ್ದಿ ಅರ್ಹತೆ ಇಲ್ಲದವರಿಗೂ ಮತದಾನದ ಹಕ್ಕು ನೀಡಲಾಗಿದೆ. ಸಂಘದ ಸಭೆಗೆ ಗೈರಾಗಿದ್ದ 200ರಿಂದ 250 ಸದಸ್ಯರ ದಾಖಲೆಗಳನ್ನು ತಿದ್ದಲಾಗಿದೆ. ವೈಟ್ನರ್‌ಹಚ್ಚಿ ಅಕ್ರಮ ಎಸಗಿರುವುದಕ್ಕೆ ಸಂಬಂಧಿಸಿದಂತೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಹಕಾರ ಸಂಘದ ಆಡಳಿತ ಮಂಡಳಿಯ ವಿರುದ್ಧ ಸಾಕಷ್ಟು ಆರೋಪಗಳಿವೆ. ಸಹಕಾರ ಇಲಾಖೆಯಲ್ಲಿ ನಾಲ್ವರು ಅಧಿಕಾರಿಗಳು ಬೀಡುಬಿಟ್ಟಿದ್ದಾರೆ. ಸೊಸೈಟಿಗಳಲ್ಲಿರುವ ಹಣ ಇವರ ಸ್ವಂತದ್ದು ಎಂಬಂತೆ ವರ್ತಿಸುತ್ತಿದ್ದಾರೆ. ಕೆಲ ರೈತರಿಗೆ ಎಕರೆಗೆ ರೂ.10,000 ಸಾಲ ನೀಡಿದರೆ, ಇನ್ನೂ ಕೆಲ ರೈತರಿಗೆ ಎಕರೆಗೆ ರೂ. 1 ಲಕ್ಷದವರೆಗೆ ಸಾಲ ನೀಡಲಾಗಿದೆ. ಹೆಚ್ಚುವರಿ ಸಾಲ ಕೇಳಿದ ರೈತರ ಮೇಲೆ ದಬ್ಬಾಳಿಕೆ, ರೌಡಿಸಂ ನಡೆಸಲಾಗುತ್ತಿದೆ’ ಎಂದು ಶಾಸಕ ಬಸವರಾಜು ಆಕ್ರೋಶ ವ್ಯಕ್ತಪಡಿಸಿದರು.
ಸಹಕಾರ ಇಲಾಖೆಯ ನೋಂದಣಿ ಅಧಿಕಾರಿಯನ್ನು ನಲ್ಲೂರಿಗೆ ಕಳುಹಿಸುವಂತೆ ಜಿಲ್ಲಾಧಿಕಾರಿಗೆ ಕೋರಿಕೊಂಡಿದ್ದೆ. ಈವರೆಗೆ ಯಾರೊಬ್ಬರೂ ಸ್ಥಳಕ್ಕೆ ಬಂದಿಲ್ಲ. ಸಂಘದ ಅಕ್ರಮಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಯಾವೊಬ್ಬ ಅಧಿಕಾರಿಯೂ ಸ್ಪಂದಿಸಿಲ್ಲ. ಶಾಸಕರನ್ನು ನಂಬಿದ ರೈತರಿಗೆ ನ್ಯಾಯ ಕೊಡಿಸಲು ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಶಾಸಕರು ಹೇಳಿದರು.
ತನಿಖೆ ಪ್ರಗತಿಯಲ್ಲಿದೆ: ಡಿಸಿ
ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರು ಶಾಸಕ ಬಸವರಾಜು ವಿ.ಶಿವಗಂಗಾ ಅವರ ಮನವೊಲಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ. ಜಿಲ್ಲಾಧಿಕಾರಿ ಕಚೇರಿ ಒಳಗೆ ಚರ್ಚೆ ನಡೆಸಲು ಶಾಸಕರು ನಿರಾಕರಿಸಿದರು.
ಯುವಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿದ್ದರಿಂದ ಫೋನ್‌ಕರೆಗಳಿಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ. ಈ ಕುರಿತ ಚರ್ಚೆಯನ್ನು ಕಚೇರಿಯ ಒಳಗೆ ನಡೆಸೋಣ ಬನ್ನಿ ಎಂದು ಜಿಲ್ಲಾಧಿಕಾರಿ ಕೈಮುಗಿದು ಮನವಿ ಮಾಡಿಕೊಂಡರು.
ಸಹಕಾರ ಸಂಘದ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಲಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ ಎಂದು ಶಾಸಕರಿಗೆ ಮಾಹಿತಿ ನೀಡಿದರು.
ಬಣಗಳ ನಡುವೆ ಗಲಾಟೆ-
ನಲ್ಲೂರು ಕೃಷಿ ಪತ್ತಿನ ಸಹಕಾರ ಸಂಘದ ವಿಚಾರಕ್ಕೆ ಸಂಬಂಧಿಸಿದಂತೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜು ವಿ.ಶಿವಗಂಗಾ ಮತ್ತು ಮಾಜಿ ಶಾಸಕ ಮಾಡಾಳ್‌ವಿರೂಪಾಕ್ಷಪ್ಪ ಬಣಗಳ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಮತದಾರರ ಪಟ್ಟಿಯ ಪರಿಶೀಲನೆಯ ವೇಳೆ ಎರಡು ಬಣಗಳ ನಡುವೆ ವಾಗ್ವಾದ ನಡೆದಿದೆ. ಚಿಹ್ನೆ ಹಂಚಿಕೆ ವಿಚಾರಕ್ಕೂ ಆಕ್ಷೇಪ ವ್ಯಕ್ತವಾಗಿದೆ. ಕೈಕೈ ಮಿಲಾಯಿಸುವ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಕಷ್ಟಪಟ್ಟಿದ್ದಾರೆ ಎನ್ನಲಾಗಿದೆ.