ಚಂದ್ರವಳ್ಳಿ ನ್ಯೂಸ್, ಹರಿಹರ:
ಪ್ರತಿ ವರ್ಷದಂತೆ ಈ ಬಾರಿಯೂ ಫೆ.8ರಿಂದ 2 ದಿನ ಶೈಕ್ಷಣಿಕ, ವೈಚಾರಿಕತೆಯ ಅದ್ದೂರಿ ಶ್ರೀ ಮಹರ್ಷಿ ವಾಲ್ಮೀಕಿ ಜನ ಜಾಗೃತಿ ಜಾತ್ರೆಯನ್ನು ಆಚರಿಸಲಾಗುವುದು ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ದೇವೇಂದ್ರಪ್ಪ ತಿಳಿಸಿದರು.
ತಾಲೂಕಿನ ರಾಜನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ವಾಲ್ಮೀಕಿ ಗುರುಪೀಠದ ಸಭಾಂಗಣದಲ್ಲಿ ಡಾ.ಪ್ರಸನ್ನಾನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಮಠದ 27ನೇ ವಾರ್ಷಿಕೋತ್ಸವ, ಶ್ರೀ ಪುಣ್ಯಾನಂದ ಮಹಾ ಸ್ವಾಮೀಜಿಗಳ 18ನೇ ಪುಣ್ಯಾರಾಧನೆ ಹಾಗೂ ಜಗದ್ಗುರು ಡಾ.ಪ್ರಸನ್ನಾನಂದ ಮಹಾಸ್ವಾಮೀಜಿಯವರ 17ನೇ ಪಟ್ಟಾಧಿಕಾರದ ಅಂಗವಾಗಿ ಮಹರ್ಷಿ ವಾಲ್ಮೀಕಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಬಾರಿ 7ನೇ ವರ್ಷದ ಜಾತ್ರೆಯನ್ನು 2 ದಿನಗಳ ಕಾಲ ಲಿಂಗಬೇಧ, ವಯೋಬೇಧವಿಲ್ಲದೆ ಸಮುದಾಯದ ಎಲ್ಲರೂ ಜಾಗೃತಿ ಮೂಡಿಸುವ ಸಲುವಾಗಿ ವೈಜ್ಞಾನಿಕ ಯುಗದಲ್ಲಿ ಧರ್ಮ ಸಂಪ್ರದಾಯಗಳೊಂದಿಗೆ ಮೂಢನಂಬಿಕೆಗಳನ್ನು ದೂರಮಾಡಿ, ಕೇವಲ ಮೋಜು-ಮಸ್ತಿ ಮಾಡುವ ಬದಲಿಗೆ ವೈಚಾರಿಕ ಜಾತ್ರೆಯನ್ನು ಜಗದ್ಗುರುಗಳ ಆಶಯದಂತೆ ಆಯೋಜಿಸಲಾಗಿದೆ.
ಫೆ.8ರ ಶನಿವಾರ ಬೆಳಿಗ್ಗೆ 7ಗಂಟೆಗೆ ರಾಜನಹಳ್ಳಿ ಗ್ರಾಮದಿಂದ ವಿವಿಧ ಕಲಾ ಸಾಂಸ್ಕೃತಿಕ ಮೇಳಗಳೊಂದಿಗೆ ಮಹರ್ಷಿ ವಾಲ್ಮೀಕಿಯವರ ಭವ್ಯ ಮೆರವಣಿಗೆಯು ಶ್ರೀಮಠದ ವರೆಗೂ ಆಗಮಿಸಲಿದೆ. 8ಗಂಟೆಗೆ ಆದಿಕವಿ ಮಹರ್ಷಿ ವಾಲ್ಮೀಕಿಯವರ ಧ್ವಜಾರೋಹಣದಿಂದಿಗೆ ಜಾತ್ರೆಯು ಅಧಿಕೃತವಾಗಿ ಆರಂಭವಾಗುವುದು. 8.30ಕ್ಕೆ ಸರ್ವಧರ್ಮ ಸಾಮೂಹಿಕ ವಿವಾಹ ನಡೆಯಲಿದೆ.
9.30ರಿಂದ ಉದ್ಯೋಗಮೇಳ, 10.30ರಿಂದ ಕೃಷಿಮೇಳ ನಡೆದು ನಂತರ 11ರಿಂದ 1.30ರ ವರೆಗೆ ವಿಶೇಷ ಮಹಿಳಾಗೋಷ್ಠಿ, ಇದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಮ.2.30ರಿಂದ 5ಗಂಟೆಯ ವರೆಗೆ ಸಮುದಾಯದ ನೌಕರರ ಗೋಷ್ಠಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಸಂಜೆ 6ರಿಂದ ರಾತ್ರಿ 8ರ ವರೆಗೆ ಪ್ರಸ್ತುತ ದಿನಮಾನಗಳಲ್ಲಿ ಸಮುದಾಯದ ವಿದ್ಯಾಮಾನಗಳ ಕುರಿತು ವಿಶೇಷ ಸಂಘಟನಾ ಗೋಷ್ಠಿ ನಡೆಯುವುದು. 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. ರಾತ್ರಿ 10.30ರಿಂದ ಮಹರ್ಷಿ ವಾಲ್ಮೀಕಿ ವಿರಚಿತ ಸಂಪೂರ್ಣ ರಾಮಾಯಣ ಪೌರಾಣಿಕ ನಾಟಕವು ಬೆಳಗಿನವರೆಗೆ ನಡೆಯುತ್ತದೆ.
ಫೆ.9ರ ಭಾನುವಾರ ಬೆ.6ಗಂಟೆಗೆ ಶ್ರೀಮಠದ ಆವರಣದಲ್ಲಿ ಶ್ರೀಗಳೊಂದಿಗೆ ಶ್ರೀಮಠದ ಸಿಬ್ಬಂದಿ ಹಾಗೂ ಸದ್ಭಕ್ತರೊಂದಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಬೆ.7ರಿಂದ 8.30ರ ವರೆಗೆ ಈ ಬಾರಿ ವಿಶೇಷವಾಗಿ ಪರ ಊರಿನ ಭಕ್ತರುಗಳಿಗಾಗಿ ಗುರು ದರ್ಶನವಿರುತ್ತದೆ. ನಂತರ 9ಗಂಟೆಗೆ ಸಮುದಾಯದ ಅಸ್ಮಿತೆ ಆದಿಕವಿ ಮಹರ್ಷಿ ವಾಲ್ಮೀಕಿಯವರ ಭವ್ಯ ರಥೋತ್ಸವ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಜರುಗುವುದು. ನಂತರ ವಿವಿಧ ಮಠಾಧೀಶರ ಧರ್ಮಸಭೆ ಇರುತ್ತದೆ.
ಜನಜಾಗೃತಿ ಮಹೋತ್ಸವ:
ಮ.12.ಗಂಟೆಯಿಂದ ಜನ ಜಾಗೃತಿ ಮಹೋತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿವರು. ಅತಿಥಿಗಳಾಗಿ ಸಚಿವರು, ಸಂಸದರು, ಶಾಸಕರು-ಮಾಜಿ ಶಾಸಕರು ಹಾಗೂ ಸಮುದಾಯದ ಗಣ್ಯಾತಿಗಣ್ಯರು, ಸೇರಿದಂತೆ ಜನ ಪ್ರತಿನಿಧಿಗಳು ವೇದಿಕೆಯಲ್ಲಿರುವರು.
ಇದೇ ವೇಳೆ ಜಗದ್ಗುರುಗಳು ಹಾಗೂ ಸಮುದಾಯದ ಗುರು ಹಿರಿಯರ ತೀರ್ಮಾನದಂತೆ ದಾವಣಗೆರೆಯ ಶ್ರೀನಿವಾಸ ದಾಸ ಕರಿಯಪ್ಪರನ್ನು ಜಾತ್ರಾ ಮಹೋತ್ಸವ ಸಮಿತಿಯ ಸಂಚಾಲಕರನ್ನಾಗಿ ಒಮ್ಮತದಿಂದ ಅಧ್ಯಕ್ಷರು ಘೋಷಣೆ ಮಾಡಿದರು. ಆಯ್ಕೆಯಾದ ಶ್ರೀನಿವಾಸರವರು ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿ, ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ಶ್ರೀಮಠದ ಧರ್ಮದರ್ಶಿ ಡಾ.ಜಿ.ರಂಗಯ್ಯ, ಬಿ.ಎಸ್.ಜಂಬಯ್ಯನಾಯಕ, ನಾಗರಾಜಪ್ಪ ಹಳ್ಳೆಳ್ಳಪ್ಪನವರ್, ಬಿ.ವೀರಣ್ಣ, ಮಹೇಶ್, ಕೆ.ಬಿ ಮಂಜುನಾಥ್, ಪ್ರೊ.ಎ.ಬಿ.ರಾಮಚಂದ್ರಪ್ಪ ಹೊದಿಗೆರೆ ರಮೇಶ್, ಭೀಮಪ್ಪ ಪಾಲಾಕ್ಷಪ್ಪ ಜಿಗಳಿ ರಂಗಪ್ಪ, ವಿಜಯಲಕ್ಷ್ಮಿ ಮಹೇಂದ್ರ ಕುಮಾರ್, ಪಾರ್ವತಿ ಸೇರಿದಂತೆ ಸಮುದಾಯದ ಜಿಲ್ಲಾದ್ಯಕ್ಷರು ತಾಲ್ಲೂಕು ಮುಖಂಡರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜದ ಬಂಧುಗಳು ಮಹಿಳೆಯರು ಯುವಕರು ಉಪಸ್ಥಿತರಿದ್ದರು.