ಬೆಳೆ ಹಾನಿ ಪರಿಶೀಲನೆಗೆ ಶಾಶ್ವತ ಕೋಶ ರಚನೆಗೆ ರೈತರ ಆಗ್ರಹ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆ ಶಾಶ್ವತ ಬರಪೀಡಿತ ಪ್ರದೇಶವಾಗಿದ್ದು ರೈತಾಪಿ ಸಮುದಾಯ ಪ್ರತಿ ವರ್ಷ ನಷ್ಟ ಅನುಭವಿಸುತ್ತಿದ್ದಾರೆ. ಒಮ್ಮೆ ಅತಿವೃಷ್ಠಿ ಮತ್ತೊಮ್ಮೆ ಅನಾವೃಷ್ಠಿ ಇಲ್ಲಿ ಮಾಮೂಲು. ಹವಾಮಾನ ವೈಪರಿತ್ಯಗಳು ರೈತರ ಬದುಕಿನ ಮೇಲೆ ಹೆಚ್ಚು ಪರಿಣಾಮ ಬಿರುತ್ತವೆ. ಹಾಗಾಗಿ ಸೂಕ್ತ ಪರಿಹಾರ ಒದಗಿಸುವ ನಿಟ್ಟನಲ್ಲಿ ಶಾಶ್ವತ ವೇದಿಕೆ ಒದಗಿಸುವುದು ಅನಿವಾರ್ಯವಾಗಿದೆ. ಹಾಗಾಗಿ ಬೆಳೆ ಹಾನಿ ಪರಿಶೀಲನೆಗೆ ಶಾಶ್ವತ ಕೋಶ ರಚನೆ ಮಾಡುವಂತೆ ರೈತರು ಆಗ್ರಹ ಮಾಡಿದ್ದಾರೆ.

ಬೆಳೆ ಹಾನಿ ಪರಿಶೀಲನೆ ಹಾಗೂ ನಷ್ಟ ಅಂದಾಜಿಸಿ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ಶಾಶ್ವತ ಕೋಶವೊಂದನ್ನು ರಚಿಸುವ  ತುರ್ತು ಅಗತ್ಯವಿದೆ. ಈ ಕೋಶದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ವಿಮಾ ಕಂಪನಿ ಅಧಿಕಾರಿಗಳು, ರೈತರು ಇರಬೇಕು ಎಂದು ರೈತರು ಆಗ್ರಹ ಮಾಡಿದರು.

ಇದಕ್ಕಾಗಿ ಪ್ರತ್ಯೇಕ ಕಚೇರಿ ತೆರೆದು ಮುಂಗಾರು ಹಿಂಗಾರು ಹಂಗಾಮಿನಲ್ಲಿ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ ಆದಾಗ ಕೋಶವು ಕಾರ್ಯ ಪಡೆ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ರೈತರಿಂದ ಬಂದ ದೂರು ಆಲಿಸಿ ತಕ್ಷಣ ಫೀಲ್ಡ್ ಗೆ ಹೋಗಬೇಕು. ಅಲ್ಲದೇ ತಮ್ಮದೇ ಆದ ನೆಟ್ ವರ್ಕ್ ಮೂಲಕ ಬೆಳೆ ನಷ್ಟ ಅಂದಾಜಿಸುವ ಪರಿಪಾಟಲು ಇರಬೇಕು. ಸಹಾಯವಾಣಿ ರೀತಿ ಈ ಕೋಶ ಕಾರ್ಯನಿರ್ವಹಸಬೇಕು ಎಂದು ರೈತರು ಆಗ್ರಹ ಮಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಈ ವರ್ಷ ಮಳೆ ಜಾಸ್ತಿಯಾಗಿ ಈರುಳ್ಳಿ ಕೊಳೆತು ಹೋಗಿದೆ. ಈರುಳ್ಳಿ ಬೆಳೆ ನಾಶ ಖುದ್ದು ಪರಿಶೀಲಿಸಲು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗಮಸಿದ್ದರು. ಅಲ್ಲದೇ ಕಳಪೆ ಬಿತ್ತನೆ ಬೀಜ ವಿತರಣೆಯಿಂದಾಗಿ ಸಾವಿರಾರು ಎಕರೆಯಲ್ಲಿ ಬಿತ್ತನೆ ಮಾಡಲಾದ ತೊಗರಿ ಹೂ ಬಿಟ್ಟು ಕಾಯಿ ಕಟ್ಟದೆ ಹಾಗೆ ಉಳಿದಿದೆ. ಪರಿಣಾಮ ರೈತ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದರು.

ಬೆಳೆ ನಷ್ಟ ಪರಿಹಾರ ವಿತರಣೆ ಸಂಬಂಧ ರೈತ ಸಂಘಟನೆಗಳು ಈಗಾಗಲೇ ಹಲವು ಬಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿವೆ. ಪರಿಹಾರ ವಿತರಣೆಯಲ್ಲಿನ ತಾಂತ್ರಿಕ ಲೋಪ ಹಾಗೂ ತಪ್ಪು ನಡೆಯಿಂದಾಗಿ ಬಹಳಷ್ಟು ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ರೈತರು ನಿತ್ಯ ಬ್ಯಾಂಕ್ ಖಾತೆ ಪರಿಶೀಲಿಸಿ ಸುಸ್ತಾಗಿದ್ದಾರೆ. ಅಧಿಕಾರಿಗಳ ಮಟ್ಟದಲ್ಲಿ ಆದ ಲೋಪದಿಂದಾಗಿ ಪರಿಹಾರ ವಿತರಣೆಯಾಗಿಲ್ಲ. ಜಿಲ್ಲಾಡಳಿತ ತಕ್ಷಣವೇ ಬೆಳೆ ನಷ್ಟದ ಬಗ್ಗೆ ಪುನರ್ ಪರಿಶೀಲಿಸಿ ತಕ್ಷಣವೇ ಪರಿಹಾರ ವಿತರಿಸಬೇಕು. ಯಾರೊಬ್ಬ ರೈತರೂ ಬೆಳೆ ನಷ್ಟ ಪರಿಹಾರ ವ್ಯಾಪ್ತಿಯಿಂದ ಹೊರಗಿರದಂತೆ ನೋಡಿಕೊಳ್ಳಬೇಕು ಎಂದು ರೈತರು ಆಗ್ರಹ ಮಾಡಿದರು.

ಬೆಸ್ಕಾಂ ನವರು ನಿತ್ಯ ಏಳು ಗಂಟೆ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿ ಕೆಲವು ಕಡೆ ಆರು ತಾಸು ಪೂರೈಸುತ್ತಿದ್ದಾರೆ. ಇದರಿಂದಾಗಿ ಬೇಸಿಗೆ ಫಸಲು ಬೆಳೆಯಲು ತೊಂದರೆಯಾಗಿದೆ. ತಕ್ಷಣವೇ ಏಳು ತಾಸು ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣದಿಂದ ಪಂಪ್ ಸೆಟ್ಟುಗಳಿಗೆ ಮೀಟರ್ ಅಳವಡಿಸಬಾರದು. ಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕೆಂದು ರೈತರು ಆಗ್ರಹಿಸಿದರು.

ಕೂಡಲೇ ಜಿಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತೋಟಗಾರಿಕೆ ಇಲಾಖೆ, ವಿಮಾ ಕಂಪನಿ, ಬೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ಕರೆಯಬೇಕೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ, ರುದ್ರಸ್ವಾಮಿ, ಕೆ.ಸಿ.ಹೊರಕೇರಪ್ಪ ಸೇರಿದಂತೆ ಮತ್ತಿತರ ರೈತ ಮುಖಂಡರು ಒತ್ತಾಯಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";