ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಸಾಮಾನ್ಯವಾಗಿ ಅಭಿಮಾನಿಗಳ ಹೆಸರಿನಲ್ಲಿ ಸ್ಥಾಪಿಸಲ್ಪಡುವ ಸಂಘ- ಸಂಸ್ಥೆಗಳು ಆಯಾ ಸಂದರ್ಭದ ಲಾಭ, ಸ್ವಹಿತ ಇಲ್ಲವೇ ವ್ಯಕ್ತಿಪೂಜೆ ಅಥವಾ ವ್ಯಕ್ತಿ ಆರಾಧನೆಗಾಗಿ ಸೀಮಿತವಾಗಿರುವುದೇ ಹೆಚ್ಚು. ಆದರೆ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್ ಇದಕ್ಕೆ ವ್ಯತಿರಿಕ್ತವಾಗಿ ಸದೃಢತೆಯಿಂದ ಸಂಘವನ್ನು ಕ್ರಿಯಾಶೀಲವಾಗಿ ಬೆಳೆಸುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಹೊರತಂದಿರುವ ೨೦೨೫ನೇ ಸಾಲಿನ ಕ್ಯಾಲೆಂಡರನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನ ಸದಾಶಿವ ನಗರದಲ್ಲಿರುವ ತಮ್ಮ ಮನೆಯಲ್ಲಿ ಬಿಡುಗಡೆಗೊಳಿಸಿ ಸಾಂಕೇತಿಕವಾಗಿ ಅವರು ಮಾತನಾಡಿದರು.
ಮೋಹನ್ ಅಧ್ಯಕ್ಷತೆಯ ಸಂಘವು ಹಲವು ವರ್ಷಗಳಿಂದ ಸಕ್ರಿಯವಾಗಿ ಸಾಮಾಜಿ ಕಾಳಜಿ, ಕಳಕಳಿಯಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಶ್ಲಾಘನೀಯ. ಅದರಲ್ಲೂ ಕೋವಿಡ್ ಸಂದರ್ಭದಲ್ಲಿ ಕೈಗೊಂಡ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದರು.
ನಿನ್ನೆಯ ಸಾಧನೆಗಳನ್ನು ಮತ್ತು ನಾಳಿನ ಉಜ್ವಲ ಭವಿಷ್ಯವನ್ನು ನೆನೆಯುವುದರೊಂದಿಗೆ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸೋಣ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಕ್ಕೆ ತಂದಿದೆ. ನಾಡಿನ ಅಭಿವೃದ್ಧಿಗೆ ಕಾಂಗ್ರೆಸ್ ಕಟಿಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಡಿ.ಕೆ. ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ, ಕೆಪಿಸಿಸಿ ಸಂಯೋಜಕ ಆರ್. ಮೋಹನ್, ಯಲವಟ್ಟಿ ವಿಜಯ್ ಕುಮಾರ್, ಹಸೂಡಿ ಆಕಾಶ್, ಚಿಕ್ಕಮರಡಿ ವೆಂಕಟೇಶ್, ಪುರಲೆ ರಂಗನಾಥ್, ಚೇತನ್, ಗುರುಪುರ ಸ್ವಾಮಿ, ಶೆಟ್ಟಿಹಳ್ಳಿ ಭೋವಿ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.