ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕ್ಷಯಮುಕ್ತ ಭಾರತ ನಿರ್ಮಾಣ ಸಾರ್ವಜನಿಕ ಜವಾಬ್ದಾರಿಯಾಗಲಿ ಎಂದು ಚಿತ್ರದುರ್ಗ ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ 100 ದಿನಗಳ ತೀವ್ರ ಪ್ರಚಾರ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ಪತ್ತೆ ಚಿಕಿತ್ಸೆ ಉಚಿತ. ನಿಗದಿತ ಅವಧಿಯ ಚಿಕಿತ್ಸೆಯಿಂದ ಕ್ಷಯ ರೋಗ ಗುಣಪಡಿಸಬಹುದು. ಎಲ್ಲರೂ ಒಗ್ಗೂಡಿ ಕ್ಷಯರೋಗದ ವಿರುದ್ಧ ಹೋರಾಟ ನಡೆಸಿ ಚಿತ್ರದುರ್ಗ ಜಿಲ್ಲೆಯನ್ನ ಕ್ಷಯ ಮುಕ್ತ ಜಿಲ್ಲೆಯನ್ನಾಗಿಸೋಣ ಎಂದು ಹೇಳಿದರು.
ಗ್ರೇಡ್–2 ತಹಶೀಲ್ದಾರ್ ನಾಗರಾಜ್ ಮಾತನಾಡಿ, ಚಿಕಿತ್ಸೆ ಪೂರ್ಣಗೊಳ್ಳುವವರೆಗೆ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ ರೂ.1 ಸಾವಿರ ಹಣವನ್ನು ಫಲಾನುಭವಿಯ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಮಾಡಲಾಗುತ್ತದೆ ಎಂದರು.
ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ರಾತ್ರಿ ವೇಳೆ ಜ್ವರ, ಬೆವರುವುದು, ಹಸಿವಾಗದಿರುವುದು ತೂಕ ಇಳಿಕೆ ಕಫದಲ್ಲಿ ರಕ್ತ ಈ ಲಕ್ಷಣಗಳ ಕಂಡುಬಂದಲ್ಲಿ ತಪ್ಪದೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಫ ಪರೀಕ್ಷೆ ಮಾಡಿಸಿಕೊಳ್ಳಿ. ಶೀಘ್ರ ಪ್ರಕರಣ ಪತ್ತೆ ತ್ವರಿತ ಚಿಕಿತ್ಸೆ ನೀಡುವುದರಿಂದ ನಾವು ಟಿಬಿಯನ್ನು ಕೊನೆಗಾಣಿಸಬಹುದು. ನಿಕ್ಷಯ ಮಿತ್ರ ಯೋಜನೆ ಅಡಿಯಲ್ಲಿ ಟಿಬಿ ಪ್ರಕರಣಗಳಿಗೆ ಪೌಷ್ಟಿಕ ಪೂರಕ ಆಹಾರ ಮತ್ತು ಪರೀಕ್ಷೆಗಳಿಗೆ ದಾನಿಗಳನ್ನು ಆಹ್ವಾನಿಸಿದ್ದಾರೆ.
ಈ ಕಚೇರಿಯ ದಯಾಪರ ಸಿಬ್ಬಂದಿಗಳಾದ ತಾವುಗಳು ಈ ಯೋಜನೆಯಲ್ಲಿ ಭಾಗವಹಿಸಬಹುದಾಗಿದೆ. 6 ರಿಂದ 8 ತಿಂಗಳಗಳ ಕಾಲ ಟಿಬಿ ರೋಗಿಗಳನ್ನ ದತ್ತು ಪಡೆದು ಪೌಷ್ಟಿಕ ಪೂರಕ ಆಹಾರಗಳನ್ನು ದಾನದ ರೂಪದಲ್ಲಿ ನೀಡಬಹುದಾಗಿದೆ. ತಮ್ಮ ಹೆಸರನ್ನು ನಿಕ್ಷಯ ಮಿತ್ರ ಯೋಜನೆಯ ವೆಬ್ ಪೋರ್ಟಲ್ನಲ್ಲಿ ನೋಂದಾಯಿಸಲಾಗುತ್ತದೆ. ನೋಂದಾವಣೆ ಮಾಡಿದವರಿಗೆ ಕೇಂದ್ರ ಸರ್ಕಾರ ದೃಢೀಕರಣ ಪತ್ರವನ್ನು ನೀಡಲಾಗುತ್ತದೆ. ನಿಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಕ್ಷಯರೋಗದ ಕರಪತ್ರಗಳನ್ನ ಪ್ರಕಟಿಸಿ ಸಾರ್ವಜನಿಕ ಮಾಹಿತಿ ನೀಡಿರಿ ಎಂದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ವಿನುತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಬಿ.ಮೂಗಪ್ಪ, ಜಾನಕಿ, ಕ್ಷಯ ರೋಗ ವಿಭಾಗದ ನಾಗರಾಜ್ ಮತ್ತು ಸಂತೋಷ್ ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ತಾಲೂಕ ಕಚೇರಿ ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.