ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ರೈತರಿಗೆ ಆತ್ಮಹತ್ಯೆ ಗ್ಯಾರಂಟಿ ನೀಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಕ್ರದುಷ್ಟಿ ಅನ್ನದಾತರ ಯೋಜನೆಗಳಿಗೆ ಕತ್ತರಿ ಹಾಕುವತ್ತ ನೆಟ್ಟಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ ಮಾಡಿದೆ.
ರೈತರ ಕೃಷಿ ಪಂಪ್ ಸೆಟ್ ಗಳಿಗೆ ಟ್ರಾನ್ಸ್ ಫಾರ್ಮರ್ ಸಮೇತ ಉಚಿತವಾಗಿ ಮೂಲಸೌಕರ್ಯ ಕಲ್ಪಿಸುತ್ತಿದ್ದ ಯು.ಎನ್.ಐ.ಪಿ ಯೋಜನೆಯನ್ನು ಸಿದ್ದರಾಮಯ್ಯ ಸರ್ಕಾರ ಬಂದ್ ಮಾಡಿ ಅನ್ನದಾತರ ಹೊಟ್ಟೆ ಮೇಲೆ ಹೊಡೆದಿದೆ. ಜೊತೆಗೆ ಕೃಷಿ ಕೊಳವೆ ಬಾವಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದೆ. ಇದರಿಂದ ಇನ್ಮುಂದೆ ರೈತರಿಗೆ 3 ಲಕ್ಷ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಕಿಸಾನ್ ಸಮ್ಮಾನ್ ಯೋಜನೆಗೆ ಕತ್ತರಿ ಹಾಕಿರುವ ದುಷ್ಟ “ಕೈ” ಸರ್ಕಾರ ರೈತರ ಮಕ್ಕಳ ವಿದ್ಯಾನಿಧಿಗೂ ತಿಲಾಂಜಲಿ ಇಟ್ಟಿದೆ.
ರೈತರ ಹಿತ ಕಾಯದ ನಾಲಯಕ್ ಕೃಷಿ ಸಚಿವ ಚಲುವನಾರಾಯಣಸ್ವಾಮಿ ಗೂಟದ ಕಾರಿನಲ್ಲಿ ಓಡಾಡುತ್ತಾ, ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.