ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೆಪಿಎಸ್‌ಸಿ ನಡೆಸಿದ ಕೆಎಎಸ್(KAS) ಪೂರ್ವಭಾವಿ ಮರು ಪರೀಕ್ಷೆಯ ಕನ್ನಡ ಪತ್ರಿಕೆಯಲ್ಲಿ ಶೇ.50ರಷ್ಟು ತಪ್ಪುಗಳು ಇರುವುದನ್ನು ಬೆಂಗಳೂರು ವಿವಿ ಕನ್ನಡ ಅಧ್ಯಯನ ಕೇಂದ್ರ ಗುರುತಿಸಿದೆ ಎಂದು ಸರ್ಕಾರದ ವಿರುದ್ಧ ಜೆಡಿಎಸ್ ಟೀಕಾಪ್ರಹಾರ ಮಾಡಿದೆ.
ನಿರ್ಲಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದ ದುರಾಡಳಿತದಲ್ಲಿ, ರಾಜ್ಯದ ಪ್ರತಿಷ್ಠಿತ ಪರೀಕ್ಷೆಯಲ್ಲೇ ಪದೇ ಪದೇ ಇಂತಹ ತಪ್ಪುಗಳು, ಪ್ರಮಾದಗಳು ಮರುಕಳಿಸುತ್ತಿರುವುದು ತಲೆ ತಗ್ಗಿಸುವ ವಿಚಾರ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕೆಪಿಎಸ್‌ಸಿ ಯಿಂದ ಆಗಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು. ಕರ್ನಾಟಕ ಲೋಕಸೇವಾ ಆಯೋಗ ಹಿಂದೆ ನಡೆಸಿರುವ ಪರೀಕ್ಷೆಗಳ ಫಲಿತಾಂಶವನ್ನೇ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ. ಈಗ ಹೊಸದಾಗಿ ನಡೆಸಿದ ಪರೀಕ್ಷೆಗಳಲ್ಲೂ ನಾನಾ ದೋಷಗಳಾಗಿವೆ.
ಇದರಿಂದ ಸರ್ಕಾರಿ ಹುದ್ದೆಗಾಗಿ ಹಗಲು- ಇರುಳು ಎನ್ನದೆ ನಿರಂತರವಾಗಿ ಕಷ್ಟಪಟ್ಟು ಓದುತ್ತಿರುವ ಅಭ್ಯರ್ಥಿಗಳು ಬಲಿಪಶುಗಳಾಗುತ್ತಿದ್ದಾರೆ.
ಕೆಪಿಎಸ್‌ಸಿ ಶುದ್ಧೀಕರಣ ಆಗಲೇಬೇಕಿದೆ. ಇಲ್ಲವಾದರೇ ಆಯೋಗ ನಡೆಸುವ ಪರೀಕ್ಷೆಯಲ್ಲಿ ಪ್ರತಿ ಬಾರಿಯೂ ಒಂದಲ್ಲ ಒಂದು ಎಡವಟ್ಟುಗಳಿಂದ, ಲಕ್ಷಾಂತರ ಸ್ಪರ್ಧಾ ಆಕಾಂಕ್ಷಿಗಳ ಬದುಕು ಅಧೋಗತಿ ತಲುಪಲಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.