ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಪ್ರಸ್ತುತ ರಾಜ್ಯ ಸರ್ಕಾರ ಕಾಲೇಜು ಶಿಕ್ಷಣವೂ ಸೇರಿದಂತೆ ಎಲ್ಲಾ ಹಂತಗಳಲ್ಲೂ ಶೈಕ್ಷಣಿಕ ಅಭಿವೃದ್ದಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಿದೆ. ಪದವಿ ಪೂರ್ವ ಹಾಗೂ ಪದವಿ ಶಿಕ್ಷಣದ ನಂತರ ವಿದ್ಯಾರ್ಥಿಗಳು ತಮ್ಮ ಬದುಕನ್ನು ಭದ್ರಪಡಿಸಿಕೊಳ್ಳಲು ಕೆಲಸದ ಮೊರೆ ಹೋಗತ್ತಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಾಂತ್ರಿಕ ಆಧಾರಿತ ಶಿಕ್ಷಣ ನೀಡುವ ಚಿಂತನೆ ನಡೆಸಿದೆ ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.
ಅವರು, ಶನಿವಾರ ತಾಲ್ಲೂಕಿನ ಪರಶುರಾಮಪುರ ಪದವಿಪೂರ್ವ ಕಾಲೇಜು ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿ, ಕ್ರೀಡೆ, ರಾಷ್ಟ್ರೀಯಸೇವಾಯೋಜನೆ, ಸ್ಕೌಟ್ಸ್ ಅಂಡ್ ಗೈಡ್ಸ್ ಸಮಾರೋಪ ಸಮಾರಂಭ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭವನ್ನು ಜ್ಯೋತಿಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಪರಶುರಾಮಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ಧಾರೆ.
ಉತ್ತಮ ಕಲಿಕೆಯಿಂದ ಮಾತ್ರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿ ಸಾಧ್ಯ. ಕಲಿಕಾ ಅವಧಿಯಲ್ಲಿ ಯಾವ ವಿದ್ಯಾರ್ಥಿ ನಿರ್ಲಕ್ಷ್ಯೆ ವಹಿಸುತ್ತಾನೋ ಅವನು ನಿರೀಕ್ಷೆಗೂ ಮೀರಿ ಹಿನ್ನಡೆ ಅನುಭವಿಸುತ್ತಾನೆ. ಇತ್ತೀಚೆಗೆ ಸರ್ಕಾರ ಪ್ರತಿಕಾಲೇಜುನಲ್ಲೂ ಗುಣಾತ್ಮಕ ಶಿಕ್ಷಣ ದೊರೆಯುವ ವ್ಯವಸ್ಥೆ ಮಾಡಿದೆ. ಸರ್ಕಾರ ಪ್ರತಿವರ್ಷ ಲಕ್ಷಾಂತರ ರೂ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ನೀಡುತ್ತಿದೆ. ಅಷ್ಟೇ ವೇಗದಲ್ಲಿ ವಿದ್ಯಾರ್ಥಿಗಳು ಪ್ರಗತಿಯತ್ತ ದಾಪುಗಾಲಿಡಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಲೇಜು ಪ್ರಾಂಶುಪಾಲ ನಾಗರಾಜು, ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾರ್ಗದರ್ಶನದಲ್ಲಿ ಕಾಲೇಜು ಶೈಕ್ಷಣಿಕ ಅಭಿವೃದ್ದಿಯಲ್ಲಿ ಮುನ್ನಡೆ ಸಾಧಿಸಿದೆ. ಕಾಲೇಜಿಗೆ ಬಹುತೇಕ ಎಲ್ಲಾ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ ಶಾಸಕರು ಕಲಿಕೆಯ ಒತ್ತಡವನ್ನು ಕಡಿಮೆಗೊಳಿಸಿದ್ಧಾರೆ. ಕಾಲೇಜಿನಲ್ಲಿ ಬೋಧನೆ ನೀಡುತ್ತಿರುವ ಎಲ್ಲಾ ಉಪನ್ಯಾಸಕರು ಮಕ್ಕಳಿಗೆ ಉತ್ತಮ ಜ್ಞಾನವನ್ನು ಕಲಿಸುವಲ್ಲಿ ಯಶಸ್ವಿಯಾಗಿದ್ಧಾರೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಆರ್.ರುದ್ರೇಶ್, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಚನ್ನಕೇಶವ, ಕೆಡಿಪಿ ಸದಸ್ಯ ಬಸವರಾಜು, ಪಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿಧರ, ಮುಖಂಡರಾದ ನಾಗಭೂಷಣ, ಕೃಷ್ಣಪ್ಪ, ಜಗಳೂರು ಸ್ವಾಮಿ, ಪ್ರಕಾಶ್, ರಂಗಸ್ವಾಮಿ, ನಾಗರಾಜು ಮುಂತಾದವರು ಉಪಸ್ಥಿತರಿದ್ದರು.