ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ಚನ್ನಮ್ಮನಾಗತಿಹಳ್ಳಿ ಗ್ರಾಮದ ಶಿವಣ್ಣ, ಮುದ್ದಣ್ಣ ಎಂಬುವವರ ಅಡಿಕೆ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುಮಾರು ೬೦ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಕಡಿದು ಪರಾರಿಯಾಗಿದ್ಧಾರೆ.
ಸೋಮವಾರ ಬೆಳಗ್ಗೆ ಎಂದಿನಂತೆ ಶಿವಣ್ಣ ಮತ್ತು ಮುದ್ದಣ್ಣ ತಮ್ಮ ಅಡಿಕೆ ತೋಟಕ್ಕೆ ಹೋಗಿ ನೋಡಲಾಗಿ ಯಾರೋ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಕೆಲವೇ ದಿನಗಳಲ್ಲಿ ಫಲಕ್ಕೆ ಬರಲಿರುವ ಅಡಿಕೆ ಮರಗಳನ್ನು ಕಡಿದು ಹಾಕಿದ್ಧಾರೆ. ಶಿವಣ್ಣ ಎಂಬುವವರ ತೋಟದ ೫೦, ಮುದ್ದಣ್ಣ ಎಂಬುವವರ ೧೦ ಒಟ್ಟು ೬೦ ಅಡಿಕೆ ಮರಗಳನ್ನು ಕಡಿದುಹಾಕಲಾಗಿದೆ.
ನೊಂದ ಶಿವಣ್ಣ ಮತ್ತು ಮದ್ದಣ್ಣ ಪರಶುರಾಮಪುರ ಠಾಣೆಗೆಯಲ್ಲಿ ಅಡಿಕೆ ಮರಗಳನ್ನು ಕಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದ್ಧಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.