ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆವರಣದಲ್ಲಿ ಹಮ್ಮಿಕೊಳ್ಳಲಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹೆಚ್ಚುವರಿ ಕಟ್ಟಡ ನಿರ್ಮಾಣ ಶಿಲಾನ್ಯಾಸ ಹಾಗೂ ಕೆಸೆಟ್-2024 ಪ್ರಮಾಣ ಪತ್ರ ವಿತರಣಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಕೆಸೆಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಾಂಕೇತಿಕವಾಗಿ ಕೆಸೆಟ್ –2024ರ ಪ್ರಮಾಣಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಿಸಿದರು.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಮಾತನಾಡಿ ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಒಳಿತಿನ ಜೊತೆಗೆ ದುರ್ಬಳಕೆಯಿಂದ ಕೆಡಕೂ ಸಂಭವಿಸುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವುದು ಸೂಕ್ಷ್ಮವಾದ ವಿಚಾರ. ಈ ದಿಸೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪಾರದರ್ಶಕವಾಗಿ ಕೆಲಸ ನಿರ್ವಹಿಸಿದೆ. ಕಳೆದ ವರ್ಷ ಸುಮಾರು 17 ರಿಂದ 18 ಇಲಾಖೆಗಳ ನೇಮಕಾತಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಸುಮಾರು 6052 ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯನ್ನು ನಿರ್ವಹಿಸಿರುವ ಹೆಗ್ಗಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಸಹಾಯಕ ಪ್ರಾಧ್ಯಾಪಕ ಹುದ್ದೆ, ತಾಂತ್ರಿಕ ಶಿಕ್ಷಕ ಇಲಾಖೆಯ ಹುದ್ದೆಗಳನ್ನು ತುಂಬಲು ಅನುಮತಿ ಕೊಡುವ ಭರವಸೆಯನ್ನು ನೀಡಿದ್ದಾರೆ. ಕೆಸೆಟ್ ಪರೀಕ್ಷೆಯನ್ನು ಸತತವಾಗಿ ಎರಡನೇ ಬಾರಿಯೂ ಯಶಸ್ವಿಯಾಗಿ ನಿರ್ವಹಿಸಲಾಗಿದೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉಂಟಾದ ಗೊಂದಲ ಪರೀಕ್ಷಾ ವ್ಯವಸ್ಥೆಗೆ ಸವಾಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವೆಬ್‍ಕಾಸ್ಟಿಂಗ್ ಮೂಲಕ ಪರೀಕ್ಷೆಯನ್ನು ನಿಯಂತ್ರಿಸುವುದು ಯಶಸ್ವಿ ಪ್ರಯತ್ನವಾಗಿದೆ. ತಂತ್ರಜ್ಞಾನ ದುರ್ಬಳಕೆ ಮಾಡುವವರಿಗೆ ಕಡಿವಾಣ ಹಾಕಲಾಗಿದೆ. ಕರ್ನಾಟಕ ಲೋಕ ಸೇವಾ ಆಯೋಗ, ರಾಜೀವಾ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಒಳಗೊಂಡಂತೆ ಕಂಪ್ಯೂಟರ್ ಆಧಾರಿತ ಟೆಸ್ಟಿಂಗ್‍ನ್ನು ರಾಜ್ಯದಲ್ಲಿ ಪ್ರಾಯೋಗಿಕವಾಗಿ ತರಬೇಕು. ಮುಂದಿನ ದಿನಗಳಲ್ಲಿ ತಂತ್ರಜ್ಞಾನವನ್ನು ಬಳಸಿ ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕು ಎಂದು ತಿಳಿಸಿದರು.
ನೇಮಕಾತಿ ಪರೀಕ್ಷೆಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರುವ ಉದ್ದೇಶದಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಚಿಂತನೆ ಇದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಡೆಸುವ ಪರೀಕ್ಷಾ ಅರ್ಜಿಯನ್ನು ತುಂಬಲು ವಿದ್ಯಾರ್ಥಿಗಳಿಗೆ ಅದÀರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅಡಚಣೆ ತೊಂದರೆಗಳು ಉಂಟಾಗುತ್ತಿವೆ. ಅರ್ಜಿಯನ್ನು ತುಂಬಲು, ಸರಳೀಕರಣಗೊಳಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ಸಿಇಟಿ ಅರ್ಜಿ ಭರ್ತಿ ಮಾಡುವುದನ್ನು ಸರಳಗೊಳಿಸುವ ಹಾಲಿ ಇರುವ ವ್ಯವಸ್ಥೆಗೆ ಮತ್ತಷ್ಟು ಭದ್ರತಾ ಉಪಕ್ರಮಗಳನ್ನು ಅಳವಡಿಸುವ ಮೂಲಕ ಹೊಸ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಪ್ರವೇಶ ಮತ್ತು ನೇಮಕಾತಿ ಪ್ರಕ್ರಿಯೆಗಳು ನಿರಂತರವಾಗಿ ನಡೆಯುತ್ತಿರುವ ಕಾರಣ ಸರ್ವರ್ ಮೇಲೆ ಒತ್ತಡ ಹೆಚ್ಚಿದೆ. ಹೀಗಾಗಿ ಪ್ರತ್ಯೇಕವಾದಂತಹ ಸರ್ವರ್ ಹೊಂದುವ ಬಗ್ಗೆಯೂ ಚಿಂತನೆ ನಡೆದಿದೆ. ನೇಮಕಾತಿ ಪ್ರಕ್ರಿಯೆಗೆ ಸ್ಥಳಾವಕಾಶದ ಕೊರತೆ ಇದೆ ಹಾಗೆಯೆ ಮುಂದಿನ ದಿನಗಳಲ್ಲಿ ನೇಮಕಾತಿ ಮತ್ತು ಪ್ರವೇಶ ಪರೀಕ್ಷೆಗಳ ಪ್ರತ್ಯೇಕ ವಿಭಾಗಗಳನ್ನು ತೆರೆಯುವ ಉದ್ದೇಶವೂ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನೇಮಕಾತಿ ಪರೀಕ್ಷೆಗಳಿಗೆ ಒಮ್ಮೆ ಮಾತ್ರ ನೋಂದಣಿ ಮಾಡುವ ವ್ಯವಸ್ಥೆಯ ಪೋರ್ಟಲ್ ಹಾಗೂ ಸಿಇಟಿ ದಿಕ್ಸೂಚಿ ಸಾಮಾನ್ಯ ಪ್ರವೇಶ ಪರೀಕ್ಷೆ –2025ಕ್ಕೆ ಚಾಲನೆ ನೀಡಿದ ಸಚಿವರು, ಒಮ್ಮೆ ನೋಂದಣಿ ಮಾಡಿದವರು ವಿವಿಧ ರೀತಿಯ ನೇಮಕಾತಿ ಪರೀಕ್ಷೆಗಳಿಗೆ ಪದೇ ಪದೇ ಅರ್ಜಿ ಭರ್ತಿ ಮಾಡುವ ಅಗತ್ಯ ಇರುವುದಿಲ್ಲ. ನಿರ್ದಿಷ್ಟ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಪರೀಕ್ಷಾ ಶುಲ್ಕ ಪಾವತಿಸಿ ಅರ್ಹತೆಯನ್ನು ಪಡೆಯಬಹುದು ಇದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾಡಿರುವ ವಿನೂತನ ಕ್ರಮ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಹೆಚ್, ಆಡಳಿತಾಧಿಕಾರಿ ಇಸ್ಲಾವುದ್ಧಿನ್ ಜೆ. ಗದ್ಯಾಳ, ಶುಲ್ಕ ನಿಯಂತ್ರಣ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ, ವಿಶ್ರಾಂತ ಕುಲಪತಿ ಪ್ರೊ. ತಿಮ್ಮೇಗೌಡ, ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಸೇರಿದಂತೆ ಹಿರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.