ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಇದು ಅಸಲಿಗೆ ಮಳೆಗಾಲವಲ್ಲ, ಹೋಗಲಿ ಯಾವುದೇ ಸ್ಲೈಕೋನ್ ಎಫೆಕ್ಟ್ ನಿಂದ ಭಾರೀ ಮಳೆ ಸುರಿದಿಲ್ಲ ಆದರೂ ಕುಗ್ರಾಮದ ಕೆರೆಯೊಂದು ಸಂಪೂರ್ಣ ಭರ್ತಿಯಾಗಿ ಸಂಕ್ರಾಂತಿಯೊಂದೇ ಕೋಡಿ ಹರಿದು ಅಚ್ಚರಿ ಮೂಡಿಸಿದೆ ಈ ಕೆರೆ.
ಚಳ್ಳಕೆರೆ ತಾಲೂಕಿನ ಕ್ಯಾದಿಗುಂಟೆ ಗ್ರಾಮದ ಕೆರೆ ಮಳೆ ಇಲ್ಲದಿದ್ದರೂ ಕೂಡ ಸಂಕ್ರಾಂತಿ ಹಬ್ಬದ ದಿನದಂದು ಕೊಡಿ ಬಿದ್ದಿರುವುದು ರೈತ ಬಾಂಧವರಲ್ಲಿ ಸಂತಸ ಮೂಡಿಸಿದೆ ಎಂದು ತಾಲೂಕ್ ರೈತ ಸಂಘದ ಅಧ್ಯಕ್ಷ ಹಾಗೂ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎ.ನಾಗರಾಜ ಪರಶುರಾಂಪುರ ಹರ್ಷ ವ್ಯಕ್ತಪಡಿಸಿದರು. ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ಹಿನ್ನೀರಿಂದ ಕುಡಿಯುವ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು ಈ ಯೋಜನೆ ಅಡಿಯಲ್ಲಿ ಸುಮಾರು 6 ತಾಲ್ಲೂಕಿಗಳಿಗೆ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಚಳ್ಳಕೆರೆ ತಾಲೂಕು ಕ್ಯಾದಿಗುಂಟೆ ಹತ್ತಿರ ಪಾವಗಡ ತಾಲೂಕಿಗೆ ಪಂಪಿಂಗ್ ಮಾಡುವ ಸಬ್ ಸ್ಟೇಷನ್ ಇದ್ದು ಕಾಮಗಾರಿಯಲ್ಲಿ ಟ್ರಯಲ್ ನಡೆಯುತ್ತಿದ್ದು ಟ್ರಯಲ್ ರನ್ ನೀರನ್ನು ಕ್ಯಾದಿಗುಂಟೆ ಕೆರೆಗೆ ಹರಿಯುತ್ತಿದ್ದ ಕಾರಣ ಗ್ರಾಮದ ಕೆರೆ ಕೋಡಿ ಬಿದ್ದಿರುವುದು ವರದಾನವೇ ಸರಿ. ಕೆರೆ ತುಂಬಿರುವುದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಿದ್ದು ಈ ಭಾಗದ ರೈತರಿಗೆ ಬಿಸಿಲಿನ ಬೇಗೆಯಲ್ಲೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದು ಮತ್ತೊಷ್ಟು ಹರ್ಷದಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಎಲ್ಲದಕ್ಕೂ ಕಾರಣರಾದ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ವಿಶೇಷವಾಗಿ ಉಸ್ತಾವರಿ ಸಚಿವ ಡಿ ಸುಧಾಕರ್ ಅವರಿಗೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಎ. ನಾಗರಾಜು ಪರಶುರಾಂಪುರ ಇವರು ಅಭಿನಂದನೆಗಳನ್ನು ತಿಳಿಸಿದ್ದಾರೆ.