ದಲಿತ ಮಹಿಳಾ ಅಧಿಕಾರಿ ಮೇಲೆ ಸುಳ್ಳು ಆರೋಪ ಮಾಡಿದ ವ್ಯಕ್ತಿ ಕ್ಷಮೆ ಯಾಚಿಸಬೇಕು

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ದಲಿತ ಅಧಿಕಾರಿಗಳ ಮೇಲೆ ಆರೋಪ ಮಾಡಿರುವ ವ್ಯಕ್ತಿ ಮೂರು ದಿನಗಳಲ್ಲಿ ಒಳಗಾಗಿ
  ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ ಎಸ್.ಸಿ-ಎಸ್.ಟಿ. ಜಂಟಿ ಹೋರಾಟ ಸಮಿತಿಯಿಂದ ಕ್ರಿಮಿನಲ್‌ಮತ್ತು ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಮುಖಂಡ ಜಿ.ಲಕ್ಷ್ಮೀಪತಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಎಸ್.ಸಿ-ಎಸ್.ಟಿ. ಜಂಟಿ ಹೋರಾಟ ಸಮಿತಿ ವತಿಯಿಂದ ಆಯೋಜನೆ ಮಾಡಲಾಗಿದ್ದ ಸುದ್ದಿ ಗೊಷ್ಟಿಯಲ್ಲಿ ಅವರು ಮಾತನಾಡಿದರು. ನಿಷ್ಠಾವಂತ ಸರ್ಕಾರಿ ಅಧಿಕಾರಿಗಳ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿರುವ ಆರ್.ಟಿ.ಐ ಕಾರ್ಯಕರ್ತ ದಿನೇಶ್ ದೊಡ್ಡಬಳ್ಳಾಪುರ ತಾಲೂಕಿನ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ತಾಲೂಕಿನ ಅಧಿಕಾರಿಗಳಿಗೆ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದರು.

- Advertisement - 

ದಲಿತ ಮುಖಂಡ ಮ.ಮುನಿರಾಜು ಮಾತನಾಡಿ ತಾಲ್ಲೂಕು ಆಡಳಿತ ಕಳಂಕ ರಹಿತವಾಗಿ ಕೆಲಸ ಮಾಡುತ್ತಿದೆ, ಸಾವಿರಾರು ಅಧಿಕಾರಿಗಳು ಈಗಾಗಲೇ ಉತ್ತಮ ಸೇವೆ ಸಲ್ಲಿಸಿ ಹೋಗಿದ್ದಾರೆ. ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಇಲ್ಲಿನ ವಾಸ್ತವಾಂಶ ತಿಳಿಯದೆ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಅಧಿಕಾರಿಗಳ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಆದರೆ ಅವರು ಮಾಡುತ್ತಿರುವುದು ಧಮ್ಕಿ ಹೋರಾಟ ಎಂದರು.

ಉಪವಿಭಾಗಧಿಕಾರಿ ಕಛೇರಿಯಲ್ಲಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮನೋಜ್ ಎಂಬ ಸಿಬ್ಬಂದಿಯನ್ನ ವಿನಾಕಾರಣ ಟಾರ್ಗೆಟ್ ಮಾಡಲಾಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ, ಅಧಿಕಾರಿಗಳು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಲು ಉತ್ತಮ ವಾತಾವರಣವನ್ನು ಕಲ್ಪಿಸುವ ನಿಟ್ಟಿನಲ್ಲಿ ಎಲ್ಲಾ ದಲಿತರ ಮುಖಂಡರು ಒಂದಾಗಿದ್ದವೇ ತೊಂದರೆ ಕೊಡುವವರಿಗೆ ತಕ್ಕ ಉತ್ತರ ನೀಡುವ ಎಚ್ಚರಿಕೆಯನ್ನು ನೀಡಿದರು.

- Advertisement - 

ದಲಿತ ಮುಖಂಡ ಆದಿತ್ಯನಾಗೇಶ್ ಮಾತನಾಡಿ, ಇತ್ತಿಚೇಗೆ ತಾಲೂಕಿನಲ್ಲಿ ಲಾಬಿ ಶುರುವಾಗಿದೆ. ಹೊರಗಿನಿಂದ ಬರುವ ರೋಲ್ ಕಾಲ್ ಪತ್ರಕರ್ತರು ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಿದ್ದಾರೆ. ಕೇವಲ ದಲಿತ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಮಾನಸಿಕ ಕಿರುಕುಳ ಕೊಟ್ಟು ಅವರಿಂದ ಹಣ ವಸೂಲಿ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಇವರಿಗೆ ದಲಿತ ಅಧಿಕಾರಿಗಳು ಇರೋದು ಸಹಿಸಲು ಆಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾಧ್ಯಕ್ಷ ಕೆಂಪಣ್ಣ ಮಾತನಾಡಿ ತಾಲೂಕಿನ ಎಲ್ಲ ದಲಿತಪರ ಜನಪರ ಪ್ರಗತಿಪರ ಚಿಂತಕರು ಮುಖಂಡರು ಒಂದಾಗಿದ್ದೇವೆ. ಕಾರಣ ತಾಲೂಕಿನಲ್ಲಿ ಅಧಿಕಾರಿಗಳು ಭಯ ಮುಕ್ತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲಿ ಎಂಬುದಷ್ಟೆ ಉದ್ದೇಶ. ಪ್ರಮುಖವಾಗಿ ಕೆಲ ಸಾಮಾಜಿಕ ಹೋರಾಟಗಾರರು ದಲಿತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಿ ಕಿರುಕುಳ ಕೊಡುತ್ತಿದ್ದು ಅಂಥವರ ವಿರುದ್ಧ ನಮ್ಮ ಸಮಿತಿಯು ಹೋರಾಟ ನಡೆಸಲಿದೆ. ಈ ಸುದ್ದಿಗೋಷ್ಠಿ ಕೇವಲ ಸಾಂಕೇತಿಕ. ಕೂಡಲೇ ಆರ್ ಟಿ ಐ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಕ್ಷಮೆ ಯಾಚಿಸಿದಿದ್ದಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು .

 ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ರಾಮಮೂರ್ತಿ(ರಾಮು) ನೆರಳ ಘಟ್ಟ ಮಾತನಾಡಿ ಅಧಿಕಾರಿಗಳು ತಪ್ಪು ಮಾಡಿದ ಪಕ್ಷದಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಲು ಉನ್ನತ ಅಧಿಕಾರಿಗಳು ಇದ್ದಾರೆ. ಆದರೆ ದಿನೇಶ್ ಕಲ್ಲಹಳ್ಳಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲ ಸಲ್ಲದ ಸುಳ್ಳು ಸುದ್ದಿ ಹರಡುವ ಮೂಲಕ ಸಾರ್ವಜನಿಕರಲ್ಲಿ ಅಧಿಕಾರಿಗಳ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ, ಕೂಡಲೇ ಅವರು ಸಾರ್ವಜನಿಕವಾಗಿ ಕ್ಷೇಮೆ ಯಾಚಿಸಬೇಕು ಇಲ್ಲವಾದಲ್ಲಿ ಅವರ ವಿರುದ್ಧ ಸಂಘಟನೆ ಹಾಗೂ ಸಮಿತಿ ವತಿಯಿಂದ ಉಗ್ರ ಹೋರಾಟ ರೂಪಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್ಸಿ-ಎಸ್ಟಿ ಹೋರಾಟ ಜಂಟಿ ಸಮಿತಿಯ ಜಿಲ್ಲಾಧ್ಯಕ್ಷ ಕೆಂಪಣ್ಣ, ತಾಲೂಕು ಅಧ್ಯಕ್ಷ ರಾಮಮೂರ್ತಿ ನೇರಳ ಘಟ್ಟ, ಪ್ರಧಾನ ಕಾರ್ಯದರ್ಶಿ ಮಂಜುನಾಥ್, ದಲಿತ ಮುಖಂಡರಾದ ಲಕ್ಷ್ಮೀಪತಿ, ಪ್ರೇಮ್ ಕುಮಾರ್, ಓಬದೇನಹಳ್ಳಿ ಮುನಿಯಪ್ಪ, ಗೋಪಾಲ್ ನಾಯ್ಕ್, ನಗರಸಭಾ ಸದಸ್ಯ ಮೋಹನ್ ಕುಮಾರ್, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಸದಸ್ಯ ಅಪ್ಪಿ ವೆಂಕಟೇಶ್, ಕರವೇ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಸೇರಿದಂತೆ ತಾಲೂಕಿನ ದಲಿತ ಮುಖಂಡರು ಭಾಗವಹಿಸಿದ್ದರು.

 

Share This Article
error: Content is protected !!
";