ಜಗತ್ತಿನ ಅನೇಕ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರ ಉಂಟು-ದೇಶಿಕೇಂದ್ರ ಸ್ವಾಮೀಜಿ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾತಃ ಸ್ಮರಣೀಯರು ವಿಚಾರ ಕುರಿತು ಚಿಂತನ ಗೋಷ್ಠಿಯ ದಿವ್ಯ ಸಾನ್ನಿಧ್ಯ ವಹಿಸಿದ್ದ ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನಮಠದ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ
, ಅರ್ಥಪೂರ್ಣವಾದ ವಿಚಾರ ಸಂಕಿರಣವಾದ ಶರಣ ಜೀವನದ ವಚನ ಇತರೆ ವಿಚಾರಧಾರೆಗಳನ್ನು ಸಾರ್ವಜನಿಕರ ಮನಮುಟ್ಟುವಂತೆ ಈ ಶರಣ ಸಾಹಿತ್ಯ ಸಮ್ಮೇಳನ ನಡೆಯುತ್ತಾ ಬಂದಿದೆ. ಪರಿಷತ್ ರಾಜ್ಯವ್ಯಾಪ್ತಿ ಕಾರ್ಯ ನಿರ್ವಹಿಸುತ್ತಿದೆ. ದೆಹಲಿಯಲ್ಲಿ ಅನುಭಾವ ಸಾಹಿತ್ಯದ ಬಗ್ಗೆಯು ಕಾರ್ಯಕ್ರಮ ನೀಡಿದೆ. ಈ ಸಂಸ್ಥೆಯು ನಿರಂತರ ಕಾರ್ಯ ನಿರ್ವಹಿಸುತ್ತಿದೆ.

ಪ್ರತಿನಿತ್ಯ ಕಾರ್ಯಕ್ರಮಗಳು ನಡೆದು ಧಾರ್ಮಿಕ ವಿಚಾರಗಳನ್ನು ಪಸರಿಸುತ್ತಿದೆ. ೧೨ನೆಯ ಶತಮಾನದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಭಾವನಾತ್ಮಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಮುಂದಿನ ಕಾಲದಲ್ಲಿ ವಿಚಾರಮಂಡನೆ ಮಾಡಲು ಶರಣ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ. ಧರ್ಮದ ವಿಶಾಲವಾದ ಅಂಶಗಳನ್ನು ನೀಡಬೇಕೆಂಬ ಇದರ ಆಶಯ ಸತ್ಯ ಸಂಗತಿಯನ್ನು ವಚನದ ಮೂಲಕ ಜನರ ಬಳಿ ತರಬೇಕಿದೆ. ಮಾತು ಚಿಕ್ಕದಾಗಿ ಕೃತಿ ದೊಡ್ಡದಾಗಿಸುವಂತಹದ್ದು ವಚನ ಸಾಹಿತ್ಯ.  ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಅಂಶ ವಚನಗಳಲ್ಲಿ ಕಾಣಬಹುದು. ಜಯದೇವ ಜಗದ್ಗುರುಗಳಿಗೆ ಐತಿಹಾಸ ಸಂಘಟನೆಯನ್ನು ಮಾಡಿದ ಕೀರ್ತಿ ದೊರೆಯುತ್ತದೆ. ಈ ಭಾಗದಲ್ಲಿ ತಿಪ್ಪೇರುದ್ರಸ್ವಾಮಿಯವರು ಭಕ್ತರು ಅನೇಕ. ಅವರು ಪವಾಡಗಳ ಮೂಲಕ ಪ್ರಸಿದ್ಧರಾಗಿದ್ದಂತಹ ಶ್ರೀಗಳಾಗಿದ್ದರು. ಶಿವಕುಮಾರ ಮಹಾಸ್ವಾಮಿಗಳು ವಚನ ಸಾಹಿತ್ಯವನ್ನು ಕ್ರೋಢೀಕರಿಸುವಲ್ಲಿ ಶ್ರಮ ವಹಿಸಿದ್ದವರಾಗಿದ್ದಾರೆ. ಅವರು ಧಾರ್ಮಿಕ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದವರಾಗಿದ್ದಾರೆ ಎಂದು ನುಡಿದರು.

- Advertisement - 

ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಗುರುಪೀಠದ ಜಗದ್ಗುರು ಶ್ರೀ ಬಸವಜಯಮೃತ್ಯುಂಜಯ ಮಹಾಸ್ವಾಮಿಗಳು ಮಾತನಾಡಿ, ೨೦, ೨೧ನೆಯ ಶತಮಾನದಲ್ಲಿ ಇಡೀ ಸಮಾಜದ ಘನತೆ ಸ್ವಾಭಿಮಾನವನ್ನು ಎತ್ತಿ ಹಿಡಿದವರು ಪರಮ ಪೂಜ್ಯ ಜಯದೇವ ಜಗದ್ಗುರುಗಳು ಮತ್ತು ಶಿವರಾತ್ರಿ ದೇಶಿಕೇಂದ್ರ ರಾಜೇಂದ್ರ ಸ್ವಾಮಿಗಳು.  ಶಿಕ್ಷಣ, ಅನ್ನ, ಸಂಸ್ಕಾರ ಈ ಮೂರನ್ನು ಸಮಾಜಕ್ಕೆ ಕೊಟ್ಟವರು ಬಸವಣ್ಣನವರು. ನಂತರ ಅದನ್ನು ಮುಂದುವರೆಸಿಕೊಂಡು ಬಂದದ್ದು ಮುರುಘಾಮಠ ಮತ್ತು ಸುತ್ತೂರುಮಠ. ಸಮಾಜಕ್ಕೆ ತಮ್ಮನ್ನೇ ತಾವು ಸಮರ್ಪಿಸಿಕೊಂಡವರು ಉಭಯ ಸ್ವಾಮಿಗಳು. ಅಸಂಘಟಿತ ಸಮಾಜವನ್ನು ಸಂಘಟಿಸಲು ರಾಜ್ಯವನ್ನು ಸುತ್ತಿದರು ಜಯದೇವ ಜಗದ್ಗುರುಗಳು. ಹಸಿದವರಿಗೆ ಅನ್ನದ ಜೊತೆಗೆ ಶಿಕ್ಷಣ ಕೊಟ್ಟಿದ್ದಾರೆ. ಅವರೆಲ್ಲ ಮಠ ಬಿಟ್ಟು ಸಮಾಜ ಕಟ್ಟುವ ಕೆಲಸ ಮಾಡಿದರು. ಶರಣರಿಗೆ ಸಂಘಟನೆ ಮಾಡುವ ಶಕ್ತಿಯಿದೆ ಎಂದು ತೋರಿಸಿಕೊಟ್ಟವರು ದೇಶಿಕೇಂದ್ರ ಸ್ವಾಮಿಗಳು ಎಂದು ತಿಳಿಸಿದರು.

ಪಂಚಮಸಾಲಿ ಗುರುಪೀಠದ ಡಾ.ಜಗದ್ಗುರು ವಚನಾನಂದ ಮಹಾಸ್ವಾಮಿಗಳು ಮಾತನಾಡಿ, ಬಸವತತ್ತ್ವ ಹೇಗಿರಬೇಕು ಎಂದು ಹೇಳಿ ಬಾಳಿದವರು ದೇಶಿಕೇಂದ್ರ ಸ್ವಾಮಿಗಳು. ನಮಗೆ ಬದುಕಿನಲ್ಲಿ ಹೇಗೆ ಬಾಳಬೇಕೆಂಬುದನ್ನು ಕಲಿಸಿಕೊಟ್ಟವರು ಸಿದ್ಧೇಶ್ವರ ಸ್ವಾಮಿಗಳು. ಸಾವಿನ ಕೊನೆಯ ಕ್ಷಣದಲ್ಲೂ ಸಹ ವಚನಗಳನ್ನು ಪಸರಿಸಿದವರು. ಸಿದ್ಧೇಶ್ವರ ಸ್ವಾಮಿಗಳು ಸೂಕ್ಷ್ಮಜೀವಿಯಾಗಿದ್ದರು ಎಂದು ನುಡಿದರು.

- Advertisement - 

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ  ಶ್ರೀ ಮುರುಘರಾಜೇಂದ್ರ ಮಠದ ಡಾ.ಬಸವಕುಮಾರ ಮಹಾಸ್ವಾಮಿಗಳು ಮಾತನಾಡಿಶ್ರೀ ಜಯದೇವ ಜಗದ್ಗುರುಗಳು ನನಗೆ ಧನ ಸಹಾಯ ಮಾಡಿದ್ದಾರೆಂದು ಹಳಕಟ್ಟಿಯವರು ಬರೆದಿದ್ದಾರೆ. ಹರ್ಡೇಕರ್ ಮಂಜಪ್ಪನವರಿಗೆ ಧನ ಸಹಾಯ ಮಾಡಿಸುತ್ತಾರೆ. ೧೯೦೩ರಲ್ಲಿ ಚಿತ್ರದುರ್ಗ ಸಂಸ್ಥಾನದ ಪೀಠಾಧಿಪತಿಗಳಾಗಿ ೧೯೫೬ರಲ್ಲಿ ಲಿಂಗೈಕ್ಯರಾದರು. ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು, ರಾಷ್ಟ್ರಕವಿಗಳು ಶ್ರೀಗಳ ಸಹಾಯ ಪಡೆದು ಆವರ ಆದರ್ಶಗಳನ್ನು ರೂಢಿಸಿಕೊಂಡು ಮಹಾನ್ ವ್ಯಕ್ತಿಗಳಾಗಿದ್ದರು.

ಚಾಮರಾಜಪೇಟೆಯಲ್ಲಿ ಸಾಹಿತ್ಯ ಪರಿಷತ್ ಸ್ಥಾಪಿಸಲು ಶ್ರೀಗಳು ಧನ ಸಹಾಯ ಮಾಡಿದ್ದರು.  ಕರ್ನಾಟಕ ಏಕೀಕರಣದ ಚಳುವಳಿಗೆ ಮಂಗಳೂರಿಗೆ ಶ್ರೀಗಳನ್ನು ಆಹ್ವಾನಿಸಲಾಗಿತ್ತು.  ನಿಜಲಿಂಗಪ್ಪನವರು, ಬಸವಲಿಂಗಪ್ಪನವರ ವಿದ್ಯಾಬ್ಯಾಸಕ್ಕಾಗಿ ಶ್ರೀಗಳು ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಿರುತ್ತಾರೆ. ಶಿಕ್ಷಣ, ಆರೋಗ್ಯ ಸಮಾಜಕ್ಕೆ ಶ್ರೀಗಳು ಹೆಚ್ಚು ಒತ್ತು ನೀಡಿದ್ದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಮಾತನಾಡುತ್ತ ಆರೋಗ್ಯ ಕ್ಷೇತ್ರಕ್ಕೆ ೧೭ ಲಕ್ಷ ರೂಗಳನ್ನು ಜಯದೇವ ಶ್ರೀಗಳು ನೀಡಿರುತ್ತಾರೆ ಎಂದು ತಿಳಿಸಿರುತ್ತಾರೆ. ಜಯದೇವ ವಿದ್ಯಾರ್ಥಿ ನಿಲಯಗಳನ್ನು ನಾಡಿದ್ಯಾಂತ ಸ್ಥಾಪಿಸಿದರು. ಇಂತಹ ವಿದ್ಯಾರ್ಥಿನಿಲಯಗಳಲ್ಲಿ ಓದಿದವರು ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದು ನುಡಿದರು.

ಹಿರಿಯ ಪತ್ರಕರ್ತ ಶ್ರೀ ದೊಣೆಹಳ್ಳಿ ಗುರುಮೂರ್ತಿ ಆಶಯ ನುಡಿಗಳನ್ನಾಡಿ, ೯೦೦ ವರ್ಷಗಳಿಂದ ಇಲ್ಲಿಯವರೆಗೆ ಕಲ್ಯಾಣದ ಬಸವಾದಿ ಶರಣರ ಆಶಯದ ರಥವನ್ನು ಎಳೆದುಕೊಂಡು ಬಂದಿದ್ದೇವೆ. ಅವರ ವಿಚಾರಗಳು ಸಮಾಜದಲ್ಲಿ ಎಷ್ಟರ ಮಟ್ಟಿಗೆ ಅನುಷ್ಠಾನಗೊಂಡಿವೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಬಸವಾದಿ ಶರಣರ ತತ್ತ್ವಗಳನ್ನು ಸಮಾಜಕ್ಕೆ ತಲುಪಿಸುವ ಕಾರ್ಯಗಳು ನಡೆಯುತ್ತಿವೆ. ಇವರ ವಿಚಾರಗಳನ್ನು ನಡೆ-ನುಡಿಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ. ಕಾಯ, ವಾಚಾ, ಮನಸ್ಸು ಇಟ್ಟುಕೊಂಡವರು, ಶಿಕ್ಷಣ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜಕ್ಕೆ ಕೊಡುಗೆಯನ್ನು ಕೊಟ್ಟವರು ನಿಜವಾದ ಪ್ರಾತಃ ಸ್ಮರಣೀಯರು.

ಚಿತ್ರದುರ್ಗ ಜಿಲ್ಲೆ ತಿಪ್ಪೇರುದ್ರಸ್ವಾಮಿಗಳು ಎರಡು ಮಠಗಳು ಏಳು ಕೆರೆಗಳನ್ನು ನಿರ್ಮಾಣ ಮಾಡಿದರು. ತಿಪ್ಪೇರುದ್ರಸ್ವಾಮಿಗಳ ಆದರ್ಶಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕು. ವಚನ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತು ಜನಮಾನಸಕ್ಕೆ ತಲುಪಿಸಿದ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಚಿಂತನೆಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು. ಸುತ್ತೂರು ಸಂಸ್ಥಾನ ಕೆಳಮಟ್ಟದ ಜನರಿಗೆ ಆಶ್ರಯ, ಶಿಕ್ಷಣ ಹಾಗೂ ದಾಸೋಹವನ್ನು  ನೀಡಿದ ಶ್ರೀಮಂತ ಮಠವಾಗಿದೆ. ಸಮ ಸಮಾಜದ ಕಡೆಗೆ ಕೊಂಡೊಯ್ಯುವ ಕೆಲಸ ೧೨ನೆಯ ಶತಮಾನದ ಬಸವಾದಿ ಶರಣರದ್ದಾಗಿತ್ತು. ಈ ಕಾರ್ಯವನ್ನು ಅನುಷ್ಠಾನಕ್ಕೆ ತರದೇ ಹೋದರೆ ಶರಣ ಚಳುವಳಿಯ ಉದ್ದೇಶ ಈಡೇರದು ಎಂದು ನುಡಿದರು.

ವಿಜಯಪುರ ಡಾ.ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಡಾ. ಮಹಾಂತೇಶ ಬಿರಾದಾರ್ ಮಾತನಾಡಿ, ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿಯವರ ಸಮಾಧಿಯನ್ನು ಪುಸ್ತಕಗಳನ್ನು ಮಾರಿ ಬಂದ ಹಣದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳು ನಿರ್ಮಿಸಿದ್ದಾರೆ. ಹಳಕಟ್ಟಿ ಸಂಶೋಧನಾ ಕೇಂದ್ರ ಸ್ಥಾಪಿಸಿ ಅವರ ಚಿಂತನೆ, ತತ್ತ್ವಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. ಹಳಕಟ್ಟಿಯವರ ಜಯಂತಿಯನ್ನು ಪ್ರಾರಂಭಿಸಿದ್ದೇವೆ. ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಿ ಎರಡು ಸಾವಿರದ ಐನೂರಕ್ಕೂ ಹೆಚ್ಚು ವಚನಕಾರರನ್ನು ಹಾಗೂ ಅವರು ರಚಿಸಿದ ವಚನಗಳ ಬಗ್ಗೆ ತಿಳಿಸಿದರು ಹಳಕಟ್ಟಿಯವರು. ವಚನ ತಾಡೋಲೆಗಳನ್ನು ಸಂಗ್ರಹಿಸಿ ವಚನಗಳನ್ನು ಹಾಳಾಗದಂತೆ ಕಾಪಾಡಿ ಮುದ್ರಿಸಿ ಜನಗಳಿಗೆ ಹಂಚಿದ ಪಿತಾಮಹ ಹಳಕಟ್ಟಿಯವರು. ಹಿತಚಿಂತಕ ಎಂಬ ಮುದ್ರಣಾಲಯ ನಿರ್ಮಿಸಿ ನವಕರ್ನಾಟಕ ಪತ್ರಿಕೆಗಳನ್ನು ಮುದ್ರಣ ಮಾಡಿ ಜನರಿಗೆ ತಲುಪಿಸಿದರು. ಹೆಣ್ಣು ಮಕ್ಕಳಿಗಾಗಿ ಹಳಕಟ್ಟಿಯವರು ಪ್ರತ್ಯೇಕ ಶಾಲೆ ಪ್ರಾರಂಭಿಸಿದರು. ಬಿಜಾಪುರದಲ್ಲಿ ಬರಗಾಲ ನಿರ್ವಹಣೆ ಕೇಂದ್ರ ಸ್ಥಾಪಿಸಿದ್ದರು. ಇಂತಹ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟ ಹಳಕಟ್ಟಿಯವರು ಇಂದು ಪ್ರತಿ ಮನೆ ಮನಗಳಲ್ಲಿ ಪ್ರಾತಃ ಸ್ಮರಣೀಯರಾಗಿದ್ದಾರೆ.

ಮೈಸೂರಿನ ಪ್ರೊ. ಮೊರಬದ ಮಲ್ಲಿಕಾರ್ಜುನ ಮಾತನಾಡಿ ಕನ್ನಡದ ನೆಲದಲ್ಲಿ ಮೂರು ಬೆರಗುಗಳು ಕಾಣಿಸಿಕೊಂಡವು. ಮೊದಲನೆಯದು ೧೨ನೇ ಶತಮನದ ವಚನ ಸಾಹಿತ್ಯ. ಎರಡನೆಯದು ವಚನ ಸಂಪಾದನೆ ಮತ್ತು ಸಂಶೋಧನೆ, ಮೂರನೆಯದು ಇಪ್ಪತ್ತು ಮತ್ತು ಇಪ್ಪತ್ತೊಂದನೆ ಶತಮಾನದಲ್ಲಿ ಶರಣರ ಸಾಹಿತ್ಯವನ್ನು ಜನಮಾಸಕ್ಕೆ ತಲುಪಿಸುವುದು. ಈ ಕೆಲಸವನ್ನು ಮಾಡಿದವರು ಸುತ್ತೂರು ಡಾ. ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳು. ಶ್ರೀಗಳದ್ದು ಮಾತೃಭಾವ, ವಾತ್ಸಲ್ಯದಿಂದ ಕೂಡಿದ ವ್ಯಕ್ತಿತ್ವ. ಶ್ರೀ ಗಳಿಗೆ ೧೨ವರ್ಷಕ್ಕೆ ಪಟ್ಟಾಭಿಷೇಕವಾಗುತ್ತದೆ. ಸಮಾಜಕ್ಕೆ ವಿದ್ವತ್ ಲೋಕದ ಸಂಪತ್ತನ್ನು ದೊರೆಯುವಂತೆ ಮಾಡಿದರು. ಹಸಿವನ್ನು ಗಂಭೀರವಾಗಿ ಪರಿಗಣಿಸಿ ಹಸಿವನ್ನು ನೀಗಿಸುವ ಕೆಲಸ ಮಾಡುತ್ತಾರೆ. ಮಹಾಯುದ್ಧದಿಂದಾದ ಸಂಕಷ್ಟದಿಂದ ಹೊರಗೆ ಬರಲು ಹೊಸ ಉದ್ಯೋಗ, ವಿದ್ಯಾಬ್ಯಾಸಕ್ಕಾಗಿ ಮೈಸೂರಿನ ಕಡೆ ಬರುತ್ತಿದ್ದ ಜನಸಾಮಾನ್ಯರಿಗೆ ನೆರವಾಗಿ ಸಮಾಜಮುಖಿ ಕೆಲಸ ನಿರ್ವಹಿಸಿದವರು ಶ್ರೀಗಳು ಎಂದು ನುಡಿದರು.

ತುಮಕೂರು ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಪ್ರೊ.ಸಿದ್ದಗಂಗಪ್ಪ ಮಾತನಾಡಿ, ಸಿದ್ಧಗಂಗಾ ಮಠಾಧ್ಯಕ್ಷರಾದ ಡಾ.ಶಿವಕುಮಾರ ಮಹಾಸ್ವಾಮಿಗಳು ಇಷ್ಟಪಟ್ಟು ಖಾವಿ ಧರಿಸಿದವರಲ್ಲ. ಅದಾಗಿಯೇ ಬಂದದ್ದು. ಅವರ ಹೆಸರು ಶಿವಣ್ಣ. ಏಳನೆಯ ತರಗತಿಯಲ್ಲಿ ತಾಯಿಯನ್ನು ಕಳೆದುಕೊಂಡು ಸೆಂಟ್ರಲ್ ಕಾಲೇಜಿನಲ್ಲಿ ಮೆಟ್ರಿಕ್ ಪದವಿ ಕೊಳ್ಳುತ್ತಿರುವ ಸಮಯದಲ್ಲಿ ಉದ್ಧಾನ ಶ್ರೀಗಳು ಶಿವಕುಮಾರ ಸ್ವಾಮಿಗಳಿಗೆ ಪಟ್ಟ ಕಟ್ಟಿದರು. ಪಟ್ಟ ಪಡೆದ ಇಪ್ಪತ್ತು ವರ್ಷದವರೆಗೆ ಸ್ವಂತ ಊರಿಗೆ ಹೋದವರಲ್ಲ. ಅವರು ಸಾಧನೆಯ ಗಿರಿ ಏರಲು ಬಹಳ ಶ್ರಮ ಪಟ್ಟರು. ಶ್ರೀಗಳಿಗೆ ವಿದ್ಯಾರ್ಥಿಗಳೆಂದರೆ ಪರಮಪ್ರೀತಿ. ಅವರ ಆ ಶ್ರಮ ಅನ್ನದಾಸೋಹಕ್ಕೆ ಕಾರಣವಾಯಿತು. ಇಂದಿನ ದಿನ ಹತ್ತು ಸಾವಿರ ವಿದ್ಯಾರ್ಥಿಗಳಿಗೆ ಆಶ್ರಯ ನೀಡಿದ್ದಾರೆ. ಅವರು ಭಕ್ತರ ಬಿಕ್ಷಯಿಂದಲೇ ನಡೆದಾಡಿ ಅನ್ನ ಆಶ್ರಯಕ್ಕೆ ಸಾಕ್ಷಿಯಾಗಿ ನಡೆದಾಡುವ ದೇವರೆಂದು ಹೆಸರಾಗಿದ್ದಾರೆ. ಹಳ್ಳಿಗಾಡಿನಲ್ಲೂ ಪ್ರಾಥಮಿಕ, ಫ್ರೌಡ ಶಿಕ್ಷಣ, ಪದವಿಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ನನ್ನ ನಿಧನದ ಸುದ್ದಿಯನ್ನು ಮಕ್ಕಳ ಊಟದ ನಂತರ ತಿಳಿಸಿ ಎಂದು ನುಡಿದಂತಹ ಮಹಾನ್ ವ್ಯಕ್ತಿ ಸಿದ್ದಗಂಗಾ ಶ್ರೀಗಳು ಎಂದು ನುಡಿದರು.

ಹಿರಿಯ ಸಂಶೋಧಕ ಡಾ. ಬಿ.ರಾಜಶೇಖರಪ್ಪ ಮಾತನಾಡಿ, ಕರ್ನಾಟಕದ ಯೋಗಿವರ್ಯರಲ್ಲಿ  ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿಗಳು ಒಬ್ಬರು. ಅವರ ಭಕ್ತಿಗೆ ಯಾವ ಜಾತಿ-ಭೇದ  ಪಂಥವಿಲ್ಲ. ಇವರ ಭಕ್ತರು ವಿವಿಧ ರಾಜ್ಯಗಳಲ್ಲಿದ್ದಾರೆ. ಇವರನ್ನು ಪಂಚಗಣಾಧೀಶರಲ್ಲಿ ಒಬ್ಬರು ಎನ್ನುತ್ತಾರೆ. ಪಂಚಗಣಾಧೀಶರು ಒಂದೇ ಕಾಲದವರಲ್ಲ. ಏಕೆಂದರೆ ಕೆಂಪಯ್ಯ ಮತ್ತು ತಿಪ್ಪೇರುದ್ರಸ್ವಾಮಿಗಳು ಒಂದೇ ಕಾಲದವರು. ಉಳಿದವರು ವಚನ ಸಾಹಿತ್ಯ ಕಾಲದವರು. ಹೈದಾರಲಿ ತಿಪ್ಪೇಸ್ವಾಮಿಯ ಭಕ್ತನಾಗಿ ಅವರ ಕೃಪಾರ್ಶಿವಾದೊಂದಿಗೆ ತಿಪ್ಪುಸಾಬ್ ಹುಟ್ಟಿದ್ದು ಅವರೇ ಟಿಪ್ಪುಸುಲ್ತಾನ್ ಎಂಬ ಐತಿಹ್ಯವಿದೆ. ನಾಯಕನಹಟ್ಟಿ ಹೊರಮಠವನ್ನು ಭರಮಣ್ಣನಾಯಕ ಕಟ್ಟಿಸಿದ ಎಂದು ಇತಿಹಾಸ ದಾಖಲೆಯಿದೆ. ತಿಪ್ಪೇಸ್ವಾಮಿಗಳು ಮೂಲತಃ ಆಂಧ್ರದಿಂದ ಬಂದವರು ಅಥವಾ ತಿರುವಣ್ಣಮಲೈಯಿಂದ ಬಂದವರು ಎಂಬ ವಾಡಿಕೆಯಿದೆ. ಇವರಿಗೆ ರುದ್ರಮುನಿಸ್ವಾಮಿ, ರುದ್ರಸ್ವಾಮಿ ಎಂಬ ಹೆಸರಿಂದ ಕರೆಯುವುದನ್ನು ಸಹ ನಾವು ಕೇಳಬಹುದು ಎಂದು ನುಡಿದರು.

ಸಾಹಿತಿ ಡಾ.ಲೋಕೇಶ್ ಅಗಸನಕಟ್ಟೆ ಲಿಂಗೈಕ್ಯ ಜಗದ್ಗುರು ಶಿವಕುಮಾರ ಶಿವಾಚಾರ್ಯ ಕುರಿತು ಮಾತನಾಡುತ್ತಾ ೧೯೪೦ರಲ್ಲಿ ಪೀಠಕ್ಕೆ ಬಂದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳಿಗೆ ಬಸವಣ್ಣನವರಿಗಿದ್ದ ಸವಾಲೇ ಅವರಿಗೆ ಇತ್ತು. ವೈದಿಕ ಧರ್ಮದ ವಿರುದ್ಧ ನಡೆದ ಹೋರಾಟ ಬಸವಣ್ಣನವರ ಚಿಂತನೆಗಳು ಹಾಗೂ ಕೂಡಲಸಂಗಮದ ಅಳಿವು ಉಳಿವಿಗಾಗಿ  ಶ್ರೀಗಳು ಹೋರಾಟ ಮಾಡಿದರು.

ಶ್ರೀಗಳು ಹಳ್ಳಿ ಹಳ್ಳಿಗೆ ಹೋಗಿ ಬಸವ ತತ್ತ್ವದ ಪ್ರಚಾರ ಮಾಡಿದರು. ಅಕ್ಕನ ಬಳಗ, ಅಣ್ಣನ ಬಳಗ, ವಿಶ್ವಬಂಧು ಪ್ರಕಾಶನವನ್ನು ತರೆದರು. ಬಸವಣ್ಣ ವಿಶ್ವಗುರು ಎಂಬುದನ್ನು ತಿಳಿಸಿದರು.ಶೂನ್ಯ ಸಿಂಹಾಸನ ಎಂಬ ಪುಸ್ತಕದ ಮೂಲಕ ಬಸವಣ್ಣನವರ ನಿಜ ಸಂಗತಿಗಳನ್ನು ಬರೆಯಿಸಿದರು. ವಚನ ಧರ್ಮಸಾರ, ವಚನ ಧರ್ಮ ಶಾಸ್ತ್ರ ಮುಂತಾದ ಪುಸ್ತಕಗಳನ್ನು, ಪ್ರಕಟಿಸಿದರು. ಹಳ್ಳಿ ಹಳ್ಳಿಗಳಲ್ಲಿ ಶಾಲೆಗಳನ್ನು ಸ್ಥಾಪಿಸಿದರು. ಇಂಗ್ಲೀಷ್‌ನಲ್ಲಿ ವಚನಗಳನ್ನು ತಿಳಿಸುವ ಕೆಲಸ ಮಾಡಿದರು. ಸಿರಿಗೆರೆ ಶ್ರೀಗಳು ಪ್ರತಿಯೊಂದು ಹಂತದಲ್ಲೂ ಬಸವಣ್ಣವರ ಆದರ್ಶಗಳನ್ನು ರೂಢಿಸಿಕೊಂಡು ಉಳಿಸಿ ಬೆಳಸಿದ್ದಾರೆ. ಆ ಕೆಲಸವನ್ನು ನಾವು ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು, ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು, ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಬಿಜಾಪುರ ಶ್ರೀ ಕೈವಲ್ಯನಾಥ ಸ್ವಾಮಿಗಳು ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇSರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್, ಹರಗುರುಚರಮೂರ್ತಿಗಳು  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಡಾ.ಸಿ.ಸೋಮಶೇಖರ್ ರಚಿಸಿದ ಮಾತೆಂಬುದು ಜ್ಯೋತಿರ್ಲಿಂಗಕೃತಿ ಲೋಕಾರ್ಪಣೆ ಮಾಡಲಾಯಿತು.

ಬಾಪೂಜಿ ವಿದ್ಯಾಸಂಸ್ಥೆಯವರು ದೇವಮಾನವ ಸಿದ್ದೇಶ್ವರ ಶ್ರೀ ಕುರಿತು ರೂಪಕ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ತೋಟಪ್ಪ ಉತ್ತಂಗಿ ಸಂಗಡಿಗರು ವಚನ ಪ್ರಾರ್ಥನೆ, ಕೆ.ಬಿ.ಪರಮೇಶ್ವರಪ್ಪ ಸ್ವಾಗತಿಸಿ, ಎಸ್ ಷಡಾಕ್ಷರಯ್ಯ ವಂದಿಸಿದರು.

೧೩ನೆಯ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ನಿಮಿತ್ತ ತುಮಕೂರಿನ ಗಮಕಿ ಪೂರ್ಣಿಮಾ ವೆಂಕಟೇಶ್ ಹಾಗೂ ಗಮಕ ಕಲಾಶ್ರೀ ವಿದ್ವಾನ್ ಎಂ ಜಿ ಸಿದ್ಧರಾಮಯ್ಯನವರು ಶಿವಶರಣರ  ವಾಚನ ವ್ಯಾಖ್ಯಾನ ಕಾರ್ಯಕ್ರಮ ನಡೆಸಿಕೊಟ್ಟರು.

Share This Article
error: Content is protected !!
";