ಚಂದ್ರವಳ್ಳಿ ನ್ಯೂಸ್, ಮೈಸೂರು:
ನನ್ನನ್ನು ಜೆಡಿಎಸ್ ಪಕ್ಷದಿಂದ ಉಚ್ಚಾಟನೆ ಮಾಡುವ ತಾಕತ್ತು ನಾಯಕರಿಗಿಲ್ಲ ಎಂದು ಶಾಸಕ ಜಿಟಿ ದೇವೇಗೌಡ ಅವರು ಪಕ್ಷದ ನಾಯಕರ ವಿರುದ್ಧ ಗುಡುಗಿದ್ದಾರೆ. ಮೈಸೂರಿನ ರಾಮಲಲ್ಲಾ ಮೂರ್ತಿ ಶಿಲೆ ದೊರೆತ ಸ್ಥಳದಲ್ಲಿ ಪೂಜೆ ಸಲ್ಲಿಸಿದ ಬಳಿಕ ಬುಧವಾರ ಅವರು ಮಾತನಾಡಿ, ಶ್ರೀರಾಮನ ಸನ್ನಿಧಿಯಲ್ಲಿ ಮಾತನಾಡುತ್ತಿದ್ದೇನೆ,
ಯಾವುದೇ ಪಕ್ಷದ ನಾಯಕರು ಪಕ್ಷ ಸೇರುವಂತೆ ಯಾವುದೇ ಆಮಿಷ ಒಡ್ಡಿಲ್ಲ, ನನ್ನನ್ನು ಯಾರೂ ಸಂಪರ್ಕಿಸಿಲ್ಲ ಮತ್ತು ನಾನು ಸಹ ಯಾವುದೇ ಪಕ್ಷ ಸೇರುತ್ತಿಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ನಾನು ಬೇರೆ ಯಾವುದೇ ಪಕ್ಷದ ಸಭೆಗಳಲ್ಲಿ ಭಾಗವಹಿಸಿಲ್ಲ. ನನ್ನ ಮೇಲೆ ಆಗಲಿ ಯತ್ನಾಳ್ ಮೇಲೆ ಆಗಲಿ ಕ್ರಮ ಕೈಗೊಳ್ಳಲು ನಾಯಕರಿಗೆ ಧಂ ಬೇಕು. ಪಕ್ಷದಿಂದ ಸಸ್ಪೆಂಡ್ ಮಾಡೋಕೆ ಅಥವಾ ಉಚ್ಚಾಟನೆ ಮಾಡೋಕೆ ತಾಕತ್ ಇರಬೇಕು ಎಂದು ದೇವೇಗೌಡರು ತಿಳಿಸಿದರು.
ಪಕ್ಷ ಕಟ್ಟುವ ತಾಕತ್ ಇರೋನು ಸಸ್ಪೆಂಡ್ ಮಾಡುತ್ತಾನೆ. ಆದರೆ ನಾಯಕರಿಗೆ ಈ ತಾಕತ್ ಇಲ್ಲ. ಅದಕ್ಕೆ ಉಚ್ಚಾಟನೆ ಮಾಡುತ್ತಿಲ್ಲ ಎಂದು ಏಕ ವಚನದಲ್ಲೇ ಜೆಡಿಎಸ್ ವರಿಷ್ಠರ ವಿರುದ್ಧ ಜಿಟಿ ದೇವೇಗೌಡ ವಾಗ್ದಾಳಿ ನಡೆಸಿದರು.
ಮುಂದುವರೆದು ಮಾತನಾಡಿದ ದೇವೇಗೌಡ, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಯಾವ ಪಕ್ಷದ ಯಾವ ನಾಯಕರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಗೊತ್ತಾ? ಸಿದ್ದರಾಮಯ್ಯ ರಾಜೀನಾಮೆ ಯಾಕೆ ಕೊಡಬೇಕು. ನ್ಯಾಯಾಲಯದ ತೀರ್ಮಾನ ಬರಲಿ.
ಆಮೇಲೆ ನೋಡೋಣಾ, ತಮ್ಮ ಪಕ್ಷದಲ್ಲಿ ಯಾರ ಮೇಲೆ ಎಷ್ಟು ಎಫ್ಐಆರ್ ಗಳಿವೆ ಎಂಬುದನ್ನು ನಾಯಕರುಗಳು ಮೊದಲು ನೋಡಿಕೊಂಡು ನಂತರ ಸಿದ್ದರಾಮಯ್ಯರ ರಾಜೀನಾಮೆ ಕೇಳಲಿ ಎಂದು ದೇವೇಗೌಡರು ತಾಕೀತು ಮಾಡಿದರು.

