ಮುಡಾ ಹಗರಣ ಸಿಬಿಐ ತನಿಖೆಗೆ ವಹಿಸಲಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಮಾಧ್ಯಮಗಳಲ್ಲಿ ವರದಿಯಾಗುತ್ತಿರುವಂತೆ ಲೋಕಾಯುಕ್ತದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಕ್ಲೀನ್ ಚಿಟ್ ಪಡೆದಿರುವುದು ಒಂದು ವೇಳೆ ನಿಜವೇ ಆಗಿದ್ದರೆ ಲೋಕಾಯುಕ್ತ ತನಿಖೆಯ ಬಗ್ಗೆ ನಾವು ಎತ್ತಿದ್ದ ಆಕ್ಷೇಪ ಹಾಗೂ ಅನುಮಾನಗಳು ಸರಿ ಎಂದು ಸಾಬೀತಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಪಾರದರ್ಶಕ ತನಿಖೆಯ ದೃಷ್ಟಿಯಿಂದ ನಾವು ಮೊದಲಿನಿಂದಲೂ ಮುಡಾ ಹಗರಣದ ಕುರಿತಂತೆ ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇವೆ. ಈ ಸಂಬಂಧ ಇಷ್ಟರಲ್ಲೇ ಹೊರಬೀಳಲಿರುವ ಉಚ್ಚ ನ್ಯಾಯಾಲಯದ ತೀರ್ಪನ್ನು  ರಾಜ್ಯದ ಜನತೆ ನಿರೀಕ್ಷಿಸುತ್ತಿದ್ದಾರೆ.

- Advertisement - 

ತಮ್ಮ ಮೇಲೆ ಸಾಕ್ಷಿಸಮೇತ ಗುರುತರ ಆರೋಪ ಬಂದರೂ ತಾವೇ ನಿಯೋಜಿಸಿರುವ ಅಧಿಕಾರಿಗಳಿರುವ ಲೋಕಾಯುಕ್ತದ ಮೂಲಕ ತನಿಖೆ ಎದುರಿಸಿ ಲೋಕಾಯುಕ್ತ ಸಂಸ್ಥೆಗೆ ತಮ್ಮ ಪ್ರಭಾವ ಬಳಸಿದ ಮೊದಲ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ರಾಜ್ಯದ ಇತಿಹಾಸದಲ್ಲಿ ಕಪ್ಪು ಚುಕ್ಕೆ ಬರೆದಿದ್ದಾರೆ ಎಂದು ವಿಜಯೇಂದ್ರ ಹರಿಹಾಯ್ದಿದ್ದಾರೆ.

ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದ ರೀತಿ, ನೀತಿ, ಲೋಕಾಯುಕ್ತ ತನಿಖಾಧಿಕಾರಿಗಳ ವರ್ತನೆ ಸಂಪೂರ್ಣ ಸಂಶಯಾಸ್ಪದವಾಗಿದ್ದು ಲೋಕಾಯುಕ್ತದ ತನಿಖೆಯ ವರದಿಯು ಪಾರದರ್ಶಕವೆಂದು ಸಾಬೀತುಪಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಜಾರಿ ನಿರ್ದೇಶನಾಲಯ (ಇಡಿ) ವಸ್ತು ಸ್ಥಿತಿಯನ್ನು ಒಳಗೊಂಡ ತನ್ನ ತನಿಖೆಯ ಅಂಶವನ್ನು ಉಲ್ಲೇಖಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇದರಿಂದ ಈಗಾಗಲೇ ಗಲಿಬಿಲಿ ಗೊಂಡಿರುವ ಮುಖ್ಯಮಂತ್ರಿಗಳು ಲೋಕಾಯುಕ್ತದ ಮೂಲಕ ಕ್ಲೀನ್ ಚಿಟ್ ಪಡೆದುಕೊಳ್ಳಲು ತಮ್ಮ ಸಂಪೂರ್ಣ ಪ್ರಭಾವವನ್ನು ಬಳಸಿಕೊಂಡಿದ್ದಾರೆ ಎಂಬುದು ಲೋಕಾಯುಕ್ತ ಅಧಿಕಾರಿಗಳ ನಡೆಯಿಂದ ವೇದ್ಯವಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

- Advertisement - 

ಇಡಿ ವರದಿ ಹಾಗೂ ದೂರುದಾರರು ನೀಡಿರುವ ದಾಖಲೆಗಳನ್ನು ಆಧರಿಸಿ ಹಾಗೂ ಈಗಾಗಲೇ ಘನ ಉಚ್ಚ ನ್ಯಾಯಾಲಯದಲ್ಲಿ ರಾಜ್ಯಪಾಲರ ಪ್ರಾಸಿಕ್ಯೂಷನ್ ಅನುಮತಿಗೆ ಸಂಬಂಧಿಸಿದಂತೆ ನೀಡಲಾಗಿರುವ ತೀರ್ಪಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ ಸಿಬಿಐ ತನಿಖೆ ನಡೆದರೆ ಮಾತ್ರ ರಾಜ್ಯ ಕಂಡ ಅತಿ ಭ್ರಷ್ಟ, ಸ್ವಜನ ಪಕ್ಷಪಾತದ, ಬಹುದೊಡ್ಡ ನಿವೇಶನಗಳ ಲೂಟಿಕೋರತನ ಹಗರಣದ ಹೂರಣ ಬಯಲಿಗೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Share This Article
error: Content is protected !!
";