ಚಂದ್ರವಳ್ಳಿ ನ್ಯೂಸ್, ಬೆಂಗಳೂರು
ಅದಕ್ಷ ಆಡಳಿತ ನಡೆಸುತ್ತಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಮಾನ, ಪ್ರಾಣ, ಆಸ್ತಿಗಳಿಗೆ ರಕ್ಷಣೆ ಸಿಗದೆ, ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ, ವಂಚನೆಯಂತಹ ಪ್ರಕರಣಗಳು ಸರ್ವೇ ಸಾಮಾನ್ಯವಾಗಿದೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಒಂದು ಕಡೆ ಖಾಸಗಿ ಮೈಕ್ರೋ ಫೈನಾನ್ಸರ್ಗಳ ಹಾವಳಿ ಆದರೆ, ಮತ್ತೊಂದು ಕಡೆ ಗ್ರಾಮೀಣ ಭಾಗದ ಲಕ್ಷಾಂತರ ಹೆಣ್ಣು ಮಕ್ಕಳು ಖಾಸಗಿ ಹಣಕಾಸು ಸಂಸ್ಥೆಗಳನ್ನು ನಂಬಿ ತಮ್ಮ ಉಳಿತಾಯದ ಹಣವನ್ನು ಠೇವಣಿ ಇಟ್ಟು ಅದನ್ನು, ಕಳೆದುಕೊಂಡು ವಂಚನೆಗೆ ಒಳಗಾಗಿದ್ದಾರೆ.
ಮೋಸ ಹೋದ 7.80 ಲಕ್ಷ ಸಂತ್ರಸ್ತೆಯರು ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಿಗೆ ತಮ್ಮ ಹಣ ವಾಪಸ್ ಕೊಡಿಸಿ ಎಂದು ಕಣ್ಣೀರಿಟ್ಟು ದೂರು ನೀಡಿದ್ದಾರೆ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಅದಿಕ ಬಡ್ಡಿ ಆಸೆ ತೋರಿಸಿ, ಮಹಿಳೆಯರಿಂದ ಹಣ ಕಟ್ಟಿಸಿಕೊಳ್ಳುವ ಖಾಸಗಿ ಫೈನಾನ್ಸ್ ಏಜೆಂಟರು ರಾತ್ರೋರಾತ್ರಿ ಪರಾರಿಯಾಗುತ್ತಿದ್ದಾರೆ. ಎಷ್ಟೋ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಇನ್ನಾದರೂ ಗಂಭೀರತೆ ಅರಿತು ಬಡವರ ರಕ್ತ ಹೀರುತ್ತಿರುವ ಖಾಸಗಿ ಫೈನಾನ್ಸ್‌ಗಳಿಗೆ ಮೂಗುದಾರ ಹಾಕಬೇಕು ಎಂದು ಜೆಡಿಎಸ್ ತಾಕೀತು ಮಾಡಿದೆ.

