ಚಂದ್ರವಳ್ಳಿ ನ್ಯೂಸ್, ಹಿರಿಯೂರು
ಹಿರಿಯೂರಿನ ನೆಹರು ಮಾರುಕಟ್ಟೆಯ ಆಟೋ ಸ್ಟ್ಯಾಂಡಿನಿಂದ ನೇರವಾಗಿ ಹಾದು ಹೋದರೆ ಸಮೀಪದಲ್ಲಿ ಸಿಗುವುದೇ 15ನೇ ಶತಮಾನದ ಈ ದೇವಸ್ಥಾನ. ಶ್ರೀ ಜ್ಞಾನಭಾಸ್ಕರ ಮಹಾಸ್ವಾಮಿಗಳು ಈ ಹಿಂದೆ ದೇವಸ್ಥಾನದ ಎದುರು ಇರುವ ಕುಟೀರದಲ್ಲಿದ್ದು ದೇವಸ್ಥಾನವನ್ನು ನೋಡಿಕೊಳ್ಳುತ್ತಿದ್ದರು.
ಅವರು ವಿಶ್ವಕರ್ಮ ಸಾನಿಧ್ಯ ಸೇರಿದಾಗ ಅರ್ಚಕರಾದ ಮುರುಗೇಶ್ ಮತ್ತು . ರೇವಣ್ಣಾಚಾರ್ ರವರುಗಳು ಸ್ವಾಮಿಯ ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದು ದೇವಸ್ಥಾನವು ಒಂದು ತರಹ ಹಾಳು ಹಂಪೆಯಂತಾಗಿತ್ತು. ಇದನ್ನು ಗಮನಿಸಿದ ಕರ್ನಾಟಕ ರಾಜ್ಯ ನಿವೃತ್ತ ಪೌರ ನೌಕರರ ಮತ್ತು ಪೌರಕಾರ್ಮಿಕರ ಸಂಘ ಹಿರಿಯೂರು ರಾಜ್ಯಾಧ್ಯಕ್ಷ ಎಲ್.ನಾರಾಯಣಚಾರ್ ಇವರು ಮಧ್ಯ ಪ್ರವೇಶ ಮಾಡಿ ವಿಶೇಷ ಆಸಕ್ತಿ ವಹಿಸಿದ ನಂತರ ದೇವಸ್ಥಾನ ಜೀರ್ಣೋದ್ಧಾರ ಕಾರ್ಯ ಶೇ 95 ರಷ್ಷು ಮುಗಿದಿದ್ದು ದೇವಸ್ಥಾನಕ್ಕೆ ಕಳೆ ಬಂದು ದೇವಸ್ಥಾನದ ಒಳಭಾಗ ಮತ್ತು ಹೊರ ಭಾಗ ಲೈಟ್ ಗಳಿಂದ ಕಂಗೊಳಿಸುತ್ತಿದೆ.
ಈ ಭಾಗದ ಸದಸ್ಯರಾದ ಗಣೇಶ್ ಕದ್ದುರು ಮತ್ತು ನಗರಸಭಾ ಅಧ್ಯಕ್ಷ ಅಜಯ್ ಕುಮಾರ್ ರವರುಗಳು ಆಗಸ್ಟ್ ತಿಂಗಳಿನಲ್ಲಿ ದೇವಸ್ಥಾನಕ್ಕೆ ಬಂದು ದೇವಸ್ಥಾನದ ಮುಂಭಾಗದ ಖಾಲಿ ಜಾಗದಲ್ಲಿ ಅಭಿವೃದ್ಧಿಗೆ 6. 80 ಲಕ್ಷಗಳ ಅಂದಾಜಿಗೆ ಸಿಮೆಂಟ್ ಕಾಂಕ್ರೀಟ್ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಅವರಿಬ್ಬರಿಗೂ ತುಂಬು ಹೃದಯದ ಅಭಿನಂದನೆಗಳು ಸಲ್ಲುತ್ತವೆ. ಅಲ್ಲದೆ, ಪ್ರತಿ ಸೋಮವಾರ ರಾತ್ರಿ 7:30 ರಿಂದ 9:00ರ ವರೆಗೆ ನಡೆಯುವ ಸ್ವಾಮಿಯ ವಿಶೇಷ ಪೂಜೆಗೆ ಇತ್ತೀಚೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಬೇರೆ ನಗರ, ಪಟ್ಟಣಗಳಿಂದಲೂ ಸಹ ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸಿ ಸ್ವಾಮಿಗೆ ಪೂಜೆ ಮತ್ತು ಪ್ರಸಾದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ವಿಪರ್ಯಾಸ ಸಂಗತಿ ಏನೆಂದರೆ, ಹಿರಿಯೂರಿನ ಅನೇಕ ನಾಗರಿಕ ಬಂಧುಗಳಿಗೆ ಈ ಐತಿಹಾಸಿಕ 15 ನೇ ಶತಮಾನದ ದೇವಸ್ಥಾನ ಗೊತ್ತಿಲ್ಲದೇ ಇರುವುದು ತುಂಬಾ ನವೀನ ಸಂಗತಿ..! ಎಂದು ಹೇಳುವ ನಾರಾಯಣಾಚಾರ್ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಶ್ರೀ ತೇರು ಮಲ್ಲೇಶ್ವರ ಸ್ವಾಮಿ ದೇವಾಲಯ ಕ್ಕಿಂತಲೂ ಪುರಾತನ ದೇವಸ್ಥಾನ ಇದಾಗಿದ್ದು, ಮುಂದಿನ ತಿಂಗಳು ಬರುವ ಮಹಾ ಶಿವರಾತ್ರಿ ಹಬ್ಬವನ್ನು ವೈಭವಯುತವಾಗಿ ಅತ್ಯಂತ ಸಡಗರದಿಂದ ಆಚರಿಸಲು ಉದ್ದೇಶಿಸಲಾಗಿದೆ.

ಇದಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳ ಸಹಕಾರ ಅತ್ಯಗತ್ಯ ಎಂದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯ ಪ್ರಮುಖರಾದ ಎಲ್.ನಾರಾಯಣಾಚಾರ್ ಹಾಗೂ ಹಿರಿಯೂರಿನ ಪುರಸಭೆಯ ಮಾಜಿ ಅಧ್ಯಕ್ಷರು ಮತ್ತು ದೇವಸ್ಥಾನದ ವ್ಯವಸ್ಥಾಪಕ ಎ. ಮಂಜುನಾಥ್ ರವರುಗಳು ತಿಳಿಸಿದ್ದಾರೆ.

