ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಜೆಪಿ ರಾಜ್ಯಾಧ್ಯಕ್ಷ ಬಿವೈ. ವಿಜಯೇಂದ್ರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ವೇಣುಕಲ್ ಗುಡ್ಡದ ಕೆ. ಅಭಿನಂದನ್ ಅವರನ್ನು ಹಿರಿಯೂರು ತಾಲ್ಲೂಕು ನೂತನ ಮಂಡಲ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಸೇರಿದಂತೆ ಎಲ್ಲರಿಗೂ ಅಚ್ಚರಿ ಬೆಳವಣಿಗೆಯಾಗಿದೆ.
ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷರನ್ನಾಗಿ ಕೆ. ಅಭಿನಂದನ್ ರವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ಇದ್ದಾಗ ವಿಜಯೇಂದ್ರ ಜೊತೆಯಲ್ಲಿ ಆಗೊಮ್ಮೆ ಈಗೊಮ್ಮೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದ ಅಭಿನಂದನ್ ಅವರು ಎಂದೂ ಪಕ್ಷದ ಕಾರ್ಯ ಚಟುವಟಿಕೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ ಎನ್ನುವುದು ವಿಶೇಷ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ದಿಢೀರ್ ತೀರ್ಮಾನ ಮುಂದೆ ಯಾವ ಫಲ ನೀಡುತ್ತದೆ ಕಾದು ನೋಡಬೇಕಿದೆ.
ಸದ್ಯಕ್ಕೆ ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿನಂದನ್ ಆಯ್ಕೆ ಬೂದಿ ಮುಚ್ಚಿದ ಕೆಂಡವಾಗಿದೆ.
ಜಿಲ್ಲಾ ಸಮಿತಿ, ಹಾಲಿ ಕಾರ್ಯಕಾರಿ ಸಮಿತಿ, ಹಾಲಿ ಮಾಜಿ ಶಾಸಕರುಗಳ ಅಭಿಪ್ರಾಯ ಸಂಗ್ರಹ ಮಾಡಿದಂತೆ ಕಾಣುತ್ತಿಲ್ಲ. ಈ ಅಚ್ಚರಿ ಆಯ್ಕೆಯಲ್ಲಿ ಸಂಸದ ಗೋವಿಂದ ಕಾರಜೋಳ ಕೂಡ ಮೌನಿಯಾಗಿದ್ದಾರೆ. ಇದೆಲ್ಲವನ್ನೂ ಬಿಜೆಪಿ ಮುಖಂಡರೇ ಹೇಳಬೇಕಾಗಿದೆ.
ಈ ಕುರಿತು ನೂತನ ಅಧ್ಯಕ್ಷ ಕೆ. ಅಭಿನಂದನ್ ಪ್ರತಿಕ್ರಿಯಿಸಿ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಪಕ್ಷದ ವರಿಷ್ಠರಿಗೆ, ರಾಜ್ಯಾಧ್ಯಕ್ಷರಿಗೆ, ಸ್ಥಳೀಯ ನಾಯಕರಿಗೆ ಹಾಗೂ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆಗಳು. ನನಗೆ ಕೊಟ್ಟಿರುವ ಜವಾಬ್ದಾರಿಯನ್ನು ಪಕ್ಷದ ನೆಲೆಗಟ್ಟಿನಲ್ಲಿ ನಿಭಾಯಿಸಲಾಗುವುದು.
ಎಲ್ಲಾ ಹಿರಿಯ ಹಾಗೂ ಕಿರಿಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗುವುದು. ಶೀಘ್ರದಲ್ಲೇ ಕ್ಷೇತ್ರಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂದಿನ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ತಿಳಿಸಿದರು.

