ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ತಾಲ್ಲೂಕಿನ ರೈತರಿಗೆ ಕೃಷಿ ಇಲಾಖೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಬಬ್ಬೂರು ಫಾರಂನಲ್ಲಿ ಅಟಲ್ ಭೂಜಲ ಯೋಜನೆಯಡಿ ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ನಿರ್ವಹಣೆ, ಜಲ ಭದ್ರತಾ ಯೋಜನೆ ಸಿದ್ದಪಡಿಸುವುದು ಮತ್ತು ನೀರಿನ ಬೇಡಿಕೆ ಕಡಿಮೆ ಮಾಡುವ ಸೂಕ್ಷ್ಮ ನೀರಾವರಿ ತಾಂತ್ರಿಕತೆಗಳ ಕುರಿತು ಆಯೋಜಿಸಲಾದ ತರಬೇತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೇರಿಯುವ ಮೂಲಕ ರಾಜ್ಯ ಕಾರ್ಯಕ್ರಮ ನಿರ್ವಹಣೆ ಘಟಕ, ಅಟಲ್ ಭೂಜಲ ಯೋಜನೆ ಬೆಂಗಳೂರಿನ ಕೇಂದ್ರ ಕಚೇರಿಯ ಸಮಾಜಿಕ ಅಭಿವೃದ್ದಿ ತಜ್ಞರಾದ ಪ್ರವೀಣ್ ಅವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ನೀರು ಎಂಬುದು ಮನುಷ್ಯ, ಪ್ರಾಣಿ, ಪಕ್ಷಿ, ಗಿಡ, ಮರ ಸೇರಿದಂತೆ ಎಲ್ಲ ಜೀವ ಸಂಕುಲದ ಉಳಿವಿಗೆ ಅತ್ಯವಶ್ಯಕವಾಗಿರುವ ದ್ರವರೂಪದ ಅಂಶ. ಭೂಮಿಯ ಮೇಲೆ ಮತ್ತು ಭೂಮಿಯ ಒಳಗೆ ಲಭ್ಯವಾಗುವ ಶೇ.೨೫ ರಷ್ಟು ನೀರು ಮಾತ್ರ ಉಪಯೋಗಕ್ಕೆ ಯೋಗ್ಯವಾಗಿದೆ ಎಂದು ತಿಳಿಸಿದರು.
ಉಪಯೋಗಕ್ಕೆ ಯೋಗ್ಯವಿರುವ ಈ ಅಲ್ಪ ಪ್ರಮಾಣದ ನೀರನ್ನು ನಾವೆಲ್ಲರೂ ಜವಾಬ್ಧಾರಿಯಿಂದ ಕಾಪಾಡಿಕೊಳ್ಳಬೇಕಿದೆಂದರು. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಅಂತರ್ಜಲವನ್ನು ಬಳಸುವ ದೇಶವಾಗಿದ್ದು, ಚೀನಾ ಮತ್ತು ಅಮೇರಿಕಾ ಎರಡು ದೇಶಗಳು ಬಳಸುವ ಅಂತರ್ಜಲವನ್ನು ಒಟ್ಟುಗೂಡಿಸಿದರೆ ಅದಕ್ಕಿಂತ ಹೆಚ್ಚು ಅಂತರ್ಜಲವನ್ನು ಭಾರತ ದೇಶ ಬಳಸುತ್ತಿದೆ. ಕಳೆದ ೪೦ ವರ್ಷಗಳಲ್ಲಿ ಅಂತರ್ಜಲದ ಬಳಕೆ ಹೆಚ್ಚಾಗುತ್ತಿದ್ದು, ಅಂತರ್ಜಲ ಸುಸ್ಥಿರತೆ ವರ್ತಮಾನದ ಬಹುದೊಡ್ಡ ಸವಾಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
೨೦೧೭ರಲ್ಲಿ ನಡೆಸಲಾದ ಅಂತರ್ಜಲ ಸಮೀಕ್ಷೆಯ ಪ್ರಕಾರ ನಮ್ಮ ದೇಶದ ಗುಜರಾತ್, ಮಹಾರಾಷ್ಟ, ಮಧ್ಯಪ್ರದೇಶ, ಹರಿಯಾಣ, ಉತ್ತರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳ ೧೧೮೬ ತಾಲೂಕುಗಳಲ್ಲಿ ಅಂತರ್ಜಲದ ಅತಿ ಬಳಕೆಯಾಗುತ್ತಿರುವುದು ಕಂಡುಬಂದಿರುತ್ತದೆ. ಇಂತಹ ಅಪಾಯಕಾರಿ ಪರಿಸ್ಥಿತಿಯನ್ನು ತಡೆಯಲು, ಅಂತರ್ಜಲದ ಅತೀ ಬಳಕೆ ತಗ್ಗಿಸಲು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಸುಸ್ಥಿರ ಅಂತರ್ಜಲ ನಿರ್ವಹಣೆ ಸಾಧಿಸಲು ಅಟಲ್ ಭೂಜಲ ಯೋಜನೆ ಜಾರಿಗೊಳಿಸಲಾಗಿದೆ ಎಂದು ಅವರು ವಿವರಿಸಿದರು.
ಮೊಳಕಾಲ್ಮೂರು ತಾಲ್ಲೂಕು ಹೊರೆತುಪಡಿಸಿ ಚಿತ್ರದುರ್ಗ ಜಿಲ್ಲೆಯ ೫ ತಾಲ್ಲೂಕುಗಳು ಸೇರಿದಂತೆ ಕರ್ನಾಟಕ ರಾಜ್ಯದ ೧೪ ಜಿಲ್ಲೆಗಳ ೪೧ ತಾಲ್ಲೂಕುಗಳ ೧೧೯೯ ಗ್ರಾಮ ಪಂಚಾಯತಿಗಳಲ್ಲಿ ಅಂತರ್ಜಲ ಮಿತಿ ಮೀರಿ ಬಳಕೆಯಾಗುತ್ತಿರುವ ಪರಿಣಾಮ ಅಂತರ್ಜಲ ಮಟ್ಟ ಅಪಾಯಕಾರಿ ಪರಿಸ್ಥಿತಿ ತಲುಪಿದ್ದು, ಈ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಅಟಲ್ ಭೂಜಲ ಯೋಜನೆ ಅನುಷ್ಠಾನಗೊಳ್ಳುತ್ತಿದೆ ಎಂದು ಅವರು ಹೇಳಿದರು.
ಈ ಗ್ರಾಮ ಪಂಚಾಯತಿಗಳಲ್ಲಿ ಸಮದಾಯದ ಸಹಭಾಗಿತ್ವದೊಂದಿಗೆ ಅಂತರ್ಜಲದ ಸಮರ್ಪಕ ನಿರ್ವಹಣೆಗಾಗಿ ನಾವು ಮತ್ತು ನೀವೆಲ್ಲರೂ ಕೈಜೊಡಿಸಿ ಕಾರ್ಯನಿರ್ವಹಸಬೇಕಾಗಿದೆ ಎಂದು ಕರೆ ನೀಡಿದರು.
ಒಟ್ಟಾರೆ ಅಂತರ್ಜಲ ಅತಿಯಾಗಿ ಬಳಕೆಯಾಗುತ್ತಿರುವ ಪ್ರದೇಶಗಳಲ್ಲಿ ಅತಿ ಬಳಕೆ ತಪ್ಪಿಸುವುದು ಹಾಗೂ ಸುಸ್ಥಿರ ಅಂತರ್ಜಲ ನಿರ್ವಹಣಾ ಪದ್ದತಿಗಳ ಮೂಲಕ ಅಂತರ್ಜಲ ಸಂಪನ್ಮೂಲಗಳನ್ನು ಸುಧಾರಿಸುವುದು ಅಟಲ್ ಭೂಜಲ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಜಿಲ್ಲಾ ಕಾರ್ಯಕ್ರಮ ನಿರ್ವಹಣೆ ಘಟಕ, ಅಟಲ್ ಭೂಜ ಯೋಜನೆಯ ರವಿಕುಮಾರ್ ಡಿ ಅಟಲ್ ಭೋಜಲ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅಂತರ್ಜಲ ಸಂಪನ್ಮೂಲ ಅತ್ಯಂತ ಅಮೂಲ್ಯವಾದುದ್ದು, ಅತಿಯಾಗಿ ಬಳಸಿದರೆ ಅಂತರ್ಜಲ ಸಂಪನ್ಮೂಲವೂ ಸಹ ಕ್ಷೀಣಗೊಳ್ಳಬಹುದು ಅಥವಾ ಮುಗಿದುಹೋಗಬಹುದು. ಆದ್ದರಿಂದ ಕೃಷಿ, ಗೃಹ ಬಳಕೆ, ಪಶುಸಂಗೋಪನೆ, ಕೈಗಾರಿಕೆ ಮುಂತಾದ ಉದ್ದೇಶಗಳಿಗಾಗಿ ಬಳಸುತ್ತಿರುವ ನೀರಿನ ಬಳಕೆಯಲ್ಲಿ ಮಿತವ್ಯಯ ಸಾಧಿಸುವುದು ಅತಿ ಮುಖ್ಯ. ಆದ್ದರಿಂದ ಕೃಷಿಯಲ್ಲಿ ನೀರಿನ ಬೇಡಿಕೆಗೆ ಸಂಬಂಧಿಸಿದಂತೆ ಮಿತಬಳಕೆಯ ಉಪಕ್ರಮಗಳಾದ ಹನಿ ನೀರಾವರಿ, ತುಂತುರು ನೀರಾವರಿ, ಮಲ್ಚಿಂಗ್/ಭೂಹೊದಿಕೆ ಮುಂತಾದ ಕ್ರಮಗಳನ್ನು ಕೈಗೊಳ್ಳಬೇಕು. ಇದರಿಂದ ನೀರು ಪೋಲಾಗುವುದನ್ನು ತಡೆಯಬಹುದು ಹಾಗೂ ನೀರನ್ನು ಉಳಿತಾಯ ಮಾಡಬಹುದು. ಇದರ ಜೊತೆಗೆ ಹೆಚ್ಚು ನೀರನ್ನು ಬೇಡುವ ಬೆಳೆಗಳಿಗೆ ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬೆಳೆ ಪದ್ದತಿಯಲ್ಲಿ ಪರಿವರ್ತನೆ ಮಾಡಿಕೊಳ್ಳಬೇಕೆಂದರು.
ನೀರನ್ನು ಮಿತವಾಗಿ ಬಳಕೆ ಮಾಡುವುದರ ಜೊತೆಗೆ ನೀರನ್ನು ಸಂಗ್ರಹಿಸುವ ಹಾಗೂ ಭೂಮಿಯೊಳಗೆ ನೀರನ್ನು ಇಂಗಿಸುವ, ಮರುಪೂರೈಕೆ ಕ್ರಮಗಳನ್ನೂ ಕೈಗೊಳ್ಳಬೇಕು. ಇಲ್ಲದೇ ಹೋದರೆ ಅಂತರ್ಜಲ ಬತ್ತಿ ಹೋಗುತ್ತದೆ. ಭೂಮಿಗೆ ನೀರನ್ನು ಇಂಗಿಸಲು ಅಥವಾ ನೀರನ್ನು ಮರುಪೂರೈಸಲು ಕೆರೆ, ಕುಂಟೆ, ಚೆಕ್ ಡ್ಯಾಂ, ನಾಲಾಬದು, ಹೊಂಡ, ಗೊಕಟ್ಟೆ, ಇಂಗುಕೆರೆ, ಕೃಷಿ ಹೊಂಡ, ಮಳೆ ನೀರು ಸಂಗ್ರಹಣೆ ಮುಂತಾದ ರಚನೆಗಳು ಹಾಗೂ ಕ್ರಮಗಳ ಮೂಲಕ ನೀರನ್ನು ಭೂಮಿಗೆ ಇಂಗಿಸಬೇಕು. ಇಂತಹ ಕ್ರಮಗಳ ಮೂಲಕ ಅಂತರ್ಜಲ ಸಂಪನ್ಮೂಲಗಳ ಬೇಡಿಕೆ ಮತ್ತು ಪೂರೈಕೆಯಲ್ಲಿ ಸಮತೋಲನ ಹಾಗೂ ಸುಸ್ಥಿರತೆ ಸಾಧಿಸಬೇಕು ಎಂದು ಅವರು ತಿಳಿಸಿದರು.
ಹೆಚ್ಚು ನೀರು ಬೇಡುವ ಬೆಳೆಗಳಾದ ಬಾಳೆ ಮತ್ತು ಅಡಕೆ ಬದಲಾಗಿ ಕಡಿಮೆ ನೀರನ್ನು ಬೇಡುವ ಬೆಳೆಗಳಾದ ದಾಳಿಂಬೆ, ಪಪ್ಪಾಯ ಬೆಳೆಯುವುದು. ಮಿಶ್ರಬೆಳೆ/ ಅಕ್ಕಡಿ ಬೆಳೆಗೆ ಆದ್ಯತೆ ನೀಡುವುದು, ಹೆಚ್ಚು ಕಾಲಾವಧಿ ತೆಗೆದುಕೊಳ್ಳುವ ಬೆಳೆಗಳ ಬದಲಾಗಿ ಕಡಿಮೆ ಕಲಾವಧಿಯಲ್ಲಿ ಬೆಳೆಯುವ ಸಿರಿಧಾನ್ಯಗಳು, ಹೆಸರುಕಾಳು, ಹುರುಳಿ, ಕಡಲೆ ಬೆಳೆಗಳನ್ನು ಬೆಳೆಯುವುದು ಉತ್ತಮವೆಂದು ಕಿವಿ ಮಾತು ಹೇಳಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಟ್ಟಾರೆ ಲಭ್ಯವಿರುವ ನೀರು ಹಾಗೂ ಬಳಕೆಯಾಗುವ ನೀರಿನ ನಡುವೆ ಉಂಟಾಗುವ ಅಸಮತೋಲನವನ್ನು ಅಥವಾ ಕೊರತೆಯನ್ನು ಸರಿದೂಗಿಸಲು ಪೂರಕವಾದಂತಹ ನೀರಿನ ಉಳಿಕೆ, ಸದ್ಭಳಕೆ ಕ್ರಮಗಳನ್ನು ಹಾಗೂ ಇದರ ಜೊತೆಗೆ ನೀರಿನ ಮರುಪೂರಣ, ನೀರಿನ ಸಂಗ್ರಹ ಮುಂತಾದ ಕ್ರಮಗಳನ್ನು ಯೋಜಿಸಿ ಜಲ ಭದ್ರತಾ ಯೋಜನೆ ತಯಾರಿಸಬೇಕೆಂದರು.
ನೆಟಾಫಿಮ್ ಸಂಸ್ಥೆಯ ಬೇಸಾಯ ಶಾಸ್ತ್ರಜ್ಞ ಆಂಜಿನಪ್ಪ ಅವರು ಕೃಷಿ ಹಾಗೂ ತೋಟಗಾರಿಕಾ ಬೆಳಗಳಲ್ಲಿ ನೀರಿನ ಮಿತ ಬಳಕೆ ಹಾಗೂ ಉತ್ಪಾದಕತೆ ಹೆಚ್ಚಿಸಲು ಸ್ಪ್ರಿಂಕ್ಲರ್ ಮತ್ತು ಹನಿ ನೀರಾವರಿ ತಾಂತ್ರಿಕತೆ, ರಸಾವರಿ ತಂತ್ರಜ್ಞಾನ ಮತ್ತು ಅವುಗಳ ನಿರ್ವಹಣೆ ಕುರಿತು ವಿಷಯ ಮಂಡನೆ ಮಾಡಿದರು.
ಫೈಲೊ ಸಂಸ್ಥೆಯ ಪ್ರತಿನಿಧಿ ಡಾ. ಕಿರಣ್ ಬಿ.ಎಂ ಅವರು ಮಾತನಾಡಿ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ದಿ ಪಡಿಸಿದ ಉಪಕರಣಗಳ ಬಳಕೆಯಿಂದ ಸಂಪನ್ಮೂಲದ ಸಮರ್ಪಕ ಬಳಕೆ ಹಾಗೂ ಹವಾಮಾನ ಮುನ್ಸೂಚನೆ ದೊರೆಯುವುದರಿಂದ ಕೃಷಿಯಲ್ಲಿ ಉತ್ಪಾದಕತೆ ಹೆಚ್ಚಿಸಬಹುದೆಂದರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥ ರಜನೀಕಾಂತ ಇವರು ಕಾರ್ಯಕ್ರಮ ನಿರೂಪಣೆ ಮಾಡುತ್ತಾ ಅಟಲ್ ಭೂಜಲ ಯೋಜನೆಯ ಯಶಸ್ವಿ ಅನುಷ್ಟಾನವು ಸಾಮಾಜಿಕ ಕಾಳಜಿಯಿಂದ ಎಲ್ಲರ ಸಹಭಾಗಿತ್ವದಿಂದ ಮಾತ್ರ ಸಾಧ್ಯವಿರುವುದರಿಂದ ಸದರಿ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.
ತರಬೇತಿಯ ನಂತರ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಗುಡಿಹಳ್ಳಿ ಗ್ರಾಮದ ಪ್ರಗತಿಪರ ರೈತ ಬಡಗಿ ರಂಗಣ್ಣರವರನ್ನು ಗೌರವಿಸಲಾಯಿತು. ಆಸಕ್ತ ರೈತರೊಂದಿಗೆ ಬಬ್ಬೂರಿನ ಜವಳಿ ಫಾರಂಗೆ ಭೇಟಿ ನೀಡಿದಾಗ, ಸದರಿ ಫಾರಂನಲ್ಲಿ ಸಮಗ್ರ ಕೃಷಿ ಪದ್ದತಿಯ ಕಾರ್ಯಚಟುವಟಿಕೆಗಳ ಕುರಿತು ಸುಧಾ ಅವರು ಮನವರಿಕೆಮಾಡಿಕೊಟ್ಟರು.

