ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಬೊಕ್ಕಸ ಬರಿದು ಮಾಡಿಕೊಂಡ ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡಲು ಹಣವಿಲ್ಲದೆ ವಿವಿಗೆ ಬೀಗ ಹಾಕಿ, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಗ್ರಾಮೀಣ ಭಾಗಕ್ಕೂ ಕೂಡ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡುವ ದಿಶೆಯಲ್ಲಿ ಬಿಜೆಪಿ ಸರ್ಕಾರ ಕೊಪ್ಪಳ ಸೇರಿ 9 ವಿಶ್ವವಿದ್ಯಾಲಯ ಆರಂಭಿಸಲು ಅಧಿವೇಶನದಲ್ಲಿ ವಿಧೇಯಕ ಮಂಡಿಸಿ, ಆಡಳಿತಾತ್ಮಕ ಅನುಮೋದನೆ ನೀಡಿತ್ತು.
ಅದರಂತೆ ಕೊಪ್ಪಳ ವಿವಿ ಕಾರ್ಯಾರಂಭವಾಗಿತ್ತು. ಆದರೆ, ಎರಡೇ ವರ್ಷದಲ್ಲಿ ವಿವಿ ಮುಚ್ಚಲು ಸಿದ್ದರಾಮಯ್ಯ ಅವರ ಸರ್ಕಾರ ತೀರ್ಮಾನ ಮಾಡಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವಾದ ಕೊಪ್ಪಳ ವಿವಿ ಮುಚ್ಚಿದ ಪರಿಣಾಮ 12,000 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ ಎಂದು ಬಿಜೆಪಿ ತಿಳಿಸಿದೆ.
ರಾಜ್ಯ ಸರ್ಕಾರ ತಕ್ಷಣವೇ ಈ ಕೆಟ್ಟ ನಿರ್ಧಾರವನ್ನು ಕೈ ಬಿಟ್ಟು 9 ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿವಿಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದು ಬಿಜೆಪಿ ಆಗ್ರಹ ಮಾಡಿದೆ.

