ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಾವು ಕೃಷಿಕರ ಪರ, ರೈತ ಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ. ಇಲ್ಲಿಯವರೆಗೂ ರೈತರನ್ನ ಕಡೆಗಣಿಸಿದ್ದೆ ಹೆಚ್ಚು ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದರು.
ಈ ತಿಂಗಳ(ಫೆಬ್ರವರಿ) ಆರಂಭದಲ್ಲಿ ಶ್ರೀರಂಗಪಟ್ಟಣದಲ್ಲಿ ವಿದ್ಯುತ್ ಅಭಾವದ ಕಾರಣದಿಂದ ರೈತರು ಸೆಸ್ಕ್ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಈಗ ಅದೇ ಘಟನೆ ಚಾಮರಾಜನಗರ ನಗರದ ಹನೂರಿನಲ್ಲಿ ನಡೆದಿರುವುದು ಕಾಂಗ್ರೆಸ್ ಸರ್ಕಾರ ಮತ್ತೊಂದು ಗ್ಯಾರಂಟಿ ಯಾಗಿದೆ ಎಂದು ನಿಖಿಲ್ ದೂರಿದರು.
ರೈತರ ಬಗ್ಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಹೆಜ್ಜೆಗಳು ಕೇವಲ ಅಸಮರ್ಥವಾಗಿದೆ ಬಿರು ಬೇಸಿಗೆ ಆರಂಭದಲ್ಲೇ ಅನ್ನದಾತರನ್ನ ಕಡೆಗಣಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ಮಟ್ಟಕ್ಕೆ ತಲುಪಬಹುದು ಎಂದು ಆತಂಕ ಎಲ್ಲರಲ್ಲೂ ಕಾಡುತ್ತಿದೆ. ಈಗಾಗಲೇ ಈ ಸರ್ಕಾರ ರೈತವಿರೋಧಿ ಎಂದು ಜನತೆಗೆ ಅರ್ಥವಾಗಿದೆ ಎಂದು ಅವರು ತಿಳಿಸಿದರು.
ಮಾನ್ಯ ಸಿಎಂ ಸಿದ್ದರಾಮಯ್ಯನವರೇ, ಕೇಂದ್ರದ ರೈತಸ್ನೇಹಿ ಬಜೆಟ್‌ನ್ನು ಹೀಯಾಳಿಸುವುದು, ಬಿಟ್ಟರೇ ಬೇರೆ ರೈತ ಪರ ಕೆಲಸ ಮಾಡಿರುವುದು ನೋಡಲೇ ಇಲ್ಲ, ಕೇವಲ ನಿಮ್ಮ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಜನತೆಗೆ ಅನ್ನ ದೊರಕುವುದಿಲ್ಲ. ಅನ್ನದಾತರ ಕನಸಿಗೆ ಕೊಳ್ಳಿ ಇಡುವ ಕಾಂಗ್ರೆಸ್ ಸರ್ಕಾರದ ಹೆಜ್ಜೆಗಳು ಕೇವಲ ರೈತವಿರೋಧಿ ಎನ್ನುವುದು ಜನತೆಗೆ ಈಗಾಗಲೇ ಅರ್ಥವಾಗಿದೆ ಎಂದು ನಿಖಿಲ್ ಟೀಕಿಸಿದರು.
ಬೇಸಿಗೆ ಶುರುವಾಗುವ ಮೊದಲೇ ಈ ಸರ್ಕಾರ ಎಚ್ಚೆತ್ತುಕೊಳ್ಳಬೇಕು, ರೈತರ ಸಮುದಾಯವನ್ನು ಸಂಕಷ್ಟಕ್ಕೆ ಸಿಲುಕದಂತೆ ಯೋಜನೆಯನ್ನು ರೂಪಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

