ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಪರಶುರಾಮಪುರ ಹೋಬಳಿಯ ತೊರೆಬೀರನಹಳ್ಳಿ ಗ್ರಾಮದಲ್ಲಿ ಶನಿವಾರ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ತೊಗರಿ ಕಡ್ಡಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಟ್ರ್ಯಾಕ್ಟರ್‌ನಲ್ಲಿದ್ದ ತೊಗರಿಕಡ್ಡಿ ಬೆಂಕಿಯಲ್ಲಿ ಸುಟ್ಟುಹೋಗಿದೆ.
ಚಾಲಕ ಕೂಡಲೇ ಜಾಗೃತಗೊಂಡು ಸಾರ್ವಜನಿಕರ ಸಹಾಯದಿಂದ ಟ್ರಾಲಿಯಲ್ಲಿದ್ದ ತೊಗರಿ ಕಡ್ಡಿಯನ್ನು ನೆಲಕ್ಕೆ ಎಸೆದಿದ್ದಾನೆ.
ಗ್ರಾಮದ ಶಿವಮ್ಮ ಮತ್ತು ಹನುಮಂತರಾಯ ಎಂಬುವವರಿಗೆ ಸೇರಿದ ಜಮೀನಿನಲ್ಲಿದ್ದ ತೊಗರಿ ಕಡ್ಡಿಗಳನ್ನು ಟ್ರ್ಯಾಕ್ಟರ್‌ನಲ್ಲಿ ತರುವಾಗ ಈ ಅವಘಡ ಸಂಭವಿಸಿದೆ. ಆಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.