ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ದೂರು ನೀಡಲು ಠಾಣೆಗೆ ಹೋದ ಸಂದರ್ಭದಲ್ಲಿ ಸಂತ್ರಸ್ತೆಗೆ ಸಹಾಯ ಮಾಡುವ ಸೋಗಿನಲ್ಲಿ ರೇಪ್ ಮಾಡಿದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ ಸೇರಿ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅರುಣ್ ಹಾಗೂ ಸಂತ್ರಸ್ತೆಯ ಸ್ನೇಹಿತನನ್ನು ಅಪ್ರಾಪ್ತೆ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೊಮ್ಮನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ 17 ವರ್ಷದ ಸಂತ್ರಸ್ತೆ ಯುವತಿ ನೆಲೆಸಿದ್ದಳು. ಈ ವೇಳೆ ನೆರೆಮನೆಯ ವಿವಾಹಿತ ವ್ಯಕ್ತಿಯ ಪರಿಚಯವಾಗಿದೆ. ಆರೋಪಿಯು ಪ್ರೀತಿಸಿ ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿ, ಬಾಲಕಿಯ ಮೇಲೆ ನಿರಂತರ ಆತ್ಯಾಚಾರವೆಸಗಿ ಹಲ್ಲೆ ಮಾಡಿದ್ದಾನೆ. ಈ ಬಗ್ಗೆ ನೊಂದ ಅಪ್ರಾಪ್ತೆ ಯುವತಿ ತನ್ನ ತಾಯಿ ಬಳಿ ಅತ್ಯಾಚಾರಕ್ಕೊಳಗಾದ ಮಾಹಿತಿಯನ್ನು ಹೇಳಿಕೊಂಡಿದ್ದಳು ಎಂದು ಬೊಮ್ಮನಹಳ್ಳಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದೇ ವೇಳೆ ದೂರು ನೀಡಲು ಹೋದ ಸಂತ್ರಸ್ತೆ ಯುವತಿಯನ್ನು ಕಾನ್ಸ್ಟೇಬಲ್ ಅರುಣ್ ಪರಿಚಯಿಸಿಕೊಂಡು ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದ್ದಲ್ಲದೆ, ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಕಳೆದ ಡಿಸೆಂಬರ್ನಲ್ಲಿ ಬಿಟಿಎಂ ಲೇಔಟ್ ಓಯೋ ರೂಮಿಗೆ ಬಾಲಕಿಯನ್ನು ಕರೆಯಿಸಿಕೊಂಡ ಕಾನ್ಸ್ಟೇಬಲ್ ಮದ್ಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿ ಆಕೆ ಮೇಲೆ ಆತ್ಯಾಚಾರವೆಸಗಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ತನ್ನ ಬಳಿ ಖಾಸಗಿ ವಿಡಿಯೋಗಳಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತೆಯ ತಾಯಿ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸ್ ಮತ್ತು ಈಕೆ ಸ್ನೇಹಿತ ಈ ಇಬ್ಬರ ವಿರುದ್ಧ ಪೋಕ್ಸೊ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಮೈಕೋ ಲೇಔಟ್ ಪೊಲೀಸರು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದರು. ಈ ಸಂಬಂಧ ತನಿಖೆ ನಡೆಸಿ, ಇಬ್ಬರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿರುವುದಾಗಿ ಬೊಮ್ಮನಹಳ್ಳಿ ಪೊಲೀಸರು ಮಾಹಿತಿ ನೀಡಿದ್ದಾರೆ.

