ವಿವಿ ಸಾಗರಕ್ಕೆ ನೀರು ಮರು ಹಂಚಿಕೆ ಮಾಡಲು ಸಿರಿಗೆರೆ ನ್ಯಾಯಪೀಠಕ್ಕೆ ಕೊಂಡೊಯ್ದ ರೈತರು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಣಿ ವಿಲಾಸ ಸಾಗರಕ್ಕೆ ಹೆಚ್ಚುವರಿ ನೀರು ಹಂಚಿಕೆ ಮಾಡುವುದು ಸೇರಿದಂತೆ ವಾಣಿ ಸಕ್ಕರೆ ಕಾರ್ಖಾನೆ ಪುನರ್ ಆರಂಭ ಮಾಡುವಂತೆ ವಿವಿ ಸಾಗರ ಹಾಗೂ ಭದ್ರಾ ಮೇಲ್ದಂಡೆ ಅಚ್ಚುಕಟ್ಟುದಾರ ರೈತರ ಹಿತರಕ್ಷಣಾ ಸಮಿತಿಯ ಮುಖಂಡರು ಸಿರಿಗೆರೆಯ ತರಳಬಾಳು ಮಠದ ಡಾ.ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯುವ ನ್ಯಾಯಪೀಠಕ್ಕೆ ಪ್ರಕರಣವನ್ನು ರೈತರು ಕೊಂಡೊಯ್ದಿದ್ದಾರೆ.

ವಿವಿ ಸಾಗರ ಅಣೆಕಟ್ಟೆ ನೀರಿನ ಲಭ್ಯತೆಯ ದೃಷ್ಟಿಯಿಂದ ಹಿರಿಯೂರು, ಚಳ್ಳಕೆರೆ. ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಹಾಗೂ ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ರೈತರು ಕಬ್ಬು ಬೆಳೆಯಲಾರಂಭಿಸಿದಾಗ ಅಚ್ಚುಕಟ್ಟು ಪ್ರದೇಶ ವಿಸ್ತಾರಗೊಂಡು ಪ್ರಸ್ತುತ 40,000 ಎಕರೆ ಅಂತರ್ಜಲ ಹೆಚ್ಚಳದಿಂದ ನೇರವಾಗಿ ಮತ್ತು ಅಷ್ಟೇ ಪ್ರಮಾಣದ ಜಮೀನು ಪರೋಕ್ಷವಾಗಿ ನೀರಾವರಿಗೆ ಒಳಪಟ್ಟಿರುತ್ತದೆ.

- Advertisement - 

ವಿವಿ ಸಾಗರದಿಂದ ಹಿರಿಯೂರು, ಚಿತ್ರದುರ್ಗ, ಹೊಳಲ್ಕೆರೆ, ಚಳ್ಳಕೆರೆ ಮತ್ತು ಡಿ.ಆರ್.ಡಿ.ಓ. ನಾಯಕನಹಟ್ಟಿಗೆ ಕುಡಿಯುವ ನೀರು ಒದಗಿಸುತ್ತಿದೆ. 1972 ರಲ್ಲಿ ಸಹಕಾರ ಕ್ಷೇತ್ರದಲ್ಲಿ ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಗೊಂಡಿತ್ತು. ಆದರೆ ನೀರಿನ ಕೊರತೆಯಿಂದಾಗಿ ಸಕ್ಕರೆ ಕಾರ್ಖಾನೆ 1985ರಲ್ಲಿ ಸಮಾಪನೆಗೊಂಡಿದೆ. ಸಕ್ಕರೆ ಕಾರ್ಖಾನೆ 2 ರಾಷ್ಟ್ರೀಯ ಹೆದ್ದಾರಿಗಳ ಮಧ್ಯೆ ಇದ್ದು, ಸುಮಾರು 271 ಎಕರೆ ವಿಸ್ತೀರ್ಣವುಳ್ಳದ್ದಾಗಿದೆ.

ಜೊತೆಗೆ ಡಿಸ್ಟಲರಿ ಸಹ ಹೊಂದಿತ್ತು. ವಿವಿ ಸಾಗರ ನೀರಿನ ಬೇಡಿಕೆಗೆ ಅನುಗುಣವಾಗಿ ಕನಿಷ್ಠ 9 ಟಿಎಂಸಿ ನೀರು ತುಂಬಿಸಬೇಕಾಗಿದೆ. ಜಲಾಶಯಕ್ಕೆ ಬರುವ ನದಿ ಪಾತ್ರದ ನೀರಿನ ಮೇಲ್ಬಾಗದಲ್ಲಿ ಅನೇಕ ಬ್ಯಾರೇಜ್‌ಗಳು, ಚೆಕ್ ಡ್ಯಾಂಗಳು ನಿರ್ಮಾಣವಾಗಿದ್ದು, ಜಲಾಶಯಕ್ಕೆ ಹರಿಯುವ ನೀರಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ. ಈ ಜಲಾಶಯಕ್ಕೆ ಶಾಶ್ವತ ನೀರಿನ ವ್ಯವಸ್ಥೆ ಮಾಡಬೇಕೆಂದು ರೈತರು 5 ದಶಕಗಳಿಂದ ಹೋರಾಟ ಮಾಡುತ್ತಿದ್ದೇವೆ. ಅಂತಿಮವಾಗಿ 2008ರಿಂದ 543 ದಿನಗಳ ನಿರಂತರ ಹೋರಾಟದ ಫಲವಾಗಿ 5 ಟಿಎಂಸಿ ನೀರನ್ನು ವಾಣಿ ವಿಲಾಸ ಸಾಗರಕ್ಕೆ ಹರಿಸುವ ಅಂದಿನ ಸರ್ಕಾರ ತಿರ್ಮಾನ ಕೈಗೊಂಡು ಸರ್ಕಾರಿ ಆದೇಶ ಮಾಡಿಸಿ ಈ ಭಾಗದ ಜನರಿಗೆ ನೀರಿನ ಬವಣೆ ನೀಗಿಸಿತ್ತು.

- Advertisement - 

ನಂತರ ಬಂದ ಸರ್ಕಾರ 5 ಟಿಎಂಸಿ ನೀರಿನ ಪ್ರಮಾಣದ ಆದೇಶವನ್ನು ಮಾರ್ಪಡಿಸಿ ವಿ.ವಿ.ಸಾಗರಕ್ಕೆ 2 ಟಿ.ಎಂ.ಸಿ. ನೀರನ್ನು ಹಂಚಿಕೆ ಮಾಡಿದೆ. ಅಚ್ಚುಕಟ್ಟು ಪ್ರದೇಶದ ತೋಟದ ಬೆಳೆಗಳಿಗೆ ನೀರು ನಿಗದಿಯಾಗಿರುವುದಿಲ್ಲ. ಹಂಚಿಕೆ ಆಗಿರುವ 2 ಟಿ.ಎಂ.ಸಿ. ನೀರು ಕುಡಿಯಲು, ಆವಿ, ಇಂಗುವಿಕೆಗೆ ಮಾತ್ರ ಸಾಕಾಗುತ್ತದೆ ಉಳಿದಂತೆ ಅಚ್ಚುಕಟ್ಟು ಪ್ರದೇಶದ ವ್ಯವಸಾಯಕ್ಕೆ ಹಾಗೂ ಕುಡಿಯುವ ನೀರಿನ ಯೋಜನೆಗೆ ಸಾಕಾಗುವುದಿಲ್ಲ ಹಾಗಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆದು ನಿಂತಿದ್ದ 30,000 ಎಕರೆ ತೋಟದ ಬೆಳೆಗಳು ಒಣಗಿ 15,000 ಎಕರೆಗೆ ಬಂದು ನಿಂತಿವೆ.

ಡಿ.ಆರ್.ಡಿ.ಓ. ಹಾಗೂ ಇತರ ಕೈಗಾರಿಕೆಗಳಿಗೆ ನೀರು ಒದಗಿಸಲು ವೇದಾವತಿ ನದಿ ತಟಗಳಿಗೆ ಕುಡಿಯುವ 2 ಟಿಎಂಸಿ ನೀರಿನ ಜೊತೆಗೆ ಹೆಚ್ಚವರಿಯಾಗಿ ಕನಿಷ್ಠ 10 ಟಿಎಂಸಿ ನೀರನ್ನು ಭದ್ರಾ ಮತ್ತು ಎತ್ತಿನಹೊಳೆ ಯೋಜನೆಗಳ ಮೂಲಕ ಮರು ಹಂಚಿಕೆ ಮಾಡಲು ಮನವಿ ಮಾಡುತ್ತೇವೆ. ತಾವುಗಳು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಮಹತ್ವದ ಕಾರ್ಯ ಮಾಡಿಸಬೇಕೆಂದು ರೈತರು ಸ್ವಾಮೀಜಿಗಳಲ್ಲಿ ಹಕ್ಕೊತ್ತಾಯ ಮಂಡಿಸಿದ್ದಾರೆ.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿಹೊಳೆ, ಕಾಡು ಮನೆಹೊಳೆ, ಕೇರಿಹೊಳೆ, ವಂಗದ ಹಳ್ಳದಲ್ಲಿ ದೊರೆಯುವ ನೀರನ್ನು ಮಳೆಗಾಲದ ಪ್ರವಾಹದ ಸಂದಭ್ರಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಜೂನ್ ನಿಂದ ನಂವೆಂಬರ್‌ವೋಳಗೆ 135 ದಿನಗಳ ಕಾಲ ನೀರನ್ನು ಹರಿಸುವುದಾಗಿದೆ. ಎತ್ತಿಹೊಳೆ ಕಾಮಗಾರಿ ಬೇಲೂರು ತಾಲ್ಲೂಕಿನ ಬೆಟ್ಟದ ಆಲೂರಿನ ಕಾಗೆದ ಹಳ್ಳಕ್ಕೆ ಎತ್ತಿನ ಹೊಳೆ ಯೋಜನೆ ಮೂಲಕ ನೀರು ಹರಿಸಿದರೆ ನೈಸರ್ಗಿಕವಾಗಿ ವೇದಾವತಿ ನದಿ ಕಣಿವೆಯಲ್ಲಿ ನೀರು ಹರಿದು ವಾಣಿ ವಿಲಾಸ ಸಾಗರ ಸೇರುತ್ತದೆ. ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಿ ವಾಣಿ ವಿಲಾಸ ಸಾಗರಕ್ಕೆ ಎತ್ತಿನ ಹೊಳೆ ನೀರನ್ನು ಹರಿಸಲು ತಾವು ಪ್ರಯತ್ನಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ರೈತರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದ ಸ್ವಾಮೀಜಿಗಳು ಮಾರ್ಚ್-3 ರಂದು ನಡೆಯಲಿರುವ ನ್ಯಾಯ ಪಂಚಾಯಿತಿಗೆ ಪ್ರಕರಣ ಮುಂದೂಡಿದ್ದಾರೆ.
ರೈತ ಮುಖಂಡರಾದ ಹೆಚ್ ಆರ್ ತಿಮ್ಮಯ್ಯ
, ಎಸ್ ಬಿ ಶಿವಕುಮಾರ್, ಎಂ ಟಿ ಸುರೇಶ, ಆರ್ ಕೆ ಗೌಡ, ನಾರಾಯಣಾ ಆಚಾರ್, ಗೀತಾಮ್ಮ, ಕಲಾವತಿ, ಎಚ್ ವಿ ಗಿರೀಶ್, ಎಂ ಜಿ ರಂಗಧಮಯ್ಯ ಹಾಗೂ ಚಿಕ್ಕಬ್ಬಿಗೆರೆ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

 

 

Share This Article
error: Content is protected !!
";