ಕೋಟೆ ನಾಡಿನಲ್ಲಿ ಬರೋಬ್ಬರಿ 5 ಸಾವಿರ ಹುದ್ದೆಗಳ ಭರ್ತಿ: ಜಿಲ್ಲಾಧಿಕಾರಿ ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬರುವ ಮಾರ್ಚ್ 01 ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೃಹತ್ ಉದ್ಯೋಗ ಆಯೋಜಿಸಲಾಗಿದ್ದು, 50 ಕ್ಕೂ ಹೆಚ್ಚು ಕಂಪನಿಗಳು 5 ಸಾವಿರಕ್ಕೂ ಹೆಚ್ಚು ಉದ್ಯೋಗ ನೀಡಲು ಆಗಮಿಸುತ್ತಿದ್ದು, ಉದ್ಯೋಗ ಮೇಳವನ್ನು ಶಿಸ್ತುಬದ್ಧವಾಗಿ ಆಯೋಜಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.  
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಕೌಶಲ್ಯ ಮಿಷನ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 50ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಜಿಲ್ಲೆಯು ಯುವ ಜನತೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ಹೆಚ್ಚು ಅಭ್ಯರ್ಥಿಗಳಿಗೆ ಉದ್ಯೋಗ ಸೃಜಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಮೊದಲು ಆನ್ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಂಡವರಿಗೆ ಸಂದರ್ಶನಕ್ಕೆ ಮೊದಲ ಆದ್ಯತೆ ಕೊಟ್ಟು, ಆನ್ಲೈನ್ನಲ್ಲಿ ನೊಂದಣಿ ಮಾಡಿಕೊಳ್ಳದವರ ನೋಂದಣಿಗೆ ಹೆಚ್ಚಿನ ಮೈದಾನದಲ್ಲಿ ಹೆಚ್ಚಿನ ಕೌಂಟರ್ಗಳನ್ನು ಸ್ಥಾಪಿಸಿ, ತ್ವರಿತವಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ, ನೋಂದಣಿ ಸಂಖ್ಯೆ, ಟೋಕನ್ಗಳನ್ನು ನೀಡಬೇಕು.

ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು, ಲಭ್ಯವಿರುವ ಹುದ್ದೆಗಳು ಸೇರಿದಂತೆ ಕಂಪನಿಗಳ ಆಯ್ಕೆ ಕುರಿತು ಪ್ರದರ್ಶನ ಫಲಕಗಳಲ್ಲಿ ಮಾಹಿತಿ ಪ್ರದರ್ಶಿಸಬೇಕು. ಇದರಿಂದ ಉದ್ಯೋಗ ಮೇಳದಲ್ಲಿ ಆಗುವ ಅನಗತ್ಯ ಗೊಂದಲ ತಪ್ಪಿಸಬೇಕು ಎಂದು ಹೇಳಿದರು.
ಉದ್ಯೋಗ ಮೇಳವನ್ನು ಪರಿಣಾಮಕಾರಿಯಾಗಿ ಆಯೋಜಿಸಲು ಈಗಾಗಲೇ 7 ಉಪಸಮಿತಿಗಳನ್ನು ರಚಿಸಲಾಗಿದೆ. ಉಪಸಮಿತಿಗಳು ತಮ್ಮ ಹಂತದಲ್ಲಿಯೇ ಪ್ರತ್ಯೇಕ ಸಭೆ ನಡೆಸಿ, ಸಮಿತಿಗಳು ತಮಗೆ ವಹಿಸುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಉಪ ಸಮಿತಿಯ ಮುಖ್ಯಸ್ಥರು ಬಗ್ಗೆ ನಿರ್ದೇಶನ ನೀಡಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಕ್ರಮವಹಿಸಬೇಕು.  ಯಾವುದೇ ತರಹದ ವ್ಯತ್ಯಾಸ ಆಗದಂತೆ ನೋಡಿಕೊಳ್ಳಬೇಕು. ಭಾಗವಹಿಸುವ ಪ್ರತಿಷ್ಠಿತ ಕಂಪನಿಗಳಿಗೆ, ಕಂಪನಿಗಳ ಪ್ರತಿನಿಧಿಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಉದ್ಯೋಗ ಆಕಾಂಕ್ಷಿಗಳಿಗೆ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕು.

ಅಭ್ಯರ್ಥಿಗಳಿಗೆ ಯಾವ ಸಂಖ್ಯೆಯ ಮಳಿಗೆಯಲ್ಲಿ ಯಾವ ಕಂಪನಿ, ಹುದ್ದೆಗಳು ಲಭ್ಯವಿದೆ ಎಂಬುದರ ಬಗ್ಗೆ ಧ್ವನಿವರ್ಧಕ ಮೂಲಕ ಮಾಹಿತಿ ನೀಡುವ ವ್ಯವಸ್ಥೆ ಆಗಬೇಕು.  ಅಭ್ಯರ್ಥಿಗಳು ಅನಗತ್ಯವಾಗಿ ಗುಂಪು ಗುಂಪಾಗಿ ಓಡಾಡಲು ಅವಕಾಶ ಮಾಡಿಕೊಡದೆ, ಶಿಸ್ತುಬದ್ಧವಾಗಿ ಸಂದರ್ಶನಕ್ಕೆ ಭಾಗಿಯಾಗಲು, ತಂಡಗಳನ್ನು ರೂಪಿಸಿ, ಅಭ್ಯರ್ಥಿಗಳಿಗೆ ಮಾಹಿತಿ ದೊರಕುವ ರೀತಿ ಕೆಲಸ ಮಾಡಬೇಕು.

 ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ ಮಾತನಾಡಿ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗವು 2022-23ನೇ ಸಾಲಿನಲ್ಲಿ ಸಿಎಂಕೆಕೆವೈ ಯೋಜನೆಯಡಿ ಸ್ವಯಂ ಉದ್ಯೋಗ ಟೈಲರ್ ಜಾಬ್ರೂಲ್ನಲ್ಲಿ ತರಬೇತಿ ಪಡೆದ 149 ಫಲಾನುಭವಿಗಳಿಗೆ 149 ಹೊಲಿಗೆ ಯಂತ್ರ ಹಾಗೂ ಟೂಲ್ಕಿಟ್ಗಳನ್ನು ಸಂಕಲ್ಪ ಯೋಜನೆಯಡಿ ತರಬೇತಿ ಪಡೆದ ಫಲಾನುಭವಿಗಳಿಗೆ ವಿತರಿಸಲು ಈಗಾಗಲೇ ಸರಬರಾಜು ಮಾಡಲಾಗಿದೆ. ವಿಶ್ವಕರ್ಮ ಯೋಜನೆಯಲ್ಲಿ ತರಬೇತಿ ಪಡೆದ ಫಲಾನುಭವಿಗಳನ್ನು ಹೊರತುಪಡಿಸಿದ ಫಲಾನುಭವಿಗಳಿಗೆ ವಿತರಿಸಲು ಸೂಚಿಸಲಾಗಿದೆ. ತರಬೇತಿ ಸಂಸ್ಥೆಗೆ ತರಬೇತಿ ಪಡೆದ ಫಲಾನುಭವಿಗಳ ದಾಖಲಾತಿ ಸಲ್ಲಿಸಿದ ನಂತರ ವಿತರಿಸಲು ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

 ವಿಶ್ವಕರ್ಮ ಯೋಜನೆಯಡಿ ಮೂರನೇ ಹಂತದಲ್ಲಿ ಪರಿಶೀಲಿಸಲಾದ 39,625 ಫಲಾನುಭವಿಗಳಲ್ಲಿ 34,234 ಫಲಾನುಭವಿಗಳಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಸ್ತುತ ದರ್ಜಿ, ಬಡಿಗಿ ಮತ್ತು ಮೆಷನ್ನಗಳಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವ ಬಗ್ಗೆ ದಿಶಾ ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಮಾಹಿತಿ ನೀಡಿರುತ್ತಾರೆ. ಮತ್ತು ಪ್ರಸ್ತುತ 376 ಫಲಾನುಭವಿಗಳಿಗೆ ತರಬೇತಿ ನೀಡಬೇಕಾಗಿದ್ದು.

ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಕಡಿಮೆ ಇರುತ್ತದೆ. ಪ್ರಸ್ತುತ ವಿಶ್ವಕರ್ಮ ಯೋಜನೆಯ ನಿರ್ವಹಣೆಗೆ ಜಿಲ್ಲಾ ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಡೇನಲ್ಮ್ ಯೋಜನೆ, ಪಿಎಂ ಸ್ವನಿಧಿ ಮತ್ತು ಸ್ವನಿಧಿ ಸೇ ಸಮೃದ್ಧಿ ಯೋಜನೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಉದ್ಯೋಗ ಮೇಳದ ಪೋಸ್ಟರ್ಗಳನ್ನು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ನಾಯ್ಕ್, ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕಿ ಗಾಯತ್ರಿ, ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಆನಂದ್, ಜಂಟಿ ಕೃಷಿನಿರ್ದೇಶಕ ಮಂಜುನಾಥ್, ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

 

- Advertisement -  - Advertisement - 
Share This Article
error: Content is protected !!
";